ADVERTISEMENT

ಶೀಘ್ರದಲ್ಲಿ ರಾಜ್ಯ ಸರ್ಕಾರ ಪತನ

ಚುನಾವಣೆಗೆ ಸಿದ್ಧರಾಗಿರಲು ಬಸವರಾಜ ಬೊಮ್ಮಾಯಿ ಕರೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 14:51 IST
Last Updated 19 ಜೂನ್ 2024, 14:51 IST
ರಟ್ಟೀಹಳ್ಳಿ ತಾಲ್ಲೂಕು ಮಾಸೂರು ಗ್ರಾಮದ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ಸಂಸದರಾದ ಬಸವರಾಜ ಬೊಮ್ಮಾಯಿ, ಬಿ.ವೈ. ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು
ರಟ್ಟೀಹಳ್ಳಿ ತಾಲ್ಲೂಕು ಮಾಸೂರು ಗ್ರಾಮದ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ಸಂಸದರಾದ ಬಸವರಾಜ ಬೊಮ್ಮಾಯಿ, ಬಿ.ವೈ. ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು   

ರಟ್ಟೀಹಳ್ಳಿ: ‘ಲೋಕಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವ ಆಲೋಚನೆಯಲ್ಲಿದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ತಾಲ್ಲೂಕಿನ ಮಾಸೂರು ಗ್ರಾಮದ ಜಗಜ್ಯೋತಿ ಸಾಂಸ್ಕೃತಿಕ ಭವನದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಇದೀಗ ಸಚಿವರಲ್ಲಿಯೇ ಗ್ಯಾರಂಟಿ ಯೋಜನೆಯ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿದೆ. ಶಾಸಕರಿಗೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೈಗೊಳ್ಳಲು ಅನುದಾನ ಸಿಗದಂತಾಗಿದೆ. ಯಾವ ಸಂದರ್ಭದಲ್ಲಿಯಾದರೂ ರಾಜ್ಯ ಸರ್ಕಾರ ಪತನಗೊಳ್ಳುವ ಸಾಧ್ಯತೆಯಿದ್ದು, ಕಾರ್ಯಕರ್ತರು ವಿಧಾನಸಭೆ ಚುನಾವಣೆಗೆ ಸನ್ನದ್ಧರಾಗಿರಿ’ ಎಂದು ಕರೆ ಕೊಟ್ಟರು.

ADVERTISEMENT

‘ಜಿಲ್ಲೆಯಲ್ಲಿಯೇ ಹೆಚ್ಚು ಮತಗಳನ್ನು ನೀಡಿ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿದ್ದೀರಿ. ಈ ಸನ್ಮಾನ ಕ್ಷೇತ್ರದ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಇಲ್ಲಿನ ಜನತೆಗೆ ಸಲ್ಲಬೇಕು. ಚುನಾವಣೆ ಪೂರ್ವ ಹೇಳಿದಂತೆ ಹಿರೇಕೆರೂರ-ರಟ್ಟೀಹಳ್ಳಿ ಕ್ಷೇತ್ರವನ್ನು ಒಬ್ಬ ಶಾಸಕನಂತೆ ಸಕ್ರಿಯನಾಗಿ ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತೇನೆ’ ಎಂದರು.

ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ‘ಹಿರೇಕೆರೂರ-ರಟ್ಟೀಹಳ್ಳಿ ಕ್ಷೇತ್ರದಲ್ಲಿ ಪ್ರಬುದ್ಧ ಜನತೆಯಿದ್ದು, ದೇಶದ ಭವಿಷ್ಯದ ದೃಷ್ಟಿಯಿಂದ, ಸಮಗ್ರ ವಿಕಸಿತ ಭಾರತ ನಿರ್ಮಾಣದ ಪರಿಕಲ್ಪನೆಯಲ್ಲಿ ಮೋದಿ ಸರ್ಕಾರವನ್ನು ಬೆಂಬಲಿಸಿದ್ದಾರೆ. ರಾಜ್ಯದ ಯಾವುದೇ ಗ್ಯಾರಂಟಿ ಯೋಜನೆಗಳನ್ನು ನೋಡದೆ ದೇಶದ ಅಭಿವೃದ್ಧಿಗೆ ಇಲ್ಲಿನ ಜನತೆ ಮನ್ನಣೆ ನೀಡಿದ್ದಾರೆ’ ಎಂದರು.

ಬಿಜೆಪಿ ಮುಖಂಡ ಬಿ.ಸಿ.ಪಾಟೀಲ, ‘ದೇಶದಲ್ಲಿ ಸುಭದ್ರ ಸರ್ಕಾರ ರಚಿಸುವಲ್ಲಿ ಮತ್ತೊಮ್ಮೆ ಕ್ಷೇತ್ರದ ಜನತೆ ಕೈಜೋಡಿಸಿದ್ದೀರಿ’ ಎಂದು ಕೃತಜ್ಞತೆ ಸಲ್ಲಿಸಿದರು.

‘ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿಲ್ಲ. ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ತಾಲ್ಲೂಕಿನ ಸರ್ವಜ್ಞ ಏತ ನೀರಾವರಿ ಯೋಜನೆ ಪೂರ್ಣಗೊಂಡಿಲ್ಲ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿಲ್ಲ. ರಾಜ್ಯ ಸರ್ಕಾರದ ವಿಳಂಬ ಧೋರಣೆಯಿಂದ ಇನ್ನೂ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಾಗಿಲ್ಲ’ ಎಂದು ದೂರಿದರು.

ಬಿಜೆಪಿ ಮುಖಂಡರಾದ ಎಸ್.ಎಸ್. ಪಾಟೀಲ, ಶಿವರಾಜ ಸಜ್ಜನರ, ಸಿದ್ಧರಾಜ ಕಲಕೋಟಿ, ಆರ್.ಎನ್. ಗಂಗೋಳ, ಸೃಷ್ಟಿ ಪಾಟೀಲ, ದೇವರಾಜ ನಾಗಣ್ಣನವರ, ಶಿವಕುಮಾರ ತಿಪ್ಪಶೆಟ್ಟಿ, ಪಾಲಾಕ್ಷಗೌಡ ಪಾಟೀಲ, ಬಿ.ಎನ್. ಬಣಕಾರ, ಆನಂದಪ್ಪ ಹಾದಿಮನಿ, ಮಾಲತೇಶ ಗಂಗೋಳ, ರವಿಶಂಕರ ಬಾಳಿಕಾಯಿ, ದ್ಯಾವಣ್ಣವರ, ಗೀತಾ ದಂಡಗೀಹಳ್ಳಿ, ಕಾವ್ಯ ಪಾಟೀಲ, ಶಂಭಣ್ಣ ಗೂಳಪ್ಪನವರ, ಸುಶೀಲ ನಾಡಗೇರ, ಶಂಕರ ಚನ್ನಗೌಡ್ರ, ವೀರನಗೌಡ ಮಕರಿ, ಪ್ರಶಾಂತ ದ್ಯಾವಕ್ಕಳವರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.