ಹಾವೇರಿ: ‘ರಾಜ್ಯ ಘಟಕದ ಅಧ್ಯಕ್ಷರಾಗಿ ಬಿ.ವೈ. ವಿಜಯೇಂದ್ರ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕರಾಗಿ ಆರ್.ಅಶೋಕ್ ಅವರನ್ನು ಆಯ್ಕೆ ಮಾಡಿದ ಬಳಿಕ ಬಿಜೆಪಿಗೆ ಮತ್ತಷ್ಟು ಶಕ್ತಿ ಬಂದಂತಾಗಿದೆ. ಇವರಿಬ್ಬರೂ ಜೋಡೆತ್ತುಗಳಂತೆ ಕೆಲಸ ಮಾಡಲಿದ್ದಾರೆ’ ಎಂದು ಮಾಜಿ ಸಚಿವ ಬಿ.ಶ್ರೀರಾಮುಲು ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಜೋಡೆತ್ತುಗಳ ಜೊತೆಗೆ ಕಳ್ಳೆತ್ತುಗಳಿವೆ. ಕಳ್ಳೆತ್ತುಗಳು (ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್) ಏನು ಮಾಡುತ್ತಿವೆ, ಅವರ ನಿಜವಾದ ಬಣ್ಣ ಏನು ಎಂಬುದು ರಾಜ್ಯದ ಜನತೆಗೆ ಗೊತ್ತಾಗುತ್ತಿದೆ ಎಂದು ಕುಟುಕಿದರು.
ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದು ಹೋಗಿದೆ. ಅಭಿವೃದ್ಧಿ ನಿಂತ ನೀರಾಗಿದೆ. ಮೋಸ ಮಾಡಿ ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದಿದ್ದಾರೆ. ಗ್ಯಾರಂಟಿ ಕೊಡಲು ಕಳ್ಳೆತ್ತುಗಳು ಕೆಲಸ ಮಾಡುತ್ತಿವೆ. ಹೋರಾಟದ ಮೂಲಕ ಜನರಿಗೆ ನ್ಯಾಯ ಕೊಡಿಸಲು ಜೋಡೆತ್ತುಗಳು ಕೆಲಸ ಮಾಡುತ್ತವೆ. ತೆರೆಮರೆಯಲ್ಲಿ ಸಿಎಂ ಮತ್ತು ಡಿಸಿಎಂ ಮಧ್ಯೆ ಜಗಳವಾಗುತ್ತಿದೆ. ನಾಲ್ಕೈದು ತಿಂಗಳಲ್ಲೇ ಸರ್ಕಾರದ ಬಂಡವಾಳ ಬಯಲಾಗಿದೆ ಎಂದು ಹೇಳಿದರು.
ಈ ಸರ್ಕಾರ ಬೀಳುತ್ತದೆ ಎಂದು ಹೇಳಲು ನಾವೇನು ಹುಚ್ಚರಲ್ಲ. ಈ ಸರ್ಕಾರ ಐದು ವರ್ಷ ಇರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಕಳ್ಳೆತ್ತುಗಳು ಮತ್ತು ಜೋಡೆತ್ತುಗಳ ನಡುವೆ ಹೋರಾಟ ನಡೆಯಲಿದೆ. ಕಳ್ಳೆತ್ತುಗಳ ಬಣ್ಣ ಬಯಲಾಗಲಿದೆ, ಜೋಡೆತ್ತುಗಳು ಜನರ ವಿಶ್ವಾಸ ಗಳಿಸಲಿವೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.