ADVERTISEMENT

ಚುನಾವಣೆಯಲ್ಲಿ ₹40 ಕೋಟಿ ಖರ್ಚು: ಮಾಜಿ ಶಾಸಕ ಅರುಣಕುಮಾರ್‌ ಬಂಧನಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 15:25 IST
Last Updated 20 ಫೆಬ್ರುವರಿ 2024, 15:25 IST
<div class="paragraphs"><p>ಅರುಣಕುಮಾರ ಪೂಜಾರ, ಮಾಜಿ ಶಾಸಕ ‌</p></div>

ಅರುಣಕುಮಾರ ಪೂಜಾರ, ಮಾಜಿ ಶಾಸಕ ‌

   

ಹಾವೇರಿ: ರಾಣೆಬೆನ್ನೂರಿನ ಮಾಜಿ ಶಾಸಕ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಅವರು ‘ಕಳೆದ ವಿಧಾನಸಭಾ ಚುನಾವಣೆಯಲ್ಲಿ ₹40 ಕೋಟಿ ಖರ್ಚು ಮಾಡಿಯೂ ಸೋತಿದ್ದೇನೆ’ ಎಂದು ನೀಡಿರುವ ಹೇಳಿಕೆ ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾಗಿದೆ.

‘ಅರುಣಕುಮಾರ ಅವರನ್ನು ಕೂಡಲೇ ಬಂಧಿಸಿ, ಅಕ್ರಮ ಹಣ ಮತ್ತು ಬೇನಾಮಿ ಆಸ್ತಿಯ ಬಗ್ಗೆ ತನಿಖೆ ನಡೆಸಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಹಾಗೂ ಕಾಂಗ್ರೆಸ್ ಮುಖಂಡರು ತಹಶೀಲ್ದಾರ್‌ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದ್ದಾರೆ.

ADVERTISEMENT

ರೈತ ಮುಖಂಡ ರವೀಂದ್ರಗೌಡ ಪಾಟೀಲ ಮಾತನಾಡಿ, ‘2019ರಲ್ಲಿ ನಡೆದ ರಾಣೆಬೆನ್ನೂರಿನ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದ ಅರುಣಕುಮಾರ ಅವರು ಕೇವಲ ಮೂರು ವರ್ಷಗಳ ಅವಧಿಯಲ್ಲೇ ನೂರಾರು ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಟೆಂಡರ್‌ನಲ್ಲಿ ಗುತ್ತಿಗೆದಾರರಿಂದ ಶೇ 40ರಷ್ಟು ಕಮಿಷನ್‌ ಪಡೆದ ಪರಿಣಾಮ ಅವರ ಅವಧಿಯ ಬಹುತೇಕ ಕಾಮಗಾರಿಗಳು ಕಳಪೆಯಾಗಿವೆ’ ಎಂದು ಆರೋಪಿಸಿದ್ದಾರೆ.

‘ಚುನಾವಣಾ ಆಯೋಗಕ್ಕೆ ನೀಡಿದ್ದ ಅಫಿಡವಿಟ್‌ನಲ್ಲಿ ಇಟ್ಟಿಗೆ ಬಟ್ಟಿ ವ್ಯಾಪಾರ ಮಾಡುತ್ತೇನೆ. ನನಗೆ ಯಾವುದೇ ಆಸ್ತಿಯಿಲ್ಲ, ಸಾಲವಿದೆ ಎಂದು ತಿಳಿಸಿದ್ದರು. ಹಾಗಾದರೆ, 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ₹40 ಕೋಟಿ ಖರ್ಚು ಮಾಡಲು ಹಣ ಎಲ್ಲಿಂದ ಬಂತು. ಚುನಾವಣಾ ಆಯೋಗದ ನಿಯಮವನ್ನು ಉಲ್ಲಂಘಿಸಿರುವುದಕ್ಕೆ ಇದು ಸ್ಪಷ್ಟ ಉದಾಹರಣೆ. ಉನ್ನತ ಮಟ್ಟದ ತನಿಖೆ ನಡೆಸಿ, ಬೇನಾಮಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು’ ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನೆಯಲ್ಲಿ ಮುಖಂಡರಾದ ಬೀರಪ್ಪ ಲಮಾಣಿ, ತಿಪ್ಪೇಶ ನಾಯಕ, ಇಸ್ಮಾಯಿಲ್‍ಸಾಬ್‌ ರಾಣೆಬೆನ್ನೂರು, ರಾಜು ಮಾಗಮ್ಮನವರ, ಯಲ್ಪಪ್ಪ ಛತ್ರದ, ಮಲ್ಲೇಶಪ್ಪ ಮೆಡ್ಲೇರಿ, ಬಸವರಾಜ ಕೊಂಗಿಯವರ, ಸುರೇಶ ಜಾಡಮಾಲಿ ಮುಂತಾದವರು ಇದ್ದರು.

ರಾಣೆಬೆನ್ನೂರಿನ ಮಾಜಿ ಶಾಸಕ ಅರುಣಕುಮಾರ ಪೂಜಾರ ಅವರ ಅಕ್ರಮ ಆಸ್ತಿ ಗಳಿಕೆ ವಿರುದ್ಧ ತನಿಖೆ ನಡೆಸಬೇಕು ಎಂದು ರೈತಸಂಘ ಮತ್ತು ಕಾಂಗ್ರೆಸ್‌ ಪಕ್ಷದ ಮುಖಂಡರು ತಹಶೀಲ್ದಾರ್‌ ಅವರಿಗೆ ಮಂಗಳವಾರ ಮನವಿ ಪತ್ರ ಸಲ್ಲಿಸಿದರು

40 ಕೋಟಿ ಖರ್ಚು ಮಾಡಿಯೂ ಸೋತೆ’

‘ನಾನು ಕಳೆದ ವಿಧಾನಸಭಾ ಚುನಾವಣೆಯಲ್ಲಿ ₹40 ಕೋಟಿ ಖರ್ಚು ಮಾಡಿಯೂ ಸೋತಿದ್ದೇನೆ. ಸೋಲಿಗೆ ನಾನು ಕಾರಣನೇ ಹೊರತು ನಮ್ಮ ಕಾರ್ಯಕರ್ತರಲ್ಲ. ಹೀಗಾಗಿ ಯಾರನ್ನೂ ದೂರುವುದಿಲ್ಲ’ ಎಂದು ಮಾಜಿ ಶಾಸಕ, ಬಿಜೆಪಿಯ ಜಿಲ್ಲಾ ಘಟಕದ ಅಧ್ಯಕ್ಷ ಅರುಣಕುಮಾರ ಪೂಜಾರ ಹೇಳಿಕೆ ನೀಡಿದ್ದರು.

ಹಾವೇರಿ ಜಿಲ್ಲಾ ಮಟ್ಟದ ಪದಾಧಿಕಾರಿಗಳ ನೇಮಕದ ಬಗ್ಗೆ ಕೆಲವು ಮುಖಂಡರಿಂದ ತೀವ್ರ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅರುಣಕುಮಾರ್ ಈ ಹೇಳಿಕೆ ನೀಡಿದ್ದರು.

ತನಿಖೆ ಎದುರಿಸಲು ಸಿದ್ಧವಿದ್ದೇನೆ: ಅರುಣಕುಮಾರ

‘ಪದಾಧಿಕಾರಿಗಳ ನೇಮಕದ ಬಗ್ಗೆ ಅಕ್ಷೇಪ ವ್ಯಕ್ತಪಡಿಸಿದ್ದ ಕಾರ್ಯಕರ್ತರನ್ನು ಸಮಾಧಾನ ಪಡಿಸುವ ವೇಳೆ ₹40 ಲಕ್ಷ ಖರ್ಚು ಮಾಡಿಯೂ ಸೋತಿದ್ದೇನೆ ಎಂದು ಹೇಳುವ ಬದಲು, ಬಾಯಿತಪ್ಪಿ ₹40 ಕೋಟಿ ಎಂದು ಹೇಳಿದ್ದೇನೆ’ ಎಂದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.

‘ಚುನಾವಣೆಯಲ್ಲಿ ಮಾಡಿದ ಖರ್ಚು–ವೆಚ್ಚದ ಬಗ್ಗೆ ಚುನಾವಣಾ ಆಯೋಗಕ್ಕೆ ಲೆಕ್ಕ ಕೊಟ್ಟಿದ್ದೇನೆ. ಹಲವರು ದೂರು ಕೊಟ್ಟಿರುವುದು ಗಮನಕ್ಕೆ ಬಂದಿದೆ. ತನಿಖೆ ಎದುರಿಸಲು ಸಿದ್ಧವಿದ್ದೇನೆ. ಕಾನೂನು ಹೋರಾಟ ಮಾಡುತ್ತೇನೆ’ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.