ADVERTISEMENT

ಬಹುಕಾರ್ಯದ ಮಾದರಿ ಕೊಡೆ

ವಿದ್ಯಾರ್ಥಿ ಪವನ ಮಾದರಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಮುಕ್ತೇಶ ಕೂರಗುಂದಮಠ
Published 30 ಜೂನ್ 2024, 6:06 IST
Last Updated 30 ಜೂನ್ 2024, 6:06 IST
ರಾಣೆಬೆನ್ನೂರಿನ ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಪವನ್‌ ಜೋಗಾರ ಇನ್‌ಸ್ಪೈಯರ್ ಮಾನಕ ಸ್ಪರ್ಧೆಗೆ ತಯಾರಿಸಿದ ‘ಮೂವಿಂಗ್‌ ಸೆಲ್ಟರ್‌ ಪಾರ್‌ ವೆಂಡರ್ಸ್‌’ ಮಾದರಿ ಕೊಡೆ
ರಾಣೆಬೆನ್ನೂರಿನ ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿ ಪವನ್‌ ಜೋಗಾರ ಇನ್‌ಸ್ಪೈಯರ್ ಮಾನಕ ಸ್ಪರ್ಧೆಗೆ ತಯಾರಿಸಿದ ‘ಮೂವಿಂಗ್‌ ಸೆಲ್ಟರ್‌ ಪಾರ್‌ ವೆಂಡರ್ಸ್‌’ ಮಾದರಿ ಕೊಡೆ   

ರಾಣೆಬೆನ್ನೂರು: ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆಸುವ ವಿಜ್ಞಾನ ಮಾದರಿ ತಯಾರಿ 2022-23ನೇ ಸಾಲಿನ ಇನ್‌ಸ್ಪೈಯರ್‌ ಮಾನಕ್‌ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ವಿಜೇತನಾದ ಇಲ್ಲಿನ ಮಾರುತಿ ನಗರದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಪವನ ಜಿ. ಜೋಗಾರ ಅವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ವಿಜ್ಞಾನ ಶಿಕ್ಷಕಿ ತಬಸ್ಸುಮ್‌ ಎ. ಯಲ್ಲಾಪುರ ಅವರು ಮಾರ್ಗದರ್ಶನ ಮಾಡಿದ್ದರು.

ಮಾಡೆಲ್‌ ವಿಶೇಷತೆ: ‘ಮೂವಿಂಗ್‌ ಸೆಲ್ಟರ್‌ ಪಾರ್‌ ವೆಂಡರ್ಸ್‌’ ಎಂಬ ಮಾದರಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದೆ. ಈ ಮಾದರಿಯು ಒಂದು ಕೊಡೆ, ಬಲ್ಬ್, ಫ್ಯಾನ್‌, ಚಾರ್ಜರ್‌ ಹಾಗೂ ಸೌರಕೋಶಗಳನ್ನು ಒಳಗೊಂಡಿದ್ದು, ರಸ್ತೆ ಬದಿ ವ್ಯಾಪಾರಸ್ಥರಿಗೆ ಉಪಯುಕ್ತವಾಗಿದೆ.

ಈ ಕೊಡೆಯು ಬೀದಿ ಬದಿ ವ್ಯಾಪಾರಸ್ಥರಿಗೆ ಬಿಸಿಲು, ಮಳೆಯಿಂದ ರಕ್ಷಣೆ ನೀಡುತ್ತದೆ. ಸೌರಕೋಶವು ಸೌರಶಕ್ತಿಯನ್ನು ವಿದ್ಯುತ್‌ ಶಕ್ತಿಯನ್ನಾಗಿ ಪರಿವರ್ತಿಸಿ ಸಂಗ್ರಹಿಸಿ, ರಾತ್ರಿ ಬಲ್ಬ್‌ನ ಸಹಾಯದಿಂದ ಬೆಳಕು ಪಡೆಯಬಹುದು. ಇದರಲ್ಲಿರುವ ಫ್ಯಾನ್‌ ಗಾಳಿ ನೀಡುತ್ತದೆ. ಮೊಬೈಲ್‌ ಫೋನ್ ಚಾರ್ಜ್ ಮಾಡಲೂ ವ್ಯವಸ್ಥೆ ಇದೆ.

ADVERTISEMENT

ಈ ಕೊಡೆ ರಾಡ್‌ ಮತ್ತು ಸ್ಟ್ಯಾಂಡ್‌ ಹೊಂದಿದ್ದು, ಇದನ್ನು ಸುಲಭವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಸಾಗಿಸಬಹುದು. ಅಗತ್ಯವಿಲ್ಲದಾಗ ಮಡಚಿ ಇಡಬಹುದು.

‘ಬಿಸಿಲು, ಗಾಳಿ ಮಳೆಯಿಂದ ರಕ್ಷಣೆ ಪಡೆಯವುದಲ್ಲದೇ ಉಚಿತವಾಗಿ ವಿದ್ಯುತ್‌ ಶಕ್ತಿ ಪಡೆದು ರಾತ್ರಿ ವೇಳೆ ಬೆಳಕು, ಗಾಳಿ ಹಾಗೂ ಮೊಬೈಲ್‌ ಚಾರ್ಜ್ ಮಾಡುವ ಸೌಲಭ್ಯವನ್ನು ಈ ಕೊಡೆ ಹೊಂದಿದೆ’ ಎಂದು ವಿದ್ಯಾರ್ಥಿ ಪವನ ಜೋಗಾರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್‌ಸ್ಪೈಯರ್ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ವೈಜ್ಞಾನಿಕ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಉದ್ದೇಶ ಹೊಂದಿದೆ. ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಿಂದ ವಿಜ್ಞಾನದ ಯುವ ಪ್ರತಿಭೆಗಳನ್ನು ಗುರುತಿಸಲು, ಪ್ರೋತ್ಸಾಹಿಸಲು, ಬೆಳೆಸಲು ಮತ್ತು ರಾಷ್ಟ್ರದ ಪ್ರಗತಿಯಲ್ಲಿ ಅವರನ್ನು ಬಳಸಲು ಯೋಚಿಸಿದ ಮಹತ್ವಾಕಾಂಕ್ಷೆ ಹೊಂದಿದೆ’ ಎಂದು ವಿಜ್ಞಾನ ಶಿಕ್ಷಕಿ ತಬಸ್ಸುಮ್‌ ಎ. ಯಲ್ಲಾಪುರ ತಿಳಿಸಿದರು. ಮುಖ್ಯ ಶಿಕ್ಷಕ ರಮೇಶ ಬಿ.ಕಾಳೆ ಹಾಗೂ ಸಿಬ್ಬಂದಿ ವಿದ್ಯಾರ್ಥಿಯನ್ನು ಅಭಿನಂದಿಸಿದರು.

ರಾಣೆಬೆನ್ನೂರಿನ ಮಾರುತಿನಗರದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಪವನ್‌ ಜೋಗಾರ ಇನ್‌ಸ್ಪೈರ್‌ ಮಾನಕ ಸ್ಪರ್ಧೆಗೆ ತಯಾರಿಸಿದ ಮೂವಿಂಗ್‌ ಸೆಲ್ಟರ್‌ ಪಾರ್‌ ವೆಂಡರ್ಸ್‌ ಮಾದರಿ ಛತ್ರಿ
ರಾಣೆಬೆನ್ನೂರಿನ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿ ಪವನ ಜೋಗಾರ ರಾಷ್ಟ್ರ ಮಟ್ಟಕ್ಕೆ ಆಯ್ಕೆ

ನಾವೀನ್ಯ ಅನ್ವೇಷಣೆಗಳಿಗೆ ಶಾಲಾ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಹಾಗೂ ಅವರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ದೃಷ್ಟಿಯಿಂದ ಕೇಂದ್ರದಿಂದ ಇನ್‌ಸ್ಪೈಯರ್ ಅವಾರ್ಡ್ ಕಾರ್ಯಕ್ರಮವನ್ನು ಪ್ರತಿ ವರ್ಷ ನಡೆಸುತ್ತದೆ

-ಎಂ.ಎಚ್‌. ಪಾಟೀಲ ಕ್ಷೇತ್ರ ಶಿಕ್ಷಣಾಧಿಕಾರಿ ರಾಣೆಬೆನ್ನೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.