ADVERTISEMENT

ಸುದ್ದಿ ಪ್ರಚಾರ; ನಿತ್ಯ ಸಂಚಾರ- ‘ಕಾಯಕ ಜೀವಿ’ಗಳೆನಿಸಿದ ಪತ್ರಿಕಾ ವಿತರಕರು

ಓದುಗರ ಸಂತೃಪ್ತಿಯಲ್ಲೇ ತೃಪ್ತಿ ಕಂಡುಕೊಂಡ ಪತ್ರಿಕಾ ಏಜೆಂಟರು, ವಿತರಕರು

ಎಂ.ವಿ.ಗಡಾದ
Published 3 ಸೆಪ್ಟೆಂಬರ್ 2022, 19:30 IST
Last Updated 3 ಸೆಪ್ಟೆಂಬರ್ 2022, 19:30 IST
ಹಾವೇರಿ ನಗರದಲ್ಲಿ ನಸುಕಿನ ವೇಳೆಯಲ್ಲಿ ಪತ್ರಿಕೆ ವಿತರಣಾ ಕಾರ್ಯದಲ್ಲಿ ನಿರತರಾದ ವಿತರಕರು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ 
ಹಾವೇರಿ ನಗರದಲ್ಲಿ ನಸುಕಿನ ವೇಳೆಯಲ್ಲಿ ಪತ್ರಿಕೆ ವಿತರಣಾ ಕಾರ್ಯದಲ್ಲಿ ನಿರತರಾದ ವಿತರಕರು   –ಪ್ರಜಾವಾಣಿ ಚಿತ್ರ: ಮಾಲತೇಶ ಇಚ್ಚಂಗಿ    

ಶಿಗ್ಗಾವಿ: ಮಳೆ, ಚಳಿ, ಬಿಸಿಲು ಎನ್ನದೇ ನಿತ್ಯ ಬೆಳಿಗ್ಗೆ ಮನೆ–ಕಚೇರಿಗಳಿಗೆ ದೇಶ– ವಿದೇಶ, ರಾಜ್ಯ–ಸ್ಥಳೀಯ ಸಮಾಚಾರಗಳನ್ನೊಳಗೊಂಡ ಸುದ್ದಿ ಪತ್ರಿಕೆಗಳನ್ನು ವಿತರಿಸುತ್ತಾರೆ ‘ಕಾಯಕ ಜೀವಿ’ಗಳೆನಿಸಿದ ಪತ್ರಿಕಾ ವಿತರಕರು.

ಸೆಪ್ಟೆಂಬರ್‌ 4 ಪತ್ರಿಕಾ ವಿತರಕರ ದಿನ. ಈ ಸುಸಂದರ್ಭದಲ್ಲಿ ಸುದ್ದಿ ಸಮಾಚಾರವನ್ನು ಮನೆ–ಮನಗಳಿಗೆ ತಲುಪಿಸುವ ಈ ಸೇನಾನಿಗಳಿಗೆ ಸಲಾಂ ಹೇಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ.

ಕಳೆದ ವರ್ಷ ಕೊರೊನಾ ತುರ್ತು ಸಂದರ್ಭದಲ್ಲೂ ಸೋಂಕಿಗೆ ಧೃತಿಗೆಡದೆ ಸುರಕ್ಷತಾ ಕ್ರಮಗಳನ್ನು ಪಾಲಿಸುತ್ತಾ, ಓದುಗರ ಮನೆ–ಮನೆಗೆ ಪತ್ರಿಕೆಗಳನ್ನು ಸುರಕ್ಷಿತವಾಗಿ ವಿತರಿಸಿ, ಜನರ ಮನ ಗೆದ್ದವರು ಈ ಪತ್ರಿಕಾ ಏಜೆಂಟರು ಮತ್ತು ವಿತರಕರು.

ADVERTISEMENT

ನಿತ್ಯ ನಸುಕಿಗೆ ಎದ್ದು, ಪತ್ರಿಕಾ ಬಂಡಲ್‌ಗಳನ್ನು ಒಪ್ಪವಾಗಿ ಜೋಡಿಸಿಕೊಂಡು, ಸೈಕಲ್ ಮತ್ತು ಬೈಕ್‌ಗಳ ಮೂಲಕ ಗಲ್ಲಿ, ಓಣಿ, ಗುಡ್ಡಗಳಲ್ಲಿ ಸಂಚರಿಸುತ್ತಾ, ಪ್ರೀತಿಯ ಓದುಗರಿಗೆ ಮೆಚ್ಚಿನ ಪತ್ರಿಕೆ ತಲುಪಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.

ಕೊರೊನಾ ಕಾಲದಲ್ಲಿ ಪತ್ರಿಕೆಯ ಹಣವನ್ನು ಕೈಗೆ ಕೊಡಲು ಜನರು ಹಿಂಜರಿಯುತ್ತಿದ್ದರು. ಕೆಲವರು ಪತ್ರಿಕೆಗಳೇ ಬೇಡ ಎನ್ನುತ್ತಿದ್ದರು. ಅಂಥ ಸಂದರ್ಭದಲ್ಲೂ ಹಿಂಜರಿಯದೆ, ಧೃತಿಗೆಡದೆ ಓದುಗರ ಮನವೊಲಿಸಿ, ಪತ್ರಿಕೆಗಳನ್ನು ಹಾಕಿ, ಆನ್‌ಲೈನ್ ಮೂಲಕ ಪೇಮೆಂಟ್ ಮಾಡಿಸಿಕೊಳ್ಳುವ ಜಾಣತನ ತೋರಿದರು.

ಸೀಲ್‌ಡೌನ್ ಪ್ರದೇಶದಲ್ಲಿ ಪತ್ರಿಕೆ ಹಾಕಲು ಪೊಲೀಸರು ಬಿಡುತ್ತಿರಲಿಲ್ಲ. ತಮ್ಮ ಜೀವದ ಹಂಗು ಬಿಟ್ಟು ಓಣಿ, ಓಣಿಗಳಲ್ಲಿ ಪತ್ರಿಕೆಗಳನ್ನು ಮುಟ್ಟಿಸುವ ಪ್ರಾಮಾಣಿಕ ಕಾರ್ಯವನ್ನು ನಡೆಸಿದ್ದಾರೆ.

ಓದುಗರ ಸೇವೆಯಲ್ಲೇ ತೃಪ್ತಿ:

ಕೋವಿಡ್ ಲಸಿಕೆ ಹಾಕಿಸಿಕೊಳ್ಳುವ ಬಗ್ಗೆಯೂ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಸಾಕಷ್ಟು ಬಾರಿ ಅವಮಾನಗಳನ್ನು ಸಹಿಸಿಕೊಂಡು ಸೇವೆಯಲ್ಲೇ ತೃಪ್ತಿ ಕಂಡಿದ್ದಾರೆ. ಅಂತಹ ಸೇವಕರನ್ನು ಗುರುತಿಸಿ ಕೆಲವು ಸಂಘ, ಸಂಸ್ಥೆಗಳು ಉಚಿತ ಆರೋಗ್ಯ ತಪಾಸಣೆ, ಆಹಾರ ಧಾನ್ಯಗಳ ಕಿಟ್‌ಗಳನ್ನು ನೀಡಿ ಗೌರವಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

‘ಆರೋಗ್ಯ, ಅನಾರೋಗ್ಯವಿರಲ್ಲಿ ಮಾಡುವ ಕಾಯಕ ಬಗ್ಗೆ ವಿಶ್ವಾಸ, ನಂಬಿಕೆ ಹೊಂದುವ ಮೂಲಕ ಯಶಸ್ವಿಯತ್ತ ಸಾಗಬೇಕು. ಈವರೆಗೆ ಯಾವುದೇ ಕಾರಣಕ್ಕೂ ಪತ್ರಿಕೆ ಹಾಕುವುದನ್ನು ನಿಲ್ಲಿಸಿಲ್ಲ’ ಎನ್ನುತ್ತಾರೆ ಶಿಗ್ಗಾವಿ ಏಜೆಂಟ್ ಸಿದ್ದರಾಮಗೌಡ ಮೆಳ್ಳಾಗಟ್ಟಿ.

‘ಆರೋಗ್ಯದ ಜತೆಗೆ ಆರ್ಥಿಕ ಪ್ರಬಲತೆಗಾಗಿ ಪತ್ರಿಕಾ ವಿತರಣೆ ಕಾಯಕ ಮುಖ್ಯವಾಗಿದೆ. ಹೀಗಾಗಿ ಕಳೆದ 15 ವರ್ಷಗಳಿಂದ ಬೆಳಿಗ್ಗೆ ಪ್ರತಿಕೆಗಳನ್ನು ವಿತರಿಸುವ ಕೆಲಸದಲ್ಲಿ ನಿರತನಾಗಿದ್ದೇನೆ. ಈ ಕಾಯಕ ನನ್ನಗೆ ತೃಪ್ತಿ ತಂದಿದೆ’ ಎಂದು ಎಂದು ಹಂಸಭಾವಿ ವಿತರಕ ಸಂದೀಪ ಬಾಸೂರ ತಿಳಿಸಿದರು.

‘ಹೊಸ ಲೇಖನಿಗಳ ಪ್ರಕಟಣೆ ಮಾಡುವ ಮೂಲಕ ಪತ್ರಿಕೆ ಬೆಲೆ ಹೆಚ್ಚಿಸಬೇಕು’ ಎಂದು ಬ್ಯಾಡಗಿ ಏಜಂಟ್ ಟಿಪ್ಪುಸುಲ್ತಾನ್‌ ಹುಲಮನಿ ಅನಿಸಿಕೆ ವ್ಯಕ್ತಪಡಿಸಿದರು.

‘ಕಾಯಕದಲ್ಲಿ ಸೇವಾ ಮನೋಭಾವನೆ ಹೊಂದಿದಾಗ ಮಾತ್ರ ಆರ್ಥಿಕ ಪ್ರಗತಿ ಕಾಣಲು ಸಾಧ್ಯವಿದೆ. ಅದು ಪತ್ರಿಕಾ ವಿತರಣೆ ಕೆಲಸ ಸೂಕ್ತವಾಗಿದೆ’ ಎಂದು ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಮೃತ್ಯುಂಜಯ ಕಿರಿಗೇರಿ ಹೇಳುತ್ತಾರೆ.

‘ಪತ್ರಿಕೆ ವಿತರಣೆ: ಆತ್ಮಸಂತೋಷ ನೀಡಿದೆ’

‘ಉತ್ತಮ ಸ್ಥಾನಮಾನಗಳನ್ನು ತಂದುಕೊಡುವ ಜತೆಗೆ ಆತ್ಮ ಸಂತೋಷ ನೀಡಿದೆ. ಹೀಗಾಗಿ ಪತ್ರಿಕಾ ವಿತರಣೆಯನ್ನು ಕಳೆದ 17 ವರ್ಷಗಳಿಂದ ಮಾಡುತ್ತಿದ್ದೇನೆ. ಜನರ ಉತ್ತಮ ಪ್ರತಿಕ್ರಿಯೆ ಇದೆ’ ಎನ್ನುತ್ತಾರೆ ಹಾವೇರಿ ನಗರದ ಪತ್ರಿಕಾ ಏಜೆಂಟ್ ಜಯಪ್ಪ ಬಣಕಾರ.

‘ಸಾರ್ವಜನಿಕರ ವಲಯದಲ್ಲಿ ಓದುಗರ ಸಹಕಾರದಿಂದ ಪತ್ರಿಕೆಗಳ ಸಂಖ್ಯೆ ಹೆಚ್ಚಳವಾಗಿದೆ. ಅದರಿಂದ ಆರ್ಥಿಕ ಸದೃಢತೆ ಹೊಂದಲು ಸಾಧ್ಯವಾಗಿದೆ’ ಎನ್ನುತ್ತಾರೆ ರಾಣೆಬೆನ್ನೂರಿನ ಏಜೆಂಟ್ ಸಂಕಪ್ಪ ಮಾರನಾಳ.

‘ಸಮಾಜದಲ್ಲಿ ಗುರುತಿಸಿಕೊಳ್ಳುವ ಜತೆಗೆ ಸಾರ್ವಜನಿಕರೊಂದಿಗೆ ಉತ್ತಮ ಬಾಂಧವ್ಯ, ಮೌಲ್ಯಾಧಾರಿತ ಬದುಕಿಗಾಗಿ ಪತ್ರಿಕಾ ವಿತರಣಾ ಕಾಯಕ ಅವಶ್ಯವಾಗಿದೆ’ ಎಂಬುದು ಶಿಗ್ಗಾವಿ ತಾಲ್ಲೂಕಿನ ಹುಲಗೂರಿನ ಏಂಜಟ್ ರಮೇಶ ಕೆರಿ ಅವರ ಅಭಿಮತ.

‘ಪತ್ರಿಕಾ ವಿತಕರಿಗೆ ಸರ್ಕಾರ ಪ್ರತಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಸಭಾಭವನಗಳ ನಿರ್ಮಿಸಬೇಕು’ ಎಂದು ಹಾವೇರಿ ತಾಲ್ಲೂಕಿನ ಕರ್ಜಗಿ ಏಜಂಟ್ ನಿಂಗಪ್ಪ ಮಡಿವಾಳರ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.