ಹಾವೇರಿ: 'ವಕ್ಫ್ ಆಸ್ತಿ ವಿಚಾರಕ್ಕೆ ಸಂಬಂಧಪಟ್ಟಂತೆ ಮನೆ ಖಾಲಿ ಮಾಡಿಸುತ್ತಾರೆ' ಎಂಬ ಮಾಹಿತಿ ಹರಿದಾಡಿದ್ದರಿಂದ ಸವಣೂರು ತಾಲ್ಲೂಕಿನ ಕಡಕೋಳದಲ್ಲಿ ಎರಡು ಕೋಮಿನ ನಡುವೆ ಗಲಾಟೆ ನಡೆದಿದೆ.
ಬುಧವಾರ ರಾತ್ರಿ ಒಂದು ಕೋಮಿನ ಮುಖಂಡರ ಮನೆಗಳ ಮನೆ ಮತ್ತೊಂದು ಕೋಮಿನ ಜನರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದಾಗಿ ಗ್ರಾಮದಲ್ಲಿ ಕೆಲ ಹೊತ್ತು ಪರಿಸ್ಥಿತಿ ಬಿಗಡಾಯಿಸಿತ್ತು.
ಗಲಾಟೆ ಮಾಹಿತಿ ಪಡೆದ ಪೊಲೀಸರು, ಕಡಕೋಳ ಗ್ರಾಮಕ್ಕೆ ಹೋಗಿ ಜನರನ್ನು ಚದುರಿಸಿದ್ದಾರೆ.
ಐಜಿಪಿ ರಮೇಶ ಬಾನೂತ್, ಎಸ್ಪಿ ಅಂಶುಕುಮಾರ್ ಸಹ ಗ್ರಾಮಕ್ಕೆ ಭೇಟಿ ನೀಡಿ ಮೊಕ್ಕಾಂ ಹೂಡಿದ್ದಾರೆ.
'ಕಡಕೋಳ ಗ್ರಾಮದಲ್ಲಾದ ಗಲಾಟೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬಾಲಕರು ಸೇರಿದಂತೆ 32 ಮಂದಿಯನ್ನು ಬಂಧಿಸಲಾಗಿದೆ' ಎಂದು ಎಸ್ಪಿ ಅಂಶುಕುಮಾರ್ ತಿಳಿಸಿದರು.
'ಗ್ರಾಮದಲ್ಲಿ ಬಿಗಿ ಭದ್ರತೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ' ಎಂದರು.
ಗ್ರಾಮದಲ್ಲಿದ್ದ ಗರಡಿ ಮನೆ ಹಾಗೂ ಹಲವು ಮನೆಗಳ ಖಾತೆ ಬದಲಾವಣೆ ಮಾಡಿ ವಕ್ಫ್ ಆಸ್ತಿ ಎಂಬುದಾಗಿ ನಮೂದಿಸಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಈ ಬಗ್ಗೆ ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.