ಹಿರೇಕೆರೂರ (ಹಾವೇರಿ ಜಿಲ್ಲೆ): ತಾಲ್ಲೂಕಿನ ದೂದಿಹಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿನಿ ಅರ್ಚನಾ ಬಸಪ್ಪ ಗೌಡಪ್ಪನವರ (15) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದು, ಅಸಹಜ ಸಾವು (ಯುಡಿಆರ್) ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹೂತಿದ್ದ ಬಾಲಕಿಯ ಮೃತದೇಹವನ್ನು ಶುಕ್ರವಾರ ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಸಾಗಿಸಿದರು.
ಹಿರೇಕೆರೂರು ತಾಲ್ಲೂಕಿನ ಆಲದಕಟ್ಟಿ ಗ್ರಾಮದ ಅರ್ಚನಾ, ಜುಲೈ 2ರಂದು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಳು. ಅವರ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವಿಷಯ ಮುಚ್ಚಿಟ್ಟಿದ್ದ ಪೋಷಕರು ಹಾಗೂ ಸಂಬಂಧಿಕರು, ಪೊಲೀಸರಿಗೆ ಮಾಹಿತಿ ನೀಡದೇ ಮೃತದೇಹವನ್ನು ಗ್ರಾಮದ ಸ್ಮಶಾನದಲ್ಲಿ ಹೂತಿದ್ದರು.
ಅರ್ಚನಾ ಬರೆದಿದ್ದಳು ಎನ್ನಲಾದ ಮರಣಪತ್ರ ಮನೆಯಲ್ಲಿ ಇತ್ತೀಚೆಗೆ ಸಿಕ್ಕಿದೆ. ಅದನ್ನು ಆಧರಿಸಿ ಅರ್ಚನಾ ತಂದೆ ಬಸವರಾಜ ಅವರು ಠಾಣೆಗೆ ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡಿರುವ ಹಿರೇಕೆರೂರು ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
‘ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಶಿಕ್ಷಕ, ಅವರ ಪತ್ನಿ ಹಾಗೂ ಮಗಳ ಕಿರುಕುಳದಿಂದ ಅರ್ಚನಾ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನವಿದೆ. ಹೂತಿದ್ದ ಮೃತದೇಹವನ್ನು ಉಪ ವಿಭಾಗಾಧಿಕಾರಿ ಸಮ್ಮುಖದಲ್ಲಿ ಹೊರಗೆ ತೆಗೆದು ಆಸ್ಪತ್ರೆಗೆ ಸಾಗಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಮತ್ತಷ್ಟು ಮಾಹಿತಿ ಲಭ್ಯವಾಗಲಿದೆ’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.