ADVERTISEMENT

ಶಿಕ್ಷಕರು ಮಕ್ಕಳನ್ನು ದೇಶದ ಆಸ್ತಿಯನ್ನಾಗಿಸಿ: ಅಂಬಿಗೇರ

​ಪ್ರಜಾವಾಣಿ ವಾರ್ತೆ
Published 31 ಮೇ 2024, 13:13 IST
Last Updated 31 ಮೇ 2024, 13:13 IST
ಕುನ್ನೂರ ಪ್ಲಾಟ್ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ್ ಸಸಿ ನೆಟ್ಟು ಕ್ಷೇತ್ರ ಚಾಲನೆ ನೀಡಿದರು
ಕುನ್ನೂರ ಪ್ಲಾಟ್ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವಕ್ಕೆ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ್ ಸಸಿ ನೆಟ್ಟು ಕ್ಷೇತ್ರ ಚಾಲನೆ ನೀಡಿದರು   

ತಡಸ (ಕುನ್ನೂರ): ‘ಮಕ್ಕಳನ್ನು ದೇಶದ ಆಸ್ತಿಯನ್ನಾಗಿ ಬೆಳೆಸುವ ಕಾರ್ಯ ಶಿಕ್ಷಕರು ಮಾಡಬೇಕು’ ಎಂದು ಶಿಗ್ಗಾವಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಹೇಳಿದರು.

ಕುನ್ನೂರ ಪ್ಲಾಟ್ ಶಾಲೆಯಲ್ಲಿ ತಾಲ್ಲೂಕಿನ 2024– 25 ನೇ ಸಾಲಿನ ಶಾಲಾ ಪ್ರಾರಂಭೋತ್ಸವ ಹಾಗೂ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಈ ವರ್ಷ ಶೈಕ್ಷಣಿಕ ಬಲವರ್ಧನೆ ವರ್ಷವಾಗಿ ಹಮ್ಮಿಕೊಳ್ಳಲಾಗಿದ್ದು ಮಕ್ಕಳನ್ನು ಶೈಕ್ಷಣಿಕ ವರ್ಷಕ್ಕೆ ತಳಿರು ತೋರಣಗಳನ್ನು ಕಟ್ಟುವ ಮೂಲಕ ಹಬ್ಬದ ರೀತಿಯಲ್ಲಿ ಪ್ರತಿಯೊಂದು ಶಾಲೆಯಲ್ಲಿ ಸಿಹಿ ಊಟವನ್ನು ನೀಡುವ ಮೂಲಕ ಶೈಕ್ಷಣಿಕ ವರ್ಷ ಪ್ರಾರಂಭಿಸಲಾಗಿದೆ’ ಎಂದರು.

ADVERTISEMENT

‘ಸರ್ಕಾರಿ ಶಾಲೆ ಎಂದರೆ ಖಾಸಗಿ ಶಾಲೆಗೆ ಒಂದು ಹೆಜ್ಜೆ ಮುಂದೆ ಎಂಬಂತೆ ಎರಡು ಜೊತೆ ಶಾಲಾ ಸಮವಸ್ತ್ರ ಪಠ್ಯಪುಸ್ತಕ, ಕೆನೆಭರಿತ ಹಾಲು, ರಾಗಿ ಮಾಲ್ಟನ್ನು ವಾರಕ್ಕೆ ಮೂರು ದಿನ ಹಾಗೂ ಎರಡು ದಿನ ಮೊಟ್ಟೆ ನೀಡಲಾಗುತ್ತಿದೆ. ಜೊತೆಗೆ ಒಂದು ಜೊತೆ ಶೂ ಹಾಗೂ ಎರಡು ಜೊತೆ ಸಾಕ್ಸ್‌ ಕೂಡ ಈ ವರ್ಷ ಶಾಲೆ ಪ್ರಾರಂಭಕ್ಕೂ ಮುನ್ನ ಶೈಕ್ಷಣಿಕ ಇಲಾಖೆ ನೀಡಿದೆ’ ಎಂದರು.

‘ಶೂ ಹಾಗೂ ಸಾಕ್ಷ್‌ ದರ ಪಟ್ಟಿ ಒಂದನೇ ತರಗತಿಯಿಂದ 5ನೇ ತರಗತಿವರೆಗೆ ₹245, ಆರರಿಂದ ಎಂಟನೇ ತರಗತಿಗೆ ₹295 , 9 ರಿಂದ 10ನೇ ತರಗತಿಗೆ ₹325 ನೇರವಾಗಿ ಶಿಕ್ಷಕರ ಖಾತೆಗೆ ಜಮಾವಾಗುತ್ತದೆ’ ಎಂದರು.

ಬಳಿಕ ಮಾತನಾಡಿದ ಪ್ರಧಾನ ಮಂತ್ರಿ ಪೋಷಣ ಅಭಿಯಾನದ ನಿರ್ದೇಶಕ ಅಶೋಕ್ ಕುಂಬಾರ, ‘ಮಕ್ಕಳು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವುದರ ಜೊತೆಗೆ ಶಿಕ್ಷಣವನ್ನು ಪಡೆಯುವಲ್ಲಿ ಮುಂದಾಗಬೇಕು. ಸರ್ಕಾರಿ ಶಾಲೆಯ ಮಕ್ಕಳ ಬೆಳವಣಿಗೆ ಕುಂಠಿತವನ್ನು ನೋಡಿಕೊಂಡು ಸರ್ಕಾರವು ಮೊಟ್ಟೆ, ಹಾಲು, ರಾಗಿ ಹಾಲು ನೀಡುತ್ತಿದೆ’ ಎಂದರು.

ಕ್ಷೇತ್ರ ಸಮನ್ವಯ ಅಧಿಕಾರಿ ಗೀತಾಂಜಲಿ ತೆಪ್ಪದ ಮಾತನಾಡಿ, ‘ಗುಣಮಟ್ಟದ ಶಿಕ್ಷಣವನ್ನು ಮಕ್ಕಳು ಪಡೆಯಲೆಂದು ಸರ್ಕಾರ ಹಲವು ಬಗೆಯ ಹೊಸ ಹೊಸ ಯೋಜನೆಗಳನ್ನು ಜಾರಿ ಮಾಡುತ್ತಿದ್ದು, ಮಕ್ಕಳು ಶಿಕ್ಷಣ ವಂಚಿತರಾಗದೆ ಕಡ್ಡಾಯ ಶಿಕ್ಷಣ ಪಡೆಯಬೇಕು’ ಎಂದರು.

ಶಿಕ್ಷಣ ಸಂಯೋಜಕರು ಬಿ.ಡಿ.ಮಾಳಗಿ ಮಾತನಾಡಿ, ‘ಯಾವುದೇ ವ್ಯಕ್ತಿ ಜೀವನದಲ್ಲಿ ಮುಂದೆ ಬರಬೇಕಾದರೆ ಸತತ ಪ್ರಯತ್ನ ಹಾಗೂ ಶ್ರದ್ಧೆ ಎರಡು ಅತಿಮುಖ್ಯ’ ಎಂದರು.

ಬಳಿಕ ಮಕ್ಕಳಿಗೆ ಹೂಗುಚ್ಚ ನೀಡುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಸ್ವಾಗತಿಸಲಾಯಿತು. ಜೊತೆಗೆ ಪಠ್ಯಪುಸ್ತಕ ಸಮವಸ್ತ್ರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ತಡಸ ಕ್ಲಸ್ಟರ್ ಸಿಆರ್‌ಪಿ ಜಿ.ಬಿ.ಹಸಬಿ, ಶಾಲಾ ಮುಖ್ಯ ಶಿಕ್ಷಕ ಮಂಜುನಾಥ್ ಕುಮಾರ್, ಸಹ ಶಿಕ್ಷಕ ಬಾಹುಬಲಿ ಅಂಗಡಿ, ಶಿಕ್ಷಕಿ ಎಸ್.ಎ.ಕುಲಕರ್ಣಿ, ಗಾಯತ್ರಿ ರಾಠೋಡ, ಮೌಲಾನ ಆಜಾದ್ ಶಾಲಾ ಶಿಕ್ಷಕ ದೇವರಾಜ ಲಮಾಣಿ ಇದ್ದರು.

ಕುನ್ನೂರ ಪ್ಲಾಟ್ ಶಾಲೆಯಲ್ಲಿ ತಾಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವ ಹೂಗುಚ್ಚ ನೀಡುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಬಿ ಅಂಬಿಗೇರ್ ಚಾಲನೆ ನೀಡಿದರು.
ಕುನ್ನೂರ ಪ್ಲಾಟ್ ಶಾಲೆಯಲ್ಲಿ ತಾಲ್ಲೂಕು ಮಟ್ಟದ ಶಾಲಾ ಪ್ರಾರಂಭೋತ್ಸವದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ್ ಮಕ್ಕಳಿಗೆ ಪಠ್ಯಪುಸ್ತಕ ನೀಡಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.