ADVERTISEMENT

ಹಾವೇರಿ ನಗರದಲ್ಲಿ ಮಿತಿಮೀರಿದ ಬೀದಿನಾಯಿಗಳ ಹಾವಳಿ

ಬಿಡಾಡಿದನ ಮತ್ತು ಹಂದಿಗಳ ತೆರವು ಕಾರ್ಯಾಚರಣೆಗೆ ಸಾರ್ವಜನಿಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2023, 16:08 IST
Last Updated 9 ಡಿಸೆಂಬರ್ 2023, 16:08 IST
ಹಾವೇರಿ ನಗರದ ರಸ್ತೆಗಳಲ್ಲಿ ನಾಯಿಗಳ ಹಿಂಡು 
ಹಾವೇರಿ ನಗರದ ರಸ್ತೆಗಳಲ್ಲಿ ನಾಯಿಗಳ ಹಿಂಡು    

ಹಾವೇರಿ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಮಹಿಳೆಯರು ಮತ್ತು ಮಕ್ಕಳು ಒಂಟಿಯಾಗಿ ಓಡಾಡುವುದೇ ಕಷ್ಟವಾಗಿದೆ. ಬೈಕ್‌ಗಳಲ್ಲಿ ವೇಗವಾಗಿ ಹೋದರೆ ಬೆನ್ನತ್ತಿ ಬರುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಸವಾರರು ಪಡುವ ಕಷ್ಟ ಅಷ್ಟಿಷ್ಟಲ್ಲ.

ಜಿಲ್ಲಾ ಕೇಂದ್ರದ ಯಾವ ರಸ್ತೆ, ಓಣಿಗಳಲ್ಲಿ ಹೋದರೂ ಹತ್ತಾರು ನಾಯಿಗಳ ಹಿಂಡೇ ಬೆನ್ನಟ್ಟಿ ಬರುತ್ತವೆ. ಇಷ್ಟಾದರೂ ನಗರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

‘ನಗರದ ಬಸ್ ನಿಲ್ದಾಣ ಸುತ್ತಮುತ್ತ, ಪಿ.ಬಿ ರಸ್ತೆ, ಹಾನಗಲ್‌ ರಸ್ತೆ, ಸುಭಾಷ್‌ ಸರ್ಕಲ್, ಬಸವೇಶ್ವರನಗರ, ರೇಲ್ವೆ ಸ್ಟೇಷನ್ ರಸ್ತೆ ಹೀಗೆ ಯಾವ ರಸ್ತೆ, ಓಣಿಗಳಿಗೆ ಹೋದರೂ ನಾಯಿಗಳ ಹಿಂಡೇ ಕಾಣುತ್ತವೆ. ಕೆಲವು ಕಡೆ ನಾಲ್ಕಾರು ನಾಯಿಗಳಿದ್ದರೆ, ಇನ್ನು ಕೆಲವು ಕಡೆಗಳಂತೂ 15ರಿಂದ 20ರಷ್ಟು ಶ್ವಾನಗಳು ಗುಂಪಾಗಿರುತ್ತವೆ. ಹಗಲಿನ ವೇಳೆ ಅಲ್ಲಲ್ಲಿ ಮಲಗಿರುವ ನಾಯಿಗಳು, ರಾತ್ರಿ ವೇಳೆ ಹಾಗೂ ನಸುಕಿನಲ್ಲಿ ಅಪಾಯಕಾರಿ ರೀತಿಯಲ್ಲಿ ವರ್ತಿಸುತ್ತವೆ’ ಎಂದು ಗೃಹಿಣಿಯರಾದ ಸುಮಂಗಳಾ, ಅನಸೂಯಾ ಸಮಸ್ಯೆ ತೋಡಿಕೊಂಡರು. 

ADVERTISEMENT

ಪಾದಚಾರಿಗಳನ್ನು, ಬೈಕ್ ಸವಾರರನ್ನು ಬೆನ್ನಟ್ಟಿ ಹೋಗುತ್ತವೆ. ಇದರಿಂದ ಮಹಿಳೆಯರು, ಮಕ್ಕಳು ರಸ್ತೆಯಲ್ಲಿ ಸಂಚರಿಸಲು ಹೆದರುವಂತಾಗಿದೆ. ಬೆಳಿಗ್ಗೆ ವಾಯುವಿಹಾರಕ್ಕೆ ಹೋಗಲೂ ಆತಂಕಪಡುವಂತಾಗಿದೆ. ಆಟವಾಡುತ್ತಿರುವ ಮಕ್ಕಳು ಸೇರಿದಂತೆ ಅನೇಕರಿಗೆ ನಾಯಿ ಕಡಿದಿರುವ ಘಟನೆಗಳು ನಿತ್ಯವೂ ನಡೆಯುತ್ತಿವೆ. ಶ್ವಾನ ಸಂತತಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ. ಕಳೆದ ಒಂದು ತಿಂಗಳೀಚೆಗೆ ನಾಯಿ ಮರಿಗಳ ಸಂಖ್ಯೆ ಹೆಚ್ಚಿದೆ ಎಂದು ಅನೇಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ನಗರಸಭೆ ನಿರ್ಲಕ್ಷ್ಯ

ಬೀದಿನಾಯಿ ಹಾಗೂ ಹಂದಿಗಳ ಹಾವಳಿ ಹೆಚ್ಚಿ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದರೂ ನಗರಸಭೆ ಆಡಳಿತ ಸಂಪೂರ್ಣ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಸಾರ್ವಜನಿಕರ ಆರೋಪವಾಗಿದೆ. ಕಳೆದ ಅನೇಕ ತಿಂಗಳಿಂದ ಬೀದಿ ನಾಯಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದಾಗಿ ಪ್ರಕಟಣೆ ನೀಡುತ್ತಿರುವ ನಗರಸಭೆ, ಮುಂದೆ ಈ ಬಗ್ಗೆ ಯಾವ ಕ್ರಮವನ್ನೂ ಕೈಗೊಂಡ ಉದಾಹರಣೆಯಿಲ್ಲ ಎಂದು ಬಸವೇಶ್ವರ ನಗರದ ನಿವಾಸಿಗಳು ದೂರಿದರು. 

ಶ್ವಾನಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗಾಗಲಿ, ಶ್ವಾನಗಳನ್ನು ಹಿಡಿದು ಬೇರೆಡೆ ಬಿಡುವ ಕಾರ್ಯಾಚರಣೆಯಾಗಲಿ ಇತ್ತೀಚಿನ ವರ್ಷಗಳಲ್ಲಿ ನಡೆಸಿಲ್ಲ. ಇದರಿಂದ ಶ್ವಾನಗಳ ಸಂತತಿ ಹೆಚ್ಚುತ್ತಲೇ ಇದೆ. ಇದು ಜನರನ್ನು ಆತಂಕಕ್ಕೆ ದೂಡಿದೆ. ಹಂದಿ, ಬಿಡಾಡಿ ದನಗಳ ಸಂಖ್ಯೆಯೂ ಹೆಚ್ಚುತ್ತಿದೆ. ನಗರಸಭೆ ಸದಸ್ಯರೂ ಈ ಬಗ್ಗೆ ದೂರುತ್ತಲೇ ಬರುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ.

ಶ್ವಾನ ನಿಯಂತ್ರಣದ ಬಗ್ಗೆ ನಗರಸಭೆ ಅಧಿಕಾರಿಗಳೂ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದಿನಂತೆ ಶ್ವಾನಗಳಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ಹಿಡಿದು ಬೇರೆ ಕಡೆ ಸ್ಥಳಾಂತರಿಸಲು ಅವಕಾಶವಿಲ್ಲ ಎಂದು ಹೇಳುತ್ತಾರೆ. ಒಟ್ಟಿನಲ್ಲಿ ಬೀದಿ ನಾಯಿಗಳ ಹಾವಳಿಯಿಂದ ತತ್ತರಿಸಿರುವ ಸಾರ್ವಜನಿಕರಿಗೆ ಸಮಸ್ಯೆ ತಪ್ಪಿಸಲು ಕ್ರಮವಾಗಬೇಕಿದೆ.

‘ಬೀದಿನಾಯಿ ನಿಯಂತ್ರಣಕ್ಕೆ ಕ್ರಮ’

‘ಬೀದಿನಾಯಿಗಳ ನಿಯಂತ್ರಣ ಮಾಡುವ ಸಲುವಾಗಿ ಅವುಗಳನ್ನು ಹಿಡಿದು ಸಂತಾನಶಕ್ತಿಹರಣ ಶಸ್ತ್ರಚಿಕಿತ್ಸೆ ಮಾಡಿ ನಾಲ್ಕು ದಿನ ಆರೈಕೆ ಮಾಡುವ ಸಲುವಾಗಿ ಎರಡು ಬಾರಿ ಟೆಂಡರ್ ಕರೆದರೂ ಯಾರೂ ಭಾಗವಹಿಸಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ನಗರಸಭೆಯಿಂದಲೇ ಈ ಕಾರ್ಯ ಕೈಗೊಳ್ಳಲು ಉದ್ದೇಶಿಸಲಾಗಿದೆ. ಆದಷ್ಟು ಬೇಗ ಬೀದಿ ನಾಯಿ ನಿಯಂತ್ರಣ ಮಾಡಲಾಗುವುದು’ ಎಂದು ನಗರಸಭೆ ಆಯುಕ್ತ ಪರಶುರಾಮ ಚಲವಾದಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.