ADVERTISEMENT

ರಟ್ಟೀಹಳ್ಳಿ: ರಾಯರ ಆರಾಧನ ಮಹೋತ್ಸವ ನಾಳೆಯಿಂದ

ಪ್ರದೀಪ ಕುಲಕರ್ಣಿ
Published 30 ಆಗಸ್ಟ್ 2023, 5:24 IST
Last Updated 30 ಆಗಸ್ಟ್ 2023, 5:24 IST
ರಟ್ಟೀಹಳ್ಳಿ ಪಟ್ಟಣದ ಕೋಟೆಯ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠ ಜೀರ್ಣೋದ್ಧಾರವಾಗಿ ಕಂಗೊಳಿಸುತ್ತಿರುವುದು
ರಟ್ಟೀಹಳ್ಳಿ ಪಟ್ಟಣದ ಕೋಟೆಯ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಮಠ ಜೀರ್ಣೋದ್ಧಾರವಾಗಿ ಕಂಗೊಳಿಸುತ್ತಿರುವುದು   

ರಟ್ಟೀಹಳ್ಳಿ: ಇಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠ ಜೀರ್ಣೋದ್ಧಾರವಾಗಿದ್ದು, ಭಕ್ತರನ್ನು ತನ್ನತ್ತ ಸೆಳೆಯುತ್ತಿದೆ. ಆ. 31 ರಿಂದ ಸೆ. 2ರವರೆಗೆ ರಾಘವೇಂದ್ರಸ್ವಾಮಿಗಳ ಆರಾಧನೆ ವಿಜ್ರಂಭಣೆಯಿಂದ ನಡೆಯಲಿದೆ.

ಪಟ್ಟಣದ ಕೋಟೆಯ ಕುಮದ್ವತಿ ನದಿ ತಟದ ಅನತಿ ದೂರದಲ್ಲಿ 1991ರಲ್ಲಿ ಮಂತ್ರಾಲಯ ಮಠದ ಅಂದಿನ ಪೀಠಾಧಿಪತಿ ಸುಶಮೀಂದ್ರತೀ‍ರ್ಥರಿಂದ ಬೃಂದಾವನ ಪ್ರತಿಷ್ಠಾಪಿಸಲ್ಪಟ್ಟಿತ್ತು. ಎಲ್ಲ ಸಮುದಾಯದವರು ಆರಾಧಿಸುವ ರಾಯರ ಮಠವನ್ನು ಪ್ರತಿಷ್ಠಾಪಿಸಬೇಕೆನ್ನುವುದು ಹಿರಿಯರಾದ ದಿ. ಲಕ್ಷ್ಮಿಪತಿರಾವ್ ನಾಡಿಗೇರ ಅವರ ಆಸೆಯಾಗಿತ್ತು. ಅದರಂತೆ ಅವರು ಸ್ವಂತ ಜಾಗ ದಾನ ಮಾಡಿ, ದಿ. ಸುಬ್ಬಣ್ಣ ಶಿರೋಳ ಅವರಿಗೆ ಸೇರಿದ ಜಾಗವನ್ನು ಮಠ ನಿರ್ಮಾಣಕ್ಕೆಂದು ದಾನ ಪಡೆದು ಭಕ್ತರ ಸಹಕಾರದಿಂದ ನಿರ್ಮಿಸಿದ್ದರು.

ಮಠದ ಜೀರ್ಣೋದ್ಧಾರಕ್ಕೆ ಭಕ್ತ, ಮಾಜಿ ಸಚಿವ ಬಿ.ಸಿ. ಪಾಟೀಲ ಅವರು ಶಾಸಕರಾಗಿದ್ದಾಗ ನೀಡಿದ್ದ ಅನುದಾನ ಹಾಗೂ ನೀರಾವರಿ ನಿಗಮದ ವತಿಯಿಂದ ಒಟ್ಟು ₹35 ಲಕ್ಷ ವೆಚ್ಚದಲ್ಲಿ ಮಠದ ಜೀರ್ಣೋದ್ಧಾರ ನಡೆದಿದೆ. ಮಠದ ಆವರಣದಲ್ಲಿ ಕೊಳವೆಬಾವಿ ಹಾಕಿಸಲಾಗಿದೆ.

ADVERTISEMENT

ಶೃಂಗಾರಗೊಂಡ ಮಠ: ಗ್ರಾನೈಟ್‌ನಿಂದ ಗರ್ಭಗುಡಿ, ಕೇರಳ ಮಾದರಿಯಲ್ಲಿ ಚಾವಣಿ, ಭವ್ಯ ಪ್ರಾಂಗಣ ಹಾಗೂ ವಿಸ್ತಾರವಾದ ಅಂಗಳವನ್ನು ನಿರ್ಮಿಸಲಾಗಿದೆ. ಆರಾಧನಾ ಸಮಯದಲ್ಲಿ ರಾಯರ ರಥೋತ್ಸವಕ್ಕೆ ರಟ್ಟೀಹಳ್ಳಿ ನಿವಾಸಿಗಳಾದ ದಿ. ಜಯಣ್ಣ ಕುಡಪಲಿ ಅವರು ಹೊಸ ರಥ ನಿರ್ಮಿಸಿಕೊಟ್ಟಿದ್ದು, ಅಲಂಕೃತಗೊಂಡ ರಥೋತ್ಸವ ಜರುಗುತ್ತದೆ. ಸೆ. 2ರಂದು ಭವ್ಯ ರಥೋತ್ಸವವು ಕೋಟೆಯ ಬೀದಿಯಲ್ಲಿ ಸಂಚರಿಸುತ್ತದೆ. ರಾಜ್ಯದ ಮೂಲೆ, ಮೂಲೆಗಳಿಂದ ಭಕ್ತರು ಆಗಮಿಸುತ್ತಾರೆ.

ರಾಘವೇಂದ್ರ ಸ್ವಾಮಿಗಳಿಗೆ ಭಕ್ತಿ, ಶ್ರದ್ಧೆಯಿಂದ ಸೇವೆಸಲ್ಲಿಸಿದ್ದಲ್ಲಿ ಇಷ್ಟಾರ್ಥಗಳನ್ನು ಪೂರೈಸುತ್ತಾರೆ. ಮನೆಯಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಭಕ್ತ ಈರಣ್ಣ ಕಾಯಕದ ಹೇಳುತ್ತಾರೆ.

ಮಂತ್ರಾಲಯ ಮಠದ ಅಧೀನದಲ್ಲಿ ಈ ಮಠದ ನಿರ್ವಹಣೆ ನಡೆಯುತ್ತಿದೆ. ಬಿ.ಸಿ. ಪಾಟೀಲ ಮಠಕ್ಕೆ ನೆರವು ನೀಡಿದ್ದು, ಆಕರ್ಷಣೆಯ ಶ್ರದ್ಧಾಕೇಂದ್ರವಾಗಿ ಮಾರ್ಪಡಿಸಿದ್ದಾರೆ. ಎಲ್ಲ ಸಮುದಾಯ ಭಕ್ತರು ರಾಯರ ಮಠಕ್ಕೆ ಬಂದು ಸೇವೆ ಸಲ್ಲಿಸುತ್ತಾರೆ ಎಂದು ವಿಜೇಂದ್ರ ಶಿರೋಳ ಹೇಳಿದರು.

ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಬೃಂದಾವನ
ರಟ್ಟೀಹಳ್ಳಿ ಪಟ್ಟಣದ ಕೋಟೆಯ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮಠ ಪೂರ್ಣ ಜೀರ್ಣೋದ್ಧಾರದೊಂದಿಗೆ ಕಂಗೊಳಿಸುತ್ತಿರುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.