ಹಾವೇರಿ: ‘ಇದು ಸಾಧ್ಯ, ನಾನೂ ಮಾಡಬಲ್ಲೆ’ (It is possible, I can do it) ಎಂಬ ಮಂತ್ರವನ್ನು ನೀವು ಸದಾ ಜಪಿಸಬೇಕು. ಇದರಿಂದ ಆತ್ಮವಿಶ್ವಾಸ ಮತ್ತು ಸಕಾರಾತ್ಮಕ ಮನೋಭಾವ ಬೆಳೆಯುತ್ತದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜು ಅಭಿಪ್ರಾಯಪಟ್ಟರು.
‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ವತಿಯಿಂದ ವಿಜಯಪುರದ ‘ಚಾಣಕ್ಯ ಕರಿಯರ್ ಅಕಾಡೆಮಿ’ ಸಹಯೋಗದಲ್ಲಿ ನಗರದ ಹುಕ್ಕೇರಿ ಮಠದ ಶಿವಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಭಾನುವಾರ ಏರ್ಪಡಿಸಿದ್ದ ‘ಸ್ಪರ್ಧಾ ಮಾರ್ಗ’– ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ಮಾರ್ಗದರ್ಶನ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
‘ನಮ್ಮ ‘ಸಾಮರ್ಥ್ಯ’ ಮತ್ತು ‘ಬಲಹೀನತೆ’ ಏನು ಎಂಬುದನ್ನು ಮೊದಲು ಅರಿತುಕೊಳ್ಳಬೇಕು. ನಂತರ ಸರಿಯಾದ ನಿರ್ಧಾರವನ್ನು ಸರಿಯಾದ ಸಮಯದಲ್ಲಿ ತೆಗೆದುಕೊಳ್ಳುವುದು ಬಹಳ ಮುಖ್ಯ. ಅದು ನಿಮ್ಮ ಜೀವನದ ದಿಕ್ಕನೇ ಬದಲಿಸುತ್ತದೆ. ಬೇರೆಯವರಿಗೆ ಹೋಲಿಕೆ ಮಾಡಿಕೊಳ್ಳುವುದನ್ನು ಬಿಟ್ಟು, ನಮಗೆ ನಾವೇ ಸ್ಪರ್ಧಿಗಳಾಗಬೇಕು.‘ಅಸಾಧ್ಯ’ ಎಂಬ ಪದ ನಿಮ್ಮ ಡಿಕ್ಷನರಿಯಲ್ಲೇ ಇರಬಾರದು. ಕಷ್ಟವೆಂದರೆ ಎಲ್ಲವೂ ಕಷ್ಟವೆ. ಸಾಧನೆ ಮಾಡುವವರು ಕಷ್ಟಪಡಲು ತಯಾರಿರಬೇಕು ಎಂದು ಸಲಹೆ ನೀಡಿದರು.
ಆರೋಗ್ಯದ ಕಡೆ ಗಮನವಿರಲಿ:‘ಮಾನಸಿಕ ಮತ್ತು ದೈಹಿಕವಾಗಿ ನಾವು ಸದೃಢರಾಗಿದ್ದೇವೆ. ಬೌದ್ಧಿಕವಾಗಿ ಸದೃಢರಾಗಬೇಕಿದೆ. ‘ಜನರಲ್ ನಾಲೆಡ್ಜ್’ ಅನ್ನು ಒಂದೇ ದಿನ ಗಳಿಸಲು ಸಾಧ್ಯವಿಲ್ಲ. ಅದು ನಿರಂತರ ಪ್ರಕ್ರಿಯೆಯಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಊಟ, ನಿದ್ದೆ, ಮನರಂಜನೆ ತ್ಯಾಗ ಮಾಡಿ. ಆದರೆ, ಆರೋಗ್ಯದ ಕಡೆ ಗಮನವಿರಲಿ. ಆರಂಭ ಶೂರತ್ವವಿದ್ದರೆ ಸಾಕಾಗುವುದಿಲ್ಲ. ನಿಮ್ಮ ಕಣ್ಣಿನಲ್ಲಿ ಗುರಿ ಬಿಟ್ಟು ಬೇರೆ ಏನೂ ಕಾಣಿಸಬಾರದು’ ಎಂದು ಪರೀಕ್ಷಾರ್ಥಿಗಳನ್ನು ಹುರಿದುಂಬಿಸಿದರು.
‘ನಾನೂ ಹಳ್ಳಿಗಾಡಿನಲ್ಲಿ ಹುಟ್ಟಿ, ಕೃಷಿ ಕೆಲಸಗಳನ್ನು ಮಾಡುತ್ತಲೇ 7ನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದೆ. ನಂತರ ಅಪ್ಪನೊಂದಿಗೆ ಹಠಕ್ಕೆ ಬಿದ್ದು 8ನೇ ತರಗತಿಯಲ್ಲಿ ಇಂಗ್ಲಿಷ್ ಮಾಧ್ಯಮ ಆಯ್ಕೆ ಮಾಡಿಕೊಂಡೆ. ಪಿಯುನಲ್ಲಿ ‘ವಿಜ್ಞಾನ’ ಆಯ್ಕೆ ಮಾಡಿಕೊಂಡೆ. ಅಲ್ಲಿ ನನಗೆ ಇಂಗ್ಲಿಷ್ ಬಗೆಗಿನ ಭಯ ಮಾಯವಾಯಿತು. ಸೇನೆ ಸೇರಬೇಕು ಎಂಬ ಹಂಬಲದಿಂದಏರ್‌ಫೋರ್ಸ್‌ನಲ್ಲಿ ನೌಕರಿ ಮಾಡಿದೆ. ನಂತರ ಕಾಲೇಜಿನಲ್ಲಿ ಉಪನ್ಯಾಸಕನಾಗಿ ದುಡಿದೆ. ದುಡಿಮೆ ಮಾಡತ್ತಲೇ ದೂರ ಶಿಕ್ಷಣದ ಮೂಲಕ ಹಲವಾರು ಡಿಗ್ರಿಗಳನ್ನು ಸಂಪಾದಿಸಿದೆ. ನನ್ನ ಸಾಧನೆಯಲ್ಲಿ ಯೋಗ, ಧ್ಯಾನದ ಪಾತ್ರವೂ ದೊಡ್ಡದು’ಎಂದು ತಮ್ಮ ಜೀವನದ ಏಳು–ಬೀಳುಗಳ ನಡುವೆಯೂ ಸಾಧನೆ ಮಾಡಿರುವುದನ್ನು ಎಸ್ಪಿ ದೇವರಾಜು ತಿಳಿಸಿದರು.
ಪುಸ್ತಕ ಬಿಡುಗಡೆ: ಚಾಣಕ್ಯ ಕರಿಯರ್ ಅಕಾಡೆಮಿಯವರ ‘ಐಎಎಸ್ ಮತ್ತು ಕೆಎಎಸ್’ ಪರೀಕ್ಷಾ ಮಾರ್ಗದರ್ಶಿ ಕೈಪಿಡಿ ಪುಸ್ತಕವನ್ನು ಎಸ್ಪಿ ಕೆ.ಜಿ.ದೇವರಾಜು ಬಿಡುಗಡೆ ಮಾಡಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಚಾಣಕ್ಯ ಕರಿಯರ್ ಅಕಾಡೆಮಿ ನಿರ್ದೇಶಕ ಎನ್.ಎಂ.ಬಿರಾದಾರ, ನಿವೃತ್ತ ಕ್ಯಾಪ್ಟನ್ ಸಿ.ಎಸ್.ಆನಂದ್, ‘ಬುಲಬುಲೆ ಸ್ಕೂಲ್ ಆಫ್ ಬ್ಯಾಂಕಿಂಗ್’ ನಿರ್ದೇಶಕ ಡಾ.ಗುರುರಾಜ ಬುಲಬುಲೆ, ಕಾರವಾರದ ಉಪವಿಭಾಗಾಧಿಕಾರಿ ಶಂಕರ ಬೆಳ್ಳುಬ್ಬಿ, ಪ್ರಜಾವಾಣಿ–ಡೆಕ್ಕನ್‌ಹೆರಾಲ್ಡ್ ಪ್ರಸರಣ ವಿಭಾಗದ ಎಜಿಎಂ ಶಿವರಾಜ ನರೋಣ, ಹಿರಿಯ ವ್ಯವಸ್ಥಾಪಕ ಅಶೋಕ ಪಾಟೀಲ, ಜಾಹೀರಾತು ವಿಭಾಗದ ಎಜಿಎಂ ದಿವಾಕರ್ ಭಟ್ ಇದ್ದರು. ಶಿವಪ್ರಕಾಶ ಬಳಿಗಾರ್ ಕಾರ್ಯಕ್ರಮ ನಿರೂಪಿಸಿದರು.
ಚಾಣಕ್ಯ ಕರಿಯರ್ ಅಕಾಡೆಮಿ ವತಿಯಿಂದ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಮಾರಾಟ ಮಾಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.