ADVERTISEMENT

ಹಾವೇರಿ | ಕಾಲುವೆಗೆ ಬಿದ್ದು ಬಾಲಕ ಸಾವು: ಪೌರಾಯುಕ್ತ ಅಮಾನತು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2024, 19:36 IST
Last Updated 17 ಅಕ್ಟೋಬರ್ 2024, 19:36 IST
   

ಹಾವೇರಿ: ಇಲ್ಲಿಯ ಹಳೇ ಪಿ.ಬಿ. ರಸ್ತೆಯ ಬದಿಯ ಕಾಲುವೆಯ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಬಾಲಕ ನಿವೇದನ್ ಗುಡಗೇರಿ (9) ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾವೇರಿ ನಗರಸಭೆಯ ಪೌರಾಯುಕ್ತ ಪರಶುರಾಮ್ ಚಲವಾದಿ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ರಮೇಶ ಮುಂಜೋಜಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಈ ಬಗ್ಗೆ ಗುರುವಾರ ಆದೇಶ ಹೊರಡಿಸಿರುವ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ, ‘ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ವೀರಮಲ್ಲಪ್ಪ ಪೂಜಾರ ಅವರು ಪ್ರಭಾರಿ ಪೌರಾಯುಕ್ತರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ’ ಎಂದಿದ್ದಾರೆ.

‘ನಗರಸಭೆ 9ನೇ ವಾರ್ಡ್ ವ್ಯಾಪ್ತಿಯ ಶಿವಾಜಿನಗರ 3ನೇ ಕ್ರಾಸ್‌ನಲ್ಲಿ ಆಲದ ಮರವಿತ್ತು. ಗಟಾರ ವಿಸ್ತರಣೆ ಕಾಮಗಾರಿಗಾಗಿ ನಗರಸಭೆ ಪೌರಾಯುಕ್ತರ ವಿನಂತಿ ಮೇರೆಗೆ ಆಲದ ಮರ ತೆರವು ಮಾಡಲಾಗಿತ್ತು. ಇದಾದ ನಂತರ, ಕಾಲುವೆ ಮೇಲಿನ ಕಲ್ಲುಗಳನ್ನು ಮುಚ್ಚಿರಲಿಲ್ಲ. ಇದೇ ಕಾರಣಕ್ಕೆ ಕಾಲುವೆಯ ತೆರೆದ ಜಾಗದಲ್ಲಿ ಬಿದ್ದು ಬಾಲಕ ನಿವೇದನ್ (12) ಮೃತಪಟ್ಟಿದ್ದಾರೆ. ಕಲ್ಲುಗಳನ್ನು ಮುಚ್ಚಿಸದೇ ಪೌರಾಯುಕ್ತ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕ ಕರ್ತವ್ಯಲೋಪ ಎಸಗಿರುವುದು ಗೊತ್ತಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ADVERTISEMENT

‘ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ಅವಘಡಕ್ಕೆ ವಿಷಾಧ ವ್ಯಕ್ತಪಡಿಸಿದ್ದಾರೆ. ಜೊತೆಗೆ, ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಸೂಚಿಸಿದ್ದರು’ ಎಂದು ಹೇಳಿದ್ದಾರೆ.

‘ಕರ್ತವ್ಯದಲ್ಲಿ ಲೋಪ, ಬೇಜವಾಬ್ದಾರಿ ವರ್ತನೆ, ನಿರ್ಲಕ್ಷ್ಯ ವಹಿಸಿದ್ದರಿಂದ ಪ್ರಕೃತಿ ವಿಕೋಪ ಕಾಯ್ದೆ ಹಾಗೂ ಕರ್ನಾಟಕ ನಾಗರಿಕ ಸೇವಾ ಕಾಯ್ದೆಯಡಿ ಪೌರಾಯುಕ್ತ ಹಾಗೂ ಕಿರಿಯ ಆರೋಗ್ಯ ನಿರೀಕ್ಷಕನನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಸಕ್ಷಮ ಪ್ರಾಧಿಕಾರದ ಅನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಟ್ಟು ಹೋಗದಂತೆ ನಿರ್ಬಂಧ ವಿಧಿಸಲಾಗಿದೆ’ ಎಂದು ಆದೇಶದಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.