ADVERTISEMENT

ಹಿರೇಕೆರೂರು: ಇದು ಕನ್ನಡದ ತೇರು, ಕೈ ಮುಗಿದು ಏರು

ಹಿರೇಕೆರೂರಿನಿಂದ ಬೆಳಗಾವಿಗೆ ಸಂಚರಿಸುವ ಬಸ್‌ಗೆ ಸಿಂಗಾರ

ಶಂಕರ ಕೊಪ್ಪದ
Published 1 ನವೆಂಬರ್ 2023, 7:57 IST
Last Updated 1 ನವೆಂಬರ್ 2023, 7:57 IST
ಹಿರೇಕೆರೂರು ತಾಲ್ಲೂಕು ಸಾರಿಗೆ ವಿಭಾಗದ ನಿರ್ವಾಹಕ ಶಶಿಧರ್ ಭೋಸ್ಲೆ ಅವರು ಸರ್ಕಾರಿ ಬಸ್‌ ಅನ್ನು ಕನ್ನಡ ತೇರನ್ನಾಗಿ ಪರಿವರ್ತಿಸಿರುವುದು (ಸಂಗ್ರಹ ಚಿತ್ರ)
ಹಿರೇಕೆರೂರು ತಾಲ್ಲೂಕು ಸಾರಿಗೆ ವಿಭಾಗದ ನಿರ್ವಾಹಕ ಶಶಿಧರ್ ಭೋಸ್ಲೆ ಅವರು ಸರ್ಕಾರಿ ಬಸ್‌ ಅನ್ನು ಕನ್ನಡ ತೇರನ್ನಾಗಿ ಪರಿವರ್ತಿಸಿರುವುದು (ಸಂಗ್ರಹ ಚಿತ್ರ)   

ಹಿರೇಕೆರೂರು: NWKRTC ತಾಲ್ಲೂಕು ಸಾರಿಗೆ ವಿಭಾಗದ ನಿರ್ವಾಹಕ ಶಶಿಧರ್ ಭೋಸ್ಲೆ ಅವರು ಕಳೆದ ಮೂರು ವರ್ಷಗಳಿಂದ ತಮಗೆ ನೀಡಿರುವ ಸಾರಿಗೆ ಬಸ್‌ ಅನ್ನು ಕನ್ನಡ ತೇರನ್ನಾಗಿ ಪರಿವರ್ತಿಸಿ, ಒಂದು ತಿಂಗಳ ಕಾಲ ಈ ಬಸ್‌ನಲ್ಲಿ ಪ್ರಯಾಣಿಕರಿಗೆ ನಾಡು-ನುಡಿ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ‘ಶ್ರೀ ದುರ್ಗಾ ಎಕ್ಸ್‌ಪ್ರೆಸ್‌’ ಎಂಬ ಹೆಸರಿನ ಹಾವೇರಿ ವಿಭಾಗದ, ಹಿರೇಕೆರೂರು ಘಟಕದ ಬಸ್‌ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶೇಷವಾಗಿ ಅಲಂಕೃತಗೊಳ್ಳುತ್ತದೆ. ಇದು ‘ಕನ್ನಡ ರಥ’ ಎಂದೇ ಖ್ಯಾತಿ ಗಳಿಸಿಕೊಂಡು ಕನ್ನಡಾಭಿಮಾನವನ್ನು ಜಾಗೃತಗೊಳಿಸುತ್ತಿದೆ. ಈ ಬಸ್‌ನಲ್ಲಿ ಪ್ರಯಾಣಿಸಿದರೆ ಸಾಕು, ಕರ್ನಾಟಕದ 31 ಜಿಲ್ಲೆಗಳ ಪ್ರವಾಸಿ ತಾಣಗಳ ಚಿತ್ರಗಳು ರಾಜ್ಯದ ಚಿತ್ರಣವನ್ನು ಕಣ್ಮುಂದೆ ತರುತ್ತದೆ. ರಾಜ್ಯದ ಪ್ರಮುಖ ಕವಿಗಳು, ಮಹಾಪುರುಷರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳು, ಪ್ರಮುಖ ನದಿಗಳು, ಪ್ರತಿ ಜಿಲ್ಲೆಯಲ್ಲಿನ ತಾಲ್ಲೂಕುಗಳು ಸೇರಿ ಬಸ್​ ಸಂಪೂರ್ಣ ಕನ್ನಡಮಯವಾಗಿದೆ.

ಕನ್ನಡ ತೇರಾಗಿರುವ ಈ ಬಸ್‌ ನೋಡುವರ ಕಣ್ಣಿಗೆ ಕನ್ನಡ ಹಬ್ಬವನ್ನುಂಟು ಮಾಡುತ್ತದೆ. ಕನ್ನಡಾಂಬೆ ಭುವನೇಶ್ವರಿ ಮೂರ್ತಿ ಇರುವ ಈ ಬಸ್‌ನಲ್ಲಿ ಪ್ರತಿ ಆಸನದಲ್ಲಿ ಕನ್ನಡ ಪುಸ್ತಕ ಇರಿಸಲಾಗಿದೆ. ದಿನಪತ್ರಿಕೆ, ವಾರ ಪತ್ರಿಕೆ ಸೇರಿದಂತೆ ಕನ್ನಡದ ಮಹಾ ನಟರ, ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತರ ಭಾವಚಿತ್ರಗಳು ಇಲ್ಲಿ ಕಾಣಸಿಗುತ್ತವೆ.

ADVERTISEMENT

ಅಕ್ಟೋಬರ್ ತಿಂಗಳ ಸಂಬಳ ‘ಕನ್ನಡ ರಥ’ಕ್ಕೆ ಅರ್ಪಣೆ: ಪ್ರತಿ ವರ್ಷ ನ. 1ರಂದು ₹ 40 ಸಾವಿರ ಖರ್ಚು ಮಾಡಿ ಸಾರಿಗೆ ಬಸ್‌ ಅನ್ನು ಕನ್ನಡ ರಥವಾಗಿ ಕಳೆದ ಮೂರು ವರ್ಷಗಳಿಂದ ಮಾರ್ಪಾಡು ಮಾಡಿಕೊಂಡು ಬರುತ್ತಿದ್ದಾರೆ. 2014ರಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿಯ ಕಲಘಟಗಿ ವಿಭಾಗದಲ್ಲಿ ಸೇವೆಗೆ ಸೇರಿದ ಇವರು 2020 ರಿಂದ ಬಸ್‌ನಲ್ಲಿ ಪ್ರಯಾಣಿಸುವ ಜನರಲ್ಲಿ ಕನ್ನಡಾಭಿಮಾನ ಜಾಗೃತಗೊಳಿಸುತ್ತಿದ್ದಾರೆ.

ಪ್ರಯಾಣದುದ್ದಕ್ಕೂ ಕನ್ನಡದ ಹಾಡು: ಬಸ್‌ನಲ್ಲಿ ಟೇಪ್ ರೆಕಾರ್ಡರ್ ಸಹ ಅಳವಡಿಸಲಾಗಿದೆ. ಕನ್ನಡ ಪ್ರೇಮ ಮೆರೆಯುವ ಗೀತೆಗಳು ಪ್ರಯಾಣಿಕರ ಕಿವಿಗೆ ಮುದ ನೀಡುತ್ತವೆ. ಈ ಬಸ್ ಹಿರೇಕೆರೂರಿಂದ ಬೆಳಗಾವಿ ವಿಭಾಗಕ್ಕೆ ಪ್ರತಿದಿನ ಸಂಚರಿಸುತ್ತದೆ. ಸಂಚರಿಸುವ ಮಾರ್ಗದುದ್ದಕ್ಕೂ ಕನ್ನಡದ ಹಾಡುಗಳನ್ನು ಪ್ರಯಾಣಿಕರಿಗೆ ಕೇಳಿಸಲಾಗುತ್ತದೆ.

ಈ ಬಾರಿ ವಿಶೇಷ: ಜಲ ಸಂರಕ್ಷಣೆ ಮತ್ತು ಪರಿಸರ ರಕ್ಷಣೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ಬಾರಿ ಜಲ ಸಂರಕ್ಷಣೆ ಮತ್ತು ಪರಿಸರವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಚಿತ್ರಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ. ಕನ್ನಡ ವರ್ಣಮಾಲೆಗಳ ಚಿತ್ರವನ್ನು ಪ್ರಯಾಣಿಕರ ಸೀಟ್‌ಗಳ ಹತ್ತಿರ ಅಂಟಿಸಲಾಗುವುದು. ಬಸ್‌ನ ಒಂದು ಬದಿಯಲ್ಲಿ ಹಾವೇರಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಚಿತ್ರಗಳು, ಇನ್ನೊಂದು ಬದಿ ಕರ್ನಾಟಕದ ಏಳು ಅದ್ಭುತ ಸ್ಥಳಗಳ ಚಿತ್ರಗಳನ್ನು ಅಂಟಿಸಲಾಗುವುದು. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಪುಸ್ತಕಗಳನ್ನು ಈ ಬಾರಿ ಇಡಲಾಗುತ್ತಿದೆ. ಪುಸ್ತಕ ಇಡಲು ಸ್ಟ್ಯಾಂಡ್ ಮಾಡಿಸಲಾಗಿದೆ. ಪ್ರಯಾಣಿಕರು ಓದಿದ ನಂತರ ಸ್ಟ್ಯಾಂಡ್‌ನಲ್ಲಿ ಇಡುವ ವ್ಯವಸ್ಥೆ ಮಾಡಲಾಗಿದೆ. ಬಸ್ಸಿನ ಮುಂದೆ ಕನ್ನಡಾಂಬೆಯ ಮೂರ್ತಿ ಇಡಲಾಗುತ್ತದೆ.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ‘ಶ್ರೀ ದುರ್ಗಾ ಎಕ್ಸ್‌ಪ್ರೆಸ್‌’ ಎಂಬ ಹೆಸರಿನ ಹಾವೇರಿ ವಿಭಾಗದ ಹಿರೇಕೆರೂರು ಘಟಕದ ಬಸ್‌ ಕನ್ನಡ ರಾಜ್ಯೋತ್ಸವಕ್ಕಾಗಿ ವಿಶೇಷವಾಗಿ ಅಲಂಕೃತಗೊಂಡಿರುವುದು (ಸಂಗ್ರಹ ಚಿತ್ರ)

ಪ್ರತಿ ಹನಿ ನೀರೂ ಅಮೂಲ್ಯ. ಇದನ್ನು ವ್ಯರ್ಥ ಮಾಡದೇ ಸಂರಕ್ಷಣೆ ಮಾಡಬೇಕಿದೆ. ಹೀಗಾಗಿ ಈ ಬಾರಿ ಪ್ರಯಾಣಿಕರಿಗೆ ಪರಿಸರ ಹಾಗೂ ಜಲ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವೆ

– ಶಶಿಧರ್ ಬೋಸ್ಲೆ ಸಾರಿಗೆ ಬಸ್ ನಿರ್ವಾಹಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.