ಹಾವೇರಿ: ಜಿಲ್ಲೆಯ ಮೂರು ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೆಚ್ಚು ವಿದ್ಯಾರ್ಥಿಗಳು ಇರುವ ಜಿಲ್ಲೆಯ ಮೂರೇ ಶಾಲೆಗೆ ಅನುಮತಿ ನೀಡಿರುವ ಸರ್ಕಾರದ ಆದೇಶಕ್ಕೆ ಪೋಷಕರು ಬೇಸರ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಾರಂಬೀಡ, ಯಳವಟ್ಟಿ ಹಾಗೂ ನರೇಗಲ್ ಗ್ರಾಮಗಳಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 2024–25ನೇ ಶೈಕ್ಷಣಿಕ ಸಾಲಿನಿಂದಲೇ ಕನ್ನಡ ಮಾಧ್ಯಮದ ಜೊತೆಯಲ್ಲಿ ಇಂಗ್ಲಿಷ್ ಮಾಧ್ಯಮದ ತರಗತಿಗಳನ್ನು ನಡೆಸಲು ಅನುಮತಿ ನೀಡಿ ಶಾಲಾ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.
ಮೂರೂ ಶಾಲೆಗಳು ಹಾನಗಲ್ ತಾಲ್ಲೂಕು ಪಾಲಾಗಿವೆ. ಹಾವೇರಿ, ರಾಣೆಬೆನ್ನೂರು, ಬ್ಯಾಡಗಿ, ಹಿರೇಕೆರೂರು, ಶಿಗ್ಗಾವಿ, ಸವಣೂರು ಹಾಗೂ ರಟ್ಟಿಹಳ್ಳಿ ತಾಲ್ಲೂಕಿನ ಯಾವುದೇ ಶಾಲೆಗೂ ಇಂಗ್ಲಿಷ್ ಮಾಧ್ಯಮ ತರಗತಿಗೆ ಅನುಮತಿ ಸಿಕ್ಕಿಲ್ಲ. ಈ ಕ್ರಮವನ್ನು ಖಂಡಿಸಿರುವ ಪೋಷಕರು, ‘ಪ್ರತಿ ತಾಲ್ಲೂಕಿನ ಒಂದಾದರೂ ಶಾಲೆಗೆ ಅನುಮತಿ ನೀಡಬೇಕಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಗೆ ಅನ್ಯಾಯ: ರಾಜ್ಯದ 1,419 ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಪ್ರಾರಂಭಿಸಲು ಅನುಮತಿ ಸಿಕ್ಕಿದೆ. ಹಾವೇರಿ ಜಿಲ್ಲೆಗೆ ಕೇವಲ ಮೂರು ಶಾಲೆಗಳು ಸಿಕ್ಕಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪೋಷಕರು, ‘ಜಿಲ್ಲೆಗೆ ಅನ್ಯಾಯವಾಗಿದೆ’ ಎಂದು ಆರೋಪಿಸುತ್ತಿದ್ದಾರೆ.
‘ರಾಜ್ಯದ 2,000 ಸರ್ಕಾರಿ ಪ್ರಾಥಮಿಕ ಶಾಲೆಗಳನ್ನು ದ್ವಿಭಾಷಾ ಮಾಧ್ಯಮ (ಕನ್ನಡ ಮತ್ತು ಇಂಗ್ಲಿಷ್) ಶಾಲೆಗಳಾಗಿ ಪರಿವರ್ತಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು.
ಇಂಗ್ಲಿಷ್ ಮಾಧ್ಯಮ ತರಗತಿ ನಡೆಸಲು ಸರ್ಕಾರದಿಂದ ಯಾವುದೇ ಆರ್ಥಿಕ ನೆರವು ಲಭ್ಯವಿಲ್ಲವೆಂದು ಪರೋಕ್ಷವಾಗಿ ಹೇಳಿರುವ ಶಾಲಾ ಶಿಕ್ಷಣ ಇಲಾಖೆ, ‘ಸ್ಥಳೀಯವಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ತರಗತಿಗಳನ್ನು ಪ್ರಾರಂಭಿಸಬೇಕು’ ಎಂದು ಆದೇಶದಲ್ಲಿ ತಿಳಿಸಿದೆ.
ಕನಿಷ್ಠ 75 ಮಕ್ಕಳ ಶಾಲೆ ಪರಿಗಣನೆ: ಇಂಗ್ಲಿಷ್ ಮಾಧ್ಯಮ ತರಗತಿ ಆರಂಭಿಸುವ ಬಗ್ಗೆ ಪ್ರಸ್ತಾವ ಸಲ್ಲಿಸುವಂತೆ ಸರ್ಕಾರ ಕೋರಿತ್ತು. ಎಲ್ಲ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು, ಅಗತ್ಯವಿರುವ ಶಾಲೆಗಳ ಪಟ್ಟಿ ಸಿದ್ಧಪಡಿಸಿ ಸಲ್ಲಿಸಿದ್ದರು.
‘ಹಲವು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ನಡೆಸಲು ಕೋರಿ ಅಧಿಕಾರಿಗಳು ಪ್ರಸ್ತಾವ ಸಲ್ಲಿಸಿದ್ದರು. ಆದರೆ, ಒಂದು ತರಗತಿಯಲ್ಲಿ ಕನಿಷ್ಠ 75 ಮಕ್ಕಳ ಸಂಖ್ಯೆ ಇರುವ ಶಾಲೆಗಳಲ್ಲಿ ಮಾತ್ರ ಅನುಮತಿ ನೀಡಲಾಗಿದೆ. ಎಲ್ಲ ಶಾಲೆಗಳಿಗೆ ಅನುಮತಿ ನೀಡಿದರೆ, ಕನ್ನಡ ಮಾಧ್ಯಮಕ್ಕೆ ವಿದ್ಯಾರ್ಥಿಗಳ ಕೊರತೆ ಎದುರಾಗುವ ಸಾಧ್ಯತೆ ಇದೆ. ಕನ್ನಡ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿಯೂ ಬರಬಹುದು. ಹೀಗಾಗಿ, ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು.
ಮತ್ತಷ್ಟು ಶಾಲೆಗೆ ಅನುಮತಿ ನೀಡಲು ಆಗ್ರಹ: ‘ಕನ್ನಡ ಮಾಧ್ಯಮದ ಜೊತೆಯಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿ ನಡೆಸಿದರೆ ಮಕ್ಕಳಿಗೆ ಅನುಕೂಲವಾಗಲಿದೆ. ಹಳ್ಳಿಯ ಮಕ್ಕಳು ಇಂಗ್ಲಿಷ್ ಕಲಿತರೆ, ಶಿಕ್ಷಣದ ಗುಣಮಟ್ಟವೂ ಸುಧಾರಿಸಲಿದೆ. ಹೀಗಾಗಿ, ಹಾವೇರಿ ಜಿಲ್ಲೆಯ ಮತ್ತಷ್ಟು ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದ ತರಗತಿ ನಡೆಸಲು ಅನುಮತಿ ನೀಡಬೇಕು’ ಎಂದು ಪೋಷಕರು ಆಗ್ರಹಿಸಿದ್ದಾರೆ.
‘ಹಾನಗಲ್ ತಾಲ್ಲೂಕಿನ ಶಾಲೆಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಉಳಿದ ತಾಲ್ಲೂಕುಗಳ ಶಾಲೆಗಳ ಗತಿಯೇನು? ಈ ತಾರತಮ್ಯ ಖಂಡನೀಯ’ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ 1,419 ಶಾಲೆಗಳಿಗೆ ಅನುಮತಿ ಕನ್ನಡ ಜೊತೆಯಲ್ಲೇ ಆಂಗ್ಲ ಮಾಧ್ಯಮ ತರಗತಿ ಶಾಲೆ ಸಂಖ್ಯೆ ಹೆಚ್ಚಿಸಲು ಪೋಷಕರ ಆಗ್ರಹ
ಮಕ್ಕಳ ಸಂಖ್ಯೆ ಮಾನದಂಡವಾಗಿಟ್ಟುಕೊಂಡು ಮೂರು ಶಾಲೆಗಳಿಗೆ ಅನುಮತಿ ಸಿಕ್ಕಿದೆ. ಮತ್ತಷ್ಟು ಶಾಲೆಗಳಿಗೆ ಅನುಮತಿ ಪಡೆಯಲು ಪ್ರಯತ್ನಿಸಲಾಗುವುದುಸುರೇಶ್ ಹುಗ್ಗಿ ಹಾವೇರಿ ಡಿಡಿಪಿಐ
ದುಬಾರಿ ಶುಲ್ಕ ಕಟ್ಟಿ ನಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸಲು ಆಗುವುದಿಲ್ಲ. ಸರ್ಕಾರಿ ಶಾಲೆಯಲ್ಲೇ ಇಂಗ್ಲಿಷ್ ಮಾಧ್ಯಮದಲ್ಲಿ ತರಗತಿ ನಡೆಸಿದರೆ ಹೆಚ್ಚು ಅನುಕೂಲರಾಮಣ್ಣ ಗುಡಿಸಾಗರ ಹಿರೇಕೆರೂರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.