ADVERTISEMENT

ಹಾವೇರಿಯಲ್ಲಿ ಕೈಗಾರಿಕಾ ಎಸ್ಟೇಟ್‌ ಶೀಘ್ರ ಮಂಜೂರು: ಸಚಿವ ಮುರುಗೇಶ ನಿರಾಣಿ ಭರವಸೆ

ಹಾವೇರಿ ಜಿಲ್ಲೆಯಲ್ಲಿ ಉದ್ಯೋಗಾವಕಾಶ ಸೃಷ್ಟಿಸಲು ಕ್ರಮ: ಸಚಿವ ಮುರುಗೇಶ ನಿರಾಣಿ ಭರವಸೆ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2021, 16:02 IST
Last Updated 19 ಸೆಪ್ಟೆಂಬರ್ 2021, 16:02 IST
ಹಾವೇರಿ ನಗರದಲ್ಲಿ ಭಾನುವಾರ ವಿಜಯ (ಎಂ.ಆರ್‌.ಎನ್‌) ಸೌಹಾರ್ದ ಕ್ರೆಡಿಟ್‌ ಸಹಕಾರಿ ಸಂಸ್ಥೆಯ 57ನೇ ಶಾಖೆಯ ಉದ್ಘಾಟನಾ ಸಮಾರಂಭವನ್ನು ಶಾಸಕ ನೆಹರು ಓಲೇಕಾರ ನೆರವೇರಿಸಿದರು. ಸಚಿವ ಮುರುಗೇಶ ನಿರಾಣಿ ಇದ್ದಾರೆ  
ಹಾವೇರಿ ನಗರದಲ್ಲಿ ಭಾನುವಾರ ವಿಜಯ (ಎಂ.ಆರ್‌.ಎನ್‌) ಸೌಹಾರ್ದ ಕ್ರೆಡಿಟ್‌ ಸಹಕಾರಿ ಸಂಸ್ಥೆಯ 57ನೇ ಶಾಖೆಯ ಉದ್ಘಾಟನಾ ಸಮಾರಂಭವನ್ನು ಶಾಸಕ ನೆಹರು ಓಲೇಕಾರ ನೆರವೇರಿಸಿದರು. ಸಚಿವ ಮುರುಗೇಶ ನಿರಾಣಿ ಇದ್ದಾರೆ     

ಹಾವೇರಿ: ಜಿಲ್ಲೆಯಲ್ಲಿ 406 ಎಕರೆಯಲ್ಲಿ ‘ಕೈಗಾರಿಕಾ ಎಸ್ಟೇಟ್‌’ ಸ್ಥಾಪನೆಗೆ ಪ್ರಸ್ತಾವ ನಮ್ಮ ಇಲಾಖೆಗೆ ಸಲ್ಲಿಕೆಯಾಗಿದ್ದು, ಶೀಘ್ರ ಮಂಜೂರು ಮಾಡಲಾಗುವುದು ಎಂದುಬೃಹತ್‌ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಭರವಸೆ ನೀಡಿದರು.

ನಗರದ ಶಿವಶಕ್ತಿ ಪ್ಯಾಲೇಸ್‌ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಮುಧೋಳದ ವಿಜಯ (ಎಂ.ಆರ್‌.ಎನ್‌) ಸೌಹಾರ್ದ ಕ್ರೆಡಿಟ್‌ ಸಹಕಾರಿಯ 57ನೇ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಾನು ಹುಬ್ಬಳ್ಳಿಯಲ್ಲಿ ಎಂಜಿನಿಯರಿಂಗ್ ಓದುವಾಗ ಸಹಪಾಠಿಗಳಾಗಿದ್ದೆವು. ನಮ್ಮದು 35 ವರ್ಷಗಳ ಸ್ನೇಹವಾಗಿದ್ದು, ಇಂದಿಗೂ ಅವರೊಂದಿಗೆ ಉತ್ತಮ ಬಾಂಧವ್ಯವಿದೆ. 2008–13ರಲ್ಲಿ ನಾನು ಕೈಗಾರಿಕಾ ಸಚಿವನಾಗಿದ್ದಾಗ, ಬೊಮ್ಮಾಯಿ ಅವರು ಜಲಸಂಪನ್ಮೂಲ ಸಚಿವರಾಗಿದ್ದರು ಎಂದು ನೆನಪುಗಳನ್ನು ಮೆಲುಕು ಹಾಕಿದರು.

ADVERTISEMENT

ಹಾವೇರಿ ಜಿಲ್ಲೆಯಲ್ಲಿ ಟಾಟಾ ಕಾರ್ಖಾನೆ ಸ್ಥಾಪನೆಗೆ ಬೊಮ್ಮಾಯಿ ಮತ್ತು ನಾನು ಯೋಜನೆ ರೂಪಿಸಿದ್ದೆವು. ಅನಿವಾರ್ಯ ಕಾರಣದಿಂದ ಯೋಜನೆ ನನೆಗುದಿಗೆ ಬಿದ್ದಿತು. ಮತ್ತೆ ಬೃಹತ್‌ ಕೈಗಾರಿಕೆಗಳನ್ನು ಸ್ಥಾಪಿಸಲು ಈಗ ಅವಕಾಶ ಸಿಕ್ಕಿದೆ. ಸಿಎಂ ಅವರೊಂದಿಗೆ ಚರ್ಚಿಸಿ, ಹೆಚ್ಚು ಉದ್ಯೋಗಾವಕಾಶ ಸೃಷ್ಟಿಸುವ ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ನೆಹರು ಓಲೇಕಾರ ಮಾತನಾಡಿ, ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವ ಜತೆಗೆ ಸಕಾಲದಲ್ಲಿ ಮರು ಪಾವತಿ ಮಾಡಿದಾಗ ಮಾತ್ರ ಬ್ಯಾಂಕ್‌ಗಳ ಬೆಳವಣಿಗೆ ಸಾಧ್ಯವಾಗುತ್ತದೆ. ಹಾವೇರಿ ನಗರಕ್ಕೆ ನಿರಾಣಿ ಸಂಸ್ಥೆಯ ಬ್ಯಾಂಕ್‌ ಬಂದಿರುವುದು ಸ್ವಾಗತಾರ್ಹ. ನಾನು ₹5 ಲಕ್ಷ ಠೇವಣಿ ಇಟ್ಟು ಪ್ರೋತ್ಸಾಹಿಸುತ್ತೇನೆ ಎಂದರು.

ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕರಾದ ಅರುಣಕುಮಾರ ಪೂಜಾರ, ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಶಿವರಾಜ ಸಜ್ಜನ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಎಲ್ಲರೂ ತಮ್ಮ ಭಾಷಣಗಳಲ್ಲಿ ಹಾವೇರಿ ಜಿಲ್ಲೆಗೆ ದೊಡ್ಡ ಕೈಗಾರಿಕಾ ಕಂಪನಿಗಳನ್ನು ತನ್ನಿ ಎಂದು ಸಚಿವ ನಿರಾಣಿ ಅವರಲ್ಲಿ ಮನವಿ ಮಾಡಿದರು.

ನಿರಾಣಿ ಸಹಕಾರಿ ಸಂಸ್ಥೆಯ ಜನರಲ್‌ ಮ್ಯಾನೇಜರ್‌ ಎಂ.ಎಚ್‌.ಪತ್ತೆನ್ನವರ್‌ ಮಾತನಾಡಿ, ‘ 12 ವರ್ಷಗಳ ಹಿಂದೆ ಕೇವಲ 10 ಲಕ್ಷ ಷೇರು ಬಂಡವಾಳದೊಂದಿಗೆ 400 ಸದಸ್ಯರೊಂದಿಗೆ ಮುಧೋಳ ನಗರದಲ್ಲಿ ಪ್ರಾರಂಭವಾದ ಸಹಕಾರಿಯು ಇಂದು 75 ಸಾವಿರ ಸದಸ್ಯರು ಹಾಗೂ ₹ 1 ಕೋಟಿಗೂ ಅಧಿಕ ಷೇರು ಬಂಡವಾಳವನ್ನು ಹೊಂದಿದೆ. ಪ್ರತಿವರ್ಷ ಗ್ರಾಹಕರಿಗೆ ರಾಜ್ಯದಲ್ಲಿಯೇ ದಾಖಲೆಯ ಶೇ 25 ಲಾಭಾಂಶ ಹಂಚಿಕೆ ಮಾಡುವ ಏಕೈಕ ಸಂಸ್ಥೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.