ADVERTISEMENT

ಹಿರೇಕೆರೂರು: ಸರ್ಕಾರಿ ಶಾಲೆ ಉಳಿಸಲು ಶಿಕ್ಷಕರ ಪ್ರಯತ್ನ

‘ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂದು ಪಾಲಕರಿಗೆ ಮನವಿ

ಶಂಕರ ಕೊಪ್ಪದ
Published 7 ಜುಲೈ 2024, 5:39 IST
Last Updated 7 ಜುಲೈ 2024, 5:39 IST
ಹಿರೇಕೆರೂರು ತಾಲ್ಲೂಕಿನ ಬನ್ನೀಹಟ್ಟಿ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳನ್ನು ವಿವರಿಸಿ ಬಿತ್ತಿ ಪತ್ರ ನೀಡಿದರು
ಹಿರೇಕೆರೂರು ತಾಲ್ಲೂಕಿನ ಬನ್ನೀಹಟ್ಟಿ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಮಕ್ಕಳಿಗೆ ಸರ್ಕಾರಿ ಶಾಲೆಯಲ್ಲಿ ಸಿಗುವ ಸೌಲಭ್ಯಗಳನ್ನು ವಿವರಿಸಿ ಬಿತ್ತಿ ಪತ್ರ ನೀಡಿದರು   

ಹಿರೇಕೆರೂರು: ಖಾಸಗಿ ಶಾಲೆಗಳ ಅಬ್ಬರಕ್ಕೆ ಸಿಕ್ಕು ಕನ್ನಡ ಶಾಲೆಗಳಿಗೆ ವಿದ್ಯಾರ್ಥಿಗಳು ವರ್ಷದಿಂದ ವರ್ಷಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆ ಉಳಿಸುವ ಪ್ರಯತ್ನವೊಂದು ತಾಲ್ಲೂಕಿನ ಸರ್ಕಾರಿ ಶಾಲೆ ಶಿಕ್ಷಕರಿಂದ ಸದ್ದಿಲ್ಲದೇ ಸಾಗಿದೆ.

ಪಟ್ಟಣದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರು ಶಾಲಾ ಅವಧಿ ಮುಗಿದ ನಂತರ ಪಟ್ಟಣ ಸೇರಿದಂತೆ ತಾಲ್ಲೂಕಿನ ವರಹ, ನೀಡನೇಗಿಲು, ಗೊಡಚಿಗೊಂಡ, ಚನ್ನಳ್ಳಿ, ಹಾದ್ರಿಹಳ್ಳಿ, ಬನ್ನಿಹಟ್ಟಿ, ಕಡೇ ನಂದಿಹಳ್ಳಿ, ಹೂಲಬಿಕೊಂಡ, ಸೋಮನಹಳ್ಳಿ ಸೇರಿದಂತೆ ಹಲವೆಡೆ ಗ್ರಾಮೀಣ ಪ್ರದೇಶಗಳಿಗೆ ಶಿಕ್ಷಕರು ತೆರಳಿ ‘ನಿಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ’ ಎಂದು ಪಾಲಕರಿಗೆ ಮನವಿ ಮಾಡಿಕೊಳ್ಳುವ ಮೂಲಕ ಸರ್ಕಾರಿ ಶಾಲೆ ಉಳಿವಿಗೆ ಶಿಕ್ಷಕರೇ ಮಾದರಿ ಯೋಜನೆ ಹಾಕಿಕೊಂಡು ಶ್ರಮಿಸುತ್ತಿದ್ದಾರೆ.

2006ರಲ್ಲಿ ಆರಂಭಗೊಂಡ ಸರ್ಕಾರಿ ಪ್ರೌಢಶಾಲೆಗೆ 8ನೇ ತರಗತಿಗೆ 3 ಗಂಡು ಮಕ್ಕಳು ಹಾಗೂ 2 ಹೆಣ್ಣು ಮಕ್ಕಳು ಸೇರಿದಂತೆ 5 ಮಕ್ಕಳಿಂದ ಆರಂಭವಾದ ಶಾಲೆ ಪ್ರಸಕ್ತ 2024-25ನೇ ಸಾಲಿನಲ್ಲಿ 75 ವಿದ್ಯಾರ್ಥಿಗಳು 8ನೇ ತರಗತಿಯಲ್ಲಿ, 99 ವಿದ್ಯಾರ್ಥಿಗಳು 9ನೇ ತರಗತಿಯಲ್ಲಿ, 10ನೇ ತರಗತಿಯಲ್ಲಿ 82 ವಿದ್ಯಾರ್ಥಿಗಳು ಸೇರಿದಂತೆ ಒಟ್ಟು 256 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ADVERTISEMENT

ಉಚಿತ ದಾಖಲಾತಿ: ಸರ್ಕಾರಿ ಪ್ರೌಢಶಾಲಾಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ಉಚಿತವಾಗಿ ದಾಖಲಾತಿ ಮಾಡಿಕೊಂಡು ದಾನಿಗಳ ಮುಖಾಂತರ ವಿದ್ಯಾರ್ಥಿಗಳ ಪ್ರವೇಶ ವೆಚ್ಚವನ್ನು ಭರಿಸಿಕೊಳ್ಳಲಾಗುತ್ತಿದೆ.

8ರಿಂದ 10 ನೇ ತರಗತಿಯಲ್ಲಿ ಓದುವ ಮಕ್ಕಳಿಗೆ ಉಚಿತ ನೋಟ್‌ಬುಕ್ಸ್‌,  ಪುಸ್ತಕ, ಸಮವಸ್ತ್ರ,  ಸ್ಕಾಲರ್‌ಶಿಫ್‌, ಉಚಿತ ವೈದ್ಯಕೀಯ ಸೌಲಭ್ಯ ಸಹ ನೀಡಲಾಗುತ್ತದೆ.

ವಿಜ್ಞಾನ ಲ್ಯಾಬ್ ಹಾಗೂ ಲೈಬ್ರರಿ: ಪ್ರೌಢಶಾಲಾ ಹಂತದಿಂದಲೇ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವ ಮತ್ತು ಗಣಿತದ ಕೌಶಲ್ಯಗಳ ಬೀಜಗಳನ್ನು ಬಿತ್ತಲು ಉದ್ದೇಶಿಸಿದ್ದು, ಭೌತಶಾಸ್ತ್ರ,ರಸಾಯನಶಾಸ್ತ್ರ,ಗಣಿತ ಮತ್ತು ಜೀವ ವಿಜ್ಞಾನಗಳಿಗೆ ಲ್ಯಾಬ್‌ ತೆರೆಯಲಾಗಿದೆ. ವಿವಿಧ ಸ್ಪರ್ಧಾತ್ಮಕ ಪರೀಕ್ಷೆ ಪುಸ್ತಕಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹನೀಯರ ಪುಸ್ತಕಗಳನ್ನು ಇಲ್ಲಿ ಕಾಣಬಹುದಾಗಿದೆ.

ಹಿರೇಕೆರೂರು:ತಾಲ್ಲೂಕಿನ ನಿಡನೇಗಿಲು ಗ್ರಾಮದಲ್ಲಿ ನಿಮ್ಮ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಪಾಲಕರಿಗೆ ಬಿತ್ತಿ ಪತ್ರ ನೀಡುತ್ತಿರುವುದು.-ಪ್ರಜಾವಾಣಿ ಚಿತ್ರ
ಮಕ್ಕಳಿಗೆ ವಿಶೇಷ ಸೌಲಭ್ಯ: ಸರ್ಕಾರಿ ಶಾಲೆಗೆ ಸೇರುವ ಮಕ್ಕಳಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಿಕ್ಷಕರ ಬಳಗ ನಿತ್ಯ ಸಂಜೆ ಮಕ್ಕಳ ಮನೆಗೆ ತೆರೆಳಿ ವಿದ್ಯಾರ್ಥಿಗಳು ಯಾವರೀತಿ ಅಭ್ಯಾಸ ಮಾಡುತ್ತಾರೆ ಎಂಬುದನ್ನು ಪರಿಶೀಲಿಸುತ್ತೇವೆ ಹಾಗೂ ವಿಶೇಷ ತರಗತಿಗಳನ್ನು ಆಯೋಜನೆ ಮಾಡತ್ತೇವೆ. ಒಟ್ಟಾರೆ ಸರ್ಕಾರಿ ಶಾಲೆ ಉಳಿಸಿ ಬೆಳೆಸುವ ಉದ್ದೇಶವನ್ನು ಹೊಂದಲಾಗಿದೆ.
ಎನ್.ಸುರೇಶ್ ಕುಮಾರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.