ರಟ್ಟೀಹಳ್ಳಿ: ‘ನಾರಿಯರಿಗೆ ವಿಶೇಷ ಸ್ಥಾನಮಾನ, ಗೌರವ ನೀಡುವುದು ಈ ದೇಶದ ಸಂಸ್ಕೃತಿ. ಇದು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಸಂಕಲ್ಪ’ ಎಂದು ಕೇಂದ್ರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ಸಿಂಗ್ ಹೇಳಿದರು.
ತಾಲ್ಲೂಕಿನ ಮಾಸೂರು ಗ್ರಾಮದ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ಶನಿವಾರ ಜರುಗಿದ ಬಿಜೆಪಿ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರದ ಸಾಧನೆಯನ್ನು ವಿವರಿಸಿದ ಅವರು, ‘ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಸಿದ್ದರಾಮಯ್ಯ ಕೋವಿಡ್ ಪ್ರಾರಂಭಿಕ ಹಂತದಲ್ಲಿ ಲಸಿಕೆ ಬಗ್ಗೆ ಹಗುರವಾಗಿ ಮಾತನಾಡಿದರು. ನಂತರ ಜೀವ ಉಳಿಸಿಕೊಳ್ಳಲು ತಾವೇ ಓಡಿಬಂದರು’ ಎಂದರು.
‘ದೇಶದ ಎರಡು ರಾಜ್ಯಗಳಲ್ಲಿ ಮಾತ್ರಕಾಂಗ್ರೆಸ್ ಅಧಿಕಾರದಲ್ಲಿದೆ. ಉಳಿದೆಲ್ಲ ಕಡೆ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಆ ಎರಡು ರಾಜ್ಯ ಸೇರಿದಂತೆ ದೇಶದ ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ನಡೆಸಲಿದೆ. ಈ ದೇಶ ಕಾಂಗ್ರೆಸ್ ಮತ್ತು ಜೆ.ಡಿ.ಎಸ್. ಮುಕ್ತವಾಗಲಿದೆ’ ಎಂದರು.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ ಮಾತನಾಡಿ, ‘ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಅಭಿವೃದ್ಧಿಪರ, ಜನಪರ ಬಿಜೆಪಿ ಸರ್ಕಾರ ತರುವಲ್ಲಿ ಕಾರ್ಯಕರ್ತರ ಪಾತ್ರ ಬಹುಮುಖ್ಯವಾಗಿದೆ’ ಎಂದು ಹೇಳಿದರು.
ಕೃಷಿ ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ಐತಿಹಾಸಿಕ ಸರ್ವಜ್ಞನ ನಾಡು ಮಾಸೂರಿನಿಂದ ಚುನಾವಣೆ ರಣಕಹಳೆ ಮೊಳಗಿದೆ. ಬಿಜೆಪಿ ಬೂತ್ ಮಟ್ಟದ ಕಾರ್ತಕರ್ತರು ಪಕ್ಷ ಸಂಘಟನೆಯಲ್ಲಿ ಬಹಳಷ್ಟು ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿದ್ದಾರೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಿದ್ದೇನೆ’ ಎಂದರು.
ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಪಕ್ಷದ ಮಂಡಲ ಅಧ್ಯಕ್ಷ ಷಣ್ಮುಖಯ್ಯ ಮಳಿಮಠ, ಜಿಲ್ಲಾ ಘಟಕದ ಅಧ್ಯಕ್ಷ ಸಿದ್ಧರಾಜ ಕಲಕೋಟಿ, ಉಪಾಧ್ಯಕ್ಷ ದೊಡ್ಡಗೌಡ ಪಾಟೀಲ, ಜಿಲ್ಲಾ ಪ್ರಭಾರಿಗಳಾದ ಎಲ್.ಎನ್. ಕಲ್ಲೇಶ, ಮಂಡಲ ಪ್ರಧಾನ ಕಾರ್ಯದರ್ಶಿ ಶಿವಕುಮಾರ ತಿಪ್ಪಶೆಟ್ಟಿ, ಆರ್.ಎನ್. ಗಂಗೋಳ, ದೇವರಾಜ ನಾಗಣ್ಣನವರ, ಎಸ್.ಎಸ್. ಪಾಟೀಲ, ಕಂಠಾಧರ ಅಂಗಡಿ, ಲಿಂಗರಾಜ ಚಪ್ಪರದಹಳ್ಳಿ, ಹನುಮಂತಗೌಡ ಭರಮಣ್ಣನವರ, ಮಹೇಶ ಗುಬ್ಬಿ, ಜೆ.ಪಿ. ಪ್ರಕಾಶಗೌಡ್ರ, ಪಾಲಾಕ್ಷಗೌಡ ಪಾಟೀಲ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.