ADVERTISEMENT

ಹಾವೇರಿ | ಎಸ್ಸೆಸ್ಸೆಲ್ಸಿ ಪರೀಕ್ಷೆ: ಮೊದಲ ದಿನ ಸುಗಮ

ಪ್ರಥಮ ಭಾಷೆ ಪರೀಕ್ಷೆಗೆ 220 ವಿದ್ಯಾಥಿಗಳು ಗೈರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2024, 16:23 IST
Last Updated 25 ಮಾರ್ಚ್ 2024, 16:23 IST
ಹಾವೇರಿ ನಗರದ ಪರೀಕ್ಷಾ ಕೇಂದ್ರದ ಬಳಿ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ನೋಂದಣಿ ಸಂಖ್ಯೆ ಹುಡುಕುತ್ತಿದ್ದ ದೃಶ್ಯ  –ಪ್ರಜಾವಾಣಿ ಚಿತ್ರ 
ಹಾವೇರಿ ನಗರದ ಪರೀಕ್ಷಾ ಕೇಂದ್ರದ ಬಳಿ ಸೋಮವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿಯರು ನೋಂದಣಿ ಸಂಖ್ಯೆ ಹುಡುಕುತ್ತಿದ್ದ ದೃಶ್ಯ  –ಪ್ರಜಾವಾಣಿ ಚಿತ್ರ    

ಹಾವೇರಿ: ಜಿಲ್ಲೆಯಲ್ಲಿ ಸೋಮವಾರದಿಂದ ಆರಂಭಗೊಂಡ ಎಸ್ಸೆಸ್ಸೆಲ್ಸಿ ಪರೀಕ್ಷೆ ಮೊದಲ ದಿನ ಸುಗಮವಾಗಿ ನಡೆಯಿತು. ಜಿಲ್ಲೆಯ 77 ಕೇಂದ್ರಗಳಲ್ಲಿ ನಡೆದ ಪ್ರಥಮ ಭಾಷೆ ಪರೀಕ್ಷೆಗೆ 220 ವಿದ್ಯಾಥಿಗಳು ಗೈರು ಹಾಜರಾಗಿದ್ದರು.

ಜಿಲ್ಲೆಯಲ್ಲಿ ಪರೀಕ್ಷೆಗೆ ನೋಂದಣಿ ಮಾಡಿಕೊಂಡಿದ್ದ 22,716 ವಿದ್ಯಾರ್ಥಿಗಳ ಪೈಕಿ 22,496 ವಿದ್ಯಾರ್ಥಿಗಳು ಹಾಜರಾಗಿದ್ದರು. ಎಲ್ಲೂ ನಕಲು ನಡೆದಿರುವ ಪ್ರಕರಣ ಕಂಡುಬಂದಿಲ್ಲ.

ಜಿಲ್ಲೆಯ ಎಲ್ಲ 77 ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಪಾರದರ್ಶಕವಾಗಿ ಪರೀಕ್ಷೆ ನಡೆಯುತ್ತಿದೆಯೇ ಎಂಬುದನ್ನು ಪರಿಶೀಲಿಸಲು ಜಿಲ್ಲಾ ಪಂಚಾಯಿತಿ ಕಚೇರಿಯಲ್ಲಿ ಲೈವ್ ಸ್ಟ್ರೀಮಿಂಗ್ ವ್ಯವಸ್ಥೆ ಕೈಗೊಳ್ಳಲಾಗಿದೆ. ಇಲ್ಲಿಯೇ ಕುಳಿತು ಎಲ್ಲ ಪರೀಕ್ಷಾ ಕೇಂದ್ರಗಳ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗುವ ದೃಶ್ಯಗಳನ್ನು ವೀಕ್ಷಿಸಲಾಯಿತು.

ADVERTISEMENT

ಪರೀಕ್ಷೆ ಬರೆಯುವ ಅಭ್ಯರ್ಥಿಗಳಿಗೆ ಆಯಾ ಕೇಂದ್ರಗಳಲ್ಲಿಯೇ ಬಿಸಿಯೂಟ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆಸನ ಸೇರಿದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿತ್ತು. ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಹಾಜರಾಗುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಹಾವೇರಿ ನಗರದ ಮುನ್ಸಿಪಲ್‌ ಹೈಸ್ಕೂಲ್‌ನ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಕ್ಕೆ ಸೋಮವಾರ ಅಂಗವಿಕಲ ವಿದ್ಯಾರ್ಥಿಯನ್ನು ವ್ಹೀಲ್‌ಚೇರ್‌ ಮೂಲಕ ಕರೆತರಲಾಯಿತು  –ಪ್ರಜಾವಾಣಿ ಚಿತ್ರ
ಜಿಲ್ಲೆಯಲ್ಲಿ ನಕಲು ಪ್ರಕರಣ ನಡೆದಿಲ್ಲ. ವಿದ್ಯಾರ್ಥಿ ಅಭಿಷೇಕನ ಹಾಜರಾತಿ ಕೊರತೆಯಿಂದಾಗಿ ಪ್ರವೇಶ ಪತ್ರ ಬಂದಿಲ್ಲ. ಇನ್ನೊಮ್ಮೆ ಪರಿಶೀಲಿಸಿ ಕ್ರಮ ಕೈಗೊಳ್ಳುತ್ತೇವೆ
ಸುರೇಶ ಹುಗ್ಗಿ ಡಿಡಿಪಿಐ ಹಾವೇರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.