ADVERTISEMENT

ಹಾವೇರಿ: ರಾತ್ರಿ ಉಳಿದ ಆಹಾರ ಬೆಳಿಗ್ಗೆ ನೀಡುತ್ತಾರೆ: ವಸತಿ ಶಾಲೆ ಮಕ್ಕಳ ಅಳಲು

ವಸತಿ ಶಾಲೆಯ ಮಕ್ಕಳ ಅಳಲು: ಪ್ರಾಚಾರ್ಯರಿಗೆ ಸಮನ್ಸ್‌ ಜಾರಿ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2023, 22:52 IST
Last Updated 29 ಡಿಸೆಂಬರ್ 2023, 22:52 IST
ಶಿಗ್ಗಾವಿ ತಾಲ್ಲೂಕಿನ ಗಂಜೀಗಟ್ಟಿ ಮೊರಾರ್ಜಿ ವಸತಿ ಶಾಲೆಗೆ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಭೇಟಿ ನೀಡಿ, ಮಕ್ಕಳ ಅಹವಾಲು ಆಲಿಸಿದರು 
ಶಿಗ್ಗಾವಿ ತಾಲ್ಲೂಕಿನ ಗಂಜೀಗಟ್ಟಿ ಮೊರಾರ್ಜಿ ವಸತಿ ಶಾಲೆಗೆ ಶುಕ್ರವಾರ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಭೇಟಿ ನೀಡಿ, ಮಕ್ಕಳ ಅಹವಾಲು ಆಲಿಸಿದರು    

ಶಿಗ್ಗಾವಿ: ‘ರಾತ್ರಿ ಉಳಿದ ಆಹಾರವನ್ನು ಬೆಳಿಗ್ಗೆ ಮತ್ತು ಬೆಳಗಿನ ಆಹಾರ ಮಧ್ಯಾಹ್ನ ನೀಡುತ್ತಾರೆ. ಹೊಟ್ಟೆ ತುಂಬ ಊಟ ಕೊಡಲ್ಲ’ ಎಂದು ವಸತಿ ಶಾಲೆಯ ಮಕ್ಕಳು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ಜಿ.ರಾಮತ್ನಾಳ ಅವರ ಬಳಿ ದುಃಖ ತೋಡಿಕೊಂಡರು. 

ಹಾವೇರಿ ತಾಲ್ಲೂಕಿನ ಕರ್ಜಗಿಯ ಅಲ್ಪಸಂಖ್ಯಾತರ ಮೊರಾರ್ಜಿ ವಸತಿ ಶಾಲೆಗೆ ಶುಕ್ರವಾರ ಭೇಟಿ ನೀಡಿದ ಶೇಖರಗೌಡ ಅವರು ಅಲ್ಲಿನ ಅವ್ಯವಸ್ಥೆ ಕಂಡು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. 

ಬೆಳಿಗ್ಗಿನ ಉಪಾಹಾರಕ್ಕೆ ಸಿದ್ಧಪಡಿಸಿದ್ದ ಪಲಾವ್‌ ಅನ್ನು ಮತ್ತೆ ಮಧ್ಯಾಹ್ನದ ಊಟಕ್ಕೆ ಮಕ್ಕಳಿಗೆ ಬಡಿಸಿದ್ದು ಕಂಡಿತು. ನಿತ್ಯ ರಾತ್ರಿ ಊಟವನ್ನು ಬೆಳಿಗ್ಗೆ ತಿನ್ನಲು ಬಲವಂತವಾಗಿ ಕೊಡುತ್ತಾರೆ ಎಂದು ಮಕ್ಕಳು ದೂರಿದರು. ಅಡುಗೆ ಸಿಬ್ಬಂದಿ ಮತ್ತು ಪ್ರಾಚಾರ್ಯರಿಗೆ ‘ಪ್ರಮಾಣೀಕೃತ ಆಹಾರ ಪಟ್ಟಿ’ ಬಗ್ಗೆ ಮಾಹಿತಿ ಇಲ್ಲದಿರುವುದನ್ನು ತಿಳಿದ ಆಯೋಗದ ಸದಸ್ಯರು ತರಾಟೆಗೆ ತೆಗೆದುಕೊಂಡರು. 

ADVERTISEMENT

ಈ ವರ್ಷದಿಂದ ಪ್ರಾರಂಭಗೊಂಡಿರುವ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಕೊಟ್ಟಿರುವ ನೋಟ್ ಪುಸ್ತಕ ಮತ್ತು ಪೆನ್‌ ನೀಡದಿರುವ ಬಗ್ಗೆ ವಿದ್ಯಾರ್ಥಿಗಳು ಆಯೋಗದ ಸದಸ್ಯರ ಗಮನಕ್ಕೆ ತಂದರು.

ಮಕ್ಕಳ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದು, ಆಯೋಗದಲ್ಲಿ ಸ್ವಯಂದೂರು ದಾಖಲಿಸಿಕೊಂಡು, ಕರ್ಜಗಿ ಮತ್ತು ಗಂಜೀಗಟ್ಟಿಯ ಪ್ರಾಚಾರ್ಯ, ವಾರ್ಡನ್‌ಗಳಿಗೆ ಸಮನ್ಸ್‌ ಜಾರಿ ಮಾಡಲಾಗುವುದು ಎಂದು ತಿಳಿಸಿದರು. 

ಗಂಜಿಗಟ್ಟಿ ವಸತಿ ಶಾಲೆಯ ಅಡುಗೆ ಕೋಣೆಯಲ್ಲಿ ಆಹಾರ ಧಾನ್ಯ ಸ್ವಚ್ಛ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ 

ದನದ ಕೊಟ್ಟಿಗೆಯಂತಿರುವ ವಸತಿ ಶಾಲೆ!

ಶಿಗ್ಗಾವಿ: ಗಂಜೀಗಟ್ಟಿ ಮೊರಾರ್ಜಿ ವಸತಿ ಶಾಲೆಯ ಅಡುಗೆ ಕೋಣೆ ಸ್ವಚ್ಛತೆಯಿಲ್ಲದೆ ದನದ ಕೊಟ್ಟಿಗೆಗಿಂತ ಕಡೆಯಾಗಿದೆ. ಅಲ್ಲಿ ಮಕ್ಕಳು ಕುಳಿತುಕೊಂಡು ಊಟ ಉಪಾಹಾರ ಸೇವಿಸಲು ಹೇಗೆ ಸಾಧ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶೇಖರಗೌಡ ರಾಮತ್ನಾಳ ಅಸಮಾಧಾನ ವ್ಯಕ್ತಪಡಿಸಿದರು. ಆಹಾರ ಧಾನ್ಯಗಳನ್ನು ಅಡುಗೆಗೆ ಮುನ್ನ ಸ್ವಚ್ಛ ಮಾಡುತ್ತಿಲ್ಲ. ಅಡುಗೆ ಮಾಡಿರುವ ಪಾತ್ರೆಗಳನ್ನು ಸರಿಯಾಗಿ ತೊಳೆಯುತ್ತಿಲ್ಲ. ನಿನ್ನೆ ಮಾಡಿರುವ ಅನ್ನ ಸಾಂಬಾರ್‌ ಪಾತ್ರೆಗಳು ಹಾಗೇ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು. ಶಾಲಾ ಆವರಣದಲ್ಲಿ ಕಸದ ರಾಶಿ ಹಾಗೆ ಬಿದ್ದಿದ್ದು ಇಲ್ಲಿನ ಸಿಬ್ಬಂದಿ ಸ್ವಚ್ಚತೆ ಬಗ್ಗೆ ಗಮನ ಹರಿಸುತ್ತಿಲ್ಲ. ಮೆನು ಪ್ರಕಾರ ಮಕ್ಕಳಿಗೆ ಆಹಾರ ಕೊಡುತ್ತಿಲ್ಲ ಆಹಾರ ದಾಸ್ತಾನು ಬಗ್ಗೆ ದಾಖಲಾತಿ ಸಮರ್ಪಕವಾಗಿಲ್ಲ ಎಂಬುದನ್ನು ತಿಳಿದ ಸದಸ್ಯ ಶೇಖರಗೌಡ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.  ಪ್ರಾಚಾರ್ಯ ಮತ್ತು ವಾರ್ಡನ್‌ ಇಬ್ಬರಿಗೂ ಸಮನ್ಸ್‌ ಜಾರಿ ಮಾಡುವುದಾಗಿ ಶೇಖರಗೌಡ ತಿಳಿಸಿದರು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಅಣ್ಣಪ್ಪ ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.