ಹಂಸಬಾವಿ: ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಮೂಲಗಳೆಲ್ಲ ಬತ್ತಿದ್ದು, ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ಕುಡಿಯುವ ನೀರಿನ ಕೊಳವೆ ಬಾವಿಗಳು ಸಂಪೂರ್ಣ ಬತ್ತಿ ಹಂಸಬಾವಿ ಸೇರಿದಂತೆ ಸುತ್ತಲಿನ ಚಿಕ್ಕೇರೂರ, ಬೆಟಕೇರೂರ, ಆರೀಕಟ್ಟೆ, ದೀವಿಗಿಹಳ್ಳಿ, ದೂಪದಹಳ್ಳಿ, ಯತ್ತಿನಹಳ್ಳಿ, ಮಡ್ಲೂರ, ಸಾತೇನಹಳ್ಳಿ, ಚಿನ್ನಮುಳಗುಂದ, ಭೋಗಾವಿ ಇನ್ನಿತರ ಗ್ರಾಮಗಳಲ್ಲಿ ಕುಡಿಯುವ ನೀರಿಗಾಗಿ ಜನ ಪರದಾಡುವಂತಾಗಿದೆ.
ಕಳೆದ ವರ್ಷದ ಮಳೆಗಾಲ ವಾಡಿಕೆಗಿಂತ ಕಡಿಮೆಯಾದ ಪರಿಣಾಮ ಬೇಸಿಗೆಗೂ ಮೊದಲೇ ಕೆರೆಕಟ್ಟೆಗಳೆಲ್ಲಾ ಬತ್ತಿದ್ದು, ಅಂತರ್ಜಲದ ಮಟ್ಟ ಕುಸಿದು ಕುಡಿಯುವ ನೀರಿನ ಕೊಳವೆ ಬಾವಿಗಳು ನೀರಿಲ್ಲದೇ ಒಣಗುತ್ತಿವೆ. ಮಳೆಗಾಲ ಆರಂಭವಾಗಲು ಇನ್ನೂ ಎರಡು ತಿಂಗಳು ಕಳೆಯಬೇಕಿದ್ದು, ಇದರಿಂದ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಜನರಿಗೆ ನೀರು ಒದಗಿಸಲು ದಿಕ್ಕು ತೋಚದಂತಾಗಿದ್ದಾರೆ.
ಇಷ್ಟೇ ಅಲ್ಲದೇ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮನೆ-ಮನೆಗೆ ಗಂಗೆ ಯೋಜನೆಯ ನಳಗಳು ಎರಡು ತಿಂಗಳ ಹಿಂದೆಯೇ ನೀರಿಲ್ಲದೇ ಬರಿದಾಗಿವೆ.
ಪಾಳುಬಿದ್ದ ಶುದ್ದ ನೀರಿನ ಘಟಕ: ನೀರಿನ ಬರ ಶುದ್ಧ ನೀರಿನ ಘಟಕಗಳಿಗೂ ತಟ್ಟಿದ್ದು, ಬಹುತೇಕ ಗ್ರಾಮಗಳಲ್ಲಿ ಶುದ್ಧ ನೀರಿನ ಘಟಕಗಳು ನೀರಿಲ್ಲದೇ, ಬಂದ್ ಆಗಿವೆ. ಇನ್ನು ಕೆಲವು ಗ್ರಾಮಗಳಲ್ಲಿ ಯಂತ್ರಗಳು ಕೆಟ್ಟಿದ್ದು, ನೀರಿಲ್ಲದ ಕಾರಣ ಅವುಗಳ ರಿಪೇರಿಗೂ ಮುಂದಾಗಿಲ್ಲ. ಶುದ್ದ ನೀರು ಬಳಕೆ ಮಾಡುತ್ತಿದ್ದವರು ಬೇರೆ ಗ್ರಾಮಗಳಿಗೆ ಹೋಗಿ ನೀರು ತರಬೇಕಾಗಿದೆ. ಇನ್ನು ಕೆಲವರು ಶುದ್ಧ ನೀರಿನ ಸಹವಾಸವೇ ಬೇಡ ಎಂದು ಕೊಳವೆಬಾವಿ ನೀರನ್ನೇ ಅವಲಂಬಿಸಿದ್ದಾರೆ.
‘ನಮ್ಮೂರಿನಲ್ಲಿ ಕುಡಿಯುವ ನೀರು ನಾಲ್ಕೈದು ದಿನಕ್ಕೊಮ್ಮೆ ಬಿಡುತ್ತಾರೆ. ಇದರಿಂದ ಜನರಿಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ. ಇದುವರೆಗೂ ಒಂದೂ ಹೊಸ ಬೋರ್‌ವೆಲ್ ಕೊರೆಸಲು ಇಲ್ಲಿನ ಪಿಡಿಒ ಕಾಳಜಿ ವಹಿಸಿಲ್ಲ. ಪ್ರತೀ ದಿನವೂ ಜನರು ನೀರು ತರುವ ಸಲುವಾಗಿ ಒಬ್ಬರಿಗೊಬ್ಬರು ಜಗಳ ಮಾಡುತ್ತಿದ್ದಾರೆ. ನೀರು ತರುವುದೇ ಒಂದು ಕೆಲಸವಾಗಿದೆ’ ಎನ್ನುತ್ತಾರೆ ಚಿಕ್ಕೇರೂರಿನ ಜಮೀರ್ ಚಿಕ್ಕೊಣ್ತಿ.
‘ನಮ್ಮೂರಿನ ದೊಡ್ಡ ಕೆರೆ ಬರಿದಾಗಿದ್ದರಿಂದ ಗ್ರಾಮದಲ್ಲಿರುವ ಕುಡಿಯುವ ನೀರಿನ ಹಾಗೂ ರೈತರ ಜಮೀನಲ್ಲಿರುವ ಕೊಳವೆ ಬಾವಿಗಳು ನೀರಿನ ಮಟ್ಟ ಕುಸಿದಿವೆ. ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಿಂದ ಬೇಗನೆ ನೀರು ತುಂಬಿಸಿದರೆ ಜನರಿಗೆ ಅನುಕೂಲವಾಗುತ್ತದೆ’ ಎಂದು ಬೆಟಕೇರೂರಿನ ನಿವಾಸಿ ವಿಜಯಕುಮಾರ ಪತ್ತಾರ ʼಪ್ರಜಾವಾಣಿʼಗೆ ತಿಳಿಸಿದರು.
ನಮ್ಮೂರಿನಲ್ಲಿ ಜಲ ಕಡಿಮೆಯಾಗಿರುವ ಮೂರು ಕೊಳವೆಬಾವಿ ನೀರನ್ನು ಒಂದೇ ಪೈಪ್‌ನಲ್ಲಿ ಬಿಟ್ಟಿದ್ದಾರೆ. ಹೀಗಾಗಿ ಗ್ರಾಮದ ಜನ ನೆಗಡಿ ಇನ್ನಿತರ ಸಮಸ್ಯೆಗಳಿಂದ ಆಸ್ಪತ್ರೆಗೆ ಅಲೆಯುತ್ತಿದ್ದಾರೆ.-ಮಧು ತಳವಾರ. ದೂಪದಹಳ್ಳಿ ನಿವಾಸಿ
ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಖಾಸಗಿ ಕೊಳವೆಬಾವಿ ನೀರನ್ನು ಬಾಡಿಗೆ ಪಡೆಯೋಣವೆಂದರೆ ರೈತರು ಇರುವ ಅಲ್ಪಸ್ವಲ್ಪ ನೀರನ್ನು ತಮ್ಮ ಬೆಳೆಗಳಿಗೆ ಹಾಯಿಸುತ್ತಿದ್ದಾರೆ.-ರೇಣುಕಾ ಕಲ್ಲಣ್ಣನವರ, ಗ್ರಾ.ಪಂ ಅಧ್ಯಕ್ಷೆ ಯತ್ತಿನಹಳ್ಳಿ ಎಂ.ಕೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.