ADVERTISEMENT

ಬಾಳೆ ಬೆಳೆಗಾರರ ತೀರದ ಗೋಳು

ದರ ಕುಸಿತ, ರೋಗಬಾಧೆಯಿಂದ ಕಂಗೆಟ್ಟ ರೈತರು: ಒಂದು ಎಕರೆ ಬಾಳೆ ನೆಲಸಮ

ಎಸ್.ಎಸ್.ನಾಯಕ
Published 21 ಜನವರಿ 2022, 6:00 IST
Last Updated 21 ಜನವರಿ 2022, 6:00 IST
ರಾಣೆಬೆನ್ನೂರಿನ ಮಾಕನೂರು ಗ್ರಾಮದ ರೈತ ಗಣಪತಿ ರಾವ್ ಕುಲಕರ್ಣಿ ಅವರು ಬೆಲೆ ಕುಸಿತದಿಂದ ಬೇಸತ್ತು ಒಂದು ಎಕರೆ ಬಾಳೆಯನ್ನು ನೆಲಸಮಗೊಳಿಸಿದ್ದಾರೆ  /ಪ್ರಜಾವಾಣಿ ಚಿತ್ರ 
ರಾಣೆಬೆನ್ನೂರಿನ ಮಾಕನೂರು ಗ್ರಾಮದ ರೈತ ಗಣಪತಿ ರಾವ್ ಕುಲಕರ್ಣಿ ಅವರು ಬೆಲೆ ಕುಸಿತದಿಂದ ಬೇಸತ್ತು ಒಂದು ಎಕರೆ ಬಾಳೆಯನ್ನು ನೆಲಸಮಗೊಳಿಸಿದ್ದಾರೆ  /ಪ್ರಜಾವಾಣಿ ಚಿತ್ರ    

ಕುಮಾರಪಟ್ಟಣ: ನೂರಾರು ಎಕರೆಯಲ್ಲಿ ಬಾಳೆ ಬೆಳೆದು ನಾಲ್ಕು ಕಾಸು ಸಂಪಾದಿಸುವ ನಿರೀಕ್ಷೆಯಲ್ಲಿದ್ದ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರು ಗ್ರಾಮದ ಬಾಳೆ ಬೆಳೆಗಾರರು ಕೈ ಸುಟ್ಟುಕೊಂಡಿದ್ದಾರೆ.

₹15 ರಿಂದ ₹20ಕ್ಕೆ ಮಾರಾಟವಾಗಬೇಕಿದ್ದ ಪಚ್ಚಬಾಳೆ ಕೆ.ಜಿ.ಗೆ ₹3ರಿಂದ ₹4, ₹30 ರಿಂದ ₹40ಕ್ಕೆ ಮಾರಬೇಕಿದ್ದ ಯಾಲಕ್ಕಿ ಬಾಳೆ ಕೆ.ಜಿ.ಗೆ ₹10ರಿಂದ ₹12ಕ್ಕೆ ಮಾರುವಂತಾಗಿದೆ. ಪಟ್ಟ ಶ್ರಮ ಹೊಳೆಯಲ್ಲಿ ಹುಣಸೆ ತೊಳೆದಂತಾಗಿದೆ.

ಐದು ಎಕರೆ ಬಾಳೆ ಬೆಳೆದರೂ ಎರಡು, ಮೂರು ವರ್ಷಗಳಿಂದ ಹಾಕಿದ ಬಂಡವಾಳ ಕೈಗೆ ಸಿಕ್ಕಿಲ್ಲ. ಅತಿವೃಷ್ಟಿ, ಬೆಲೆ ಕುಸಿತ, ರೋಗ ಬಾಧೆಯಿಂದ ಬಾಳೆ ಬೆಳೆ ಹಾಳಾಗಿದೆ. ಮಾಕನೂರಿನಲ್ಲಿ 40 ರಿಂದ 45 ಮಂದಿ ನೂರಾರು ಎಕರೆ ಬಾಳೆ ಬೆಳೆದಿದ್ದಾರೆ.‌ ಗಣಪತಿ ರಾವ್ ಕುಲಕರ್ಣಿ ಬೇಸತ್ತು ಒಂದು ಎಕರೆ ಪಚ್ಚಬಾಳೆ ನೆಲಸಮ ಮಾಡಿದ್ದಾರೆ ಎಂದು ರೈತ ಶಿವನಗೌಡ ನಂದಿಗಾವಿ ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಬಾಳೆ ಬೆಳೆ ಕೈಹಿಡಿಯಲಿದೆ ಎಂಬ ನಂಬಿಕೆಯಿಂದ ₹6 ಲಕ್ಷ ಖರ್ಚು ಮಾಡಿ ಮೂರು ಎಕರೆಯಲ್ಲಿ ಯಾಲಕ್ಕಿ ಬಾಳೆ, ಐದು ಎಕರೆಯಲ್ಲಿ ಪಚ್ಚಬಾಳೆ ಕಂದು ನಾಟಿ ಮಾಡಿದ್ದೆ. ಇದುವರೆಗೆ ₹2 ಲಕ್ಷ ಮಾತ್ರ ಕೈಸೇರಿದೆ. ಇನ್ನೂ ₹4 ಲಕ್ಷ ಮೈ ಮೇಲೆ ಬಂದಿದೆ. ಸ್ವಚ್ಛಗೊಳಿಸಲು ₹1 ಲಕ್ಷ ಖರ್ಚು ಬರಲಿದೆ’ ಎನ್ನುತ್ತಾರೆ ಮಾಕನೂರಿನ ರೈತ ಸಂತೋಷ್ ಹಲಗೇರಿ.

ಜನಪ್ರತಿನಿಧಿಗಳು ಸೇರಿದಂತೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳಾಗಲಿ, ನುರಿತ ತಜ್ಞರಾಗಲಿ ನಮ್ಮ ನೆರವಿಗೆ ಧಾವಿಸುತ್ತಿಲ್ಲ. ಬೆಂಗಳೂರಿನ ತೋಟಗಾರಿಕೆ ಇಲಾಖೆ ಜಂಟಿ ಆಯುಕ್ತರ ಗಮನ ಸೆಳೆದರೂ ಪ್ರಯೋಜನವಾಗಿಲ್ಲ. ಸಮಸ್ಯೆಗಳಿಗೆ ಪರಿಹಾರ ಸಿಗದೆ ಕಂಗಾಲಾಗಿದ್ದೇವೆ ಎಂದು ಬಾಳೆ ಬೆಳೆಗಾರರು ಗೋಳು ತೋಡಿಕೊಂಡರು.

ಬಾಳೆಗೆ ಕುತ್ತು ತಂದ ವೈರಾಣು

ಸತತ ಒಂದು ವರ್ಷದಿಂದ ಕಾಡುತ್ತಿರುವ ವಿಚಿತ್ರ ವೈರಾಣು ಬಾಳೆ ಬೆಳೆಗೆ ಕುತ್ತು ತಂದಿದೆ. ಬಾಳೆ ಗಿಡ ನಿಧಾನವಾಗಿ ಒಣಗಿ ಫಸಲು ಕೈ ಸೇರುವ ಸಮಯದಲ್ಲಿ ಮುರಿದು ಬೀಳುತ್ತದೆ. ಇದಲ್ಲದೆ ಎಲೆ ಹಳದಿ, ಎಲೆಗಳ ಮೇಲೆ ಕಪ್ಪು ಚುಕ್ಕೆಯಾಗಿ ಒಣಗಿ ತರಗೆಲೆಯಂತೆ ಆಗುತ್ತದೆ. ರೋಗಬಾಧೆಯಿಂದ ಇಳುವರಿ ಕೂಡ ಕುಂಠಿತಗೊಂಡಿದೆಎಂದು ಬಾಳೆ ಬೆಳೆಗಾರ ಸಂತೋಷ್ಹಲಗೇರಿ ಸಮಸ್ಯೆ ತೋಡಿಕೊಂಡರು.

ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸರಿಯಾದ ಮಾಹಿತಿಯಿಲ್ಲದೆ ಖಾಸಗಿ ರಾಸಾಯನಿಕ ಗೊಬ್ಬರ ಹಾಗೂ ಔಷಧಿ ಕಂಪನಿಗಳಿಗೆ ದಂಡ ತೆರುವಂತಾಗಿದೆ ಎಂದರು.

*

ತೋಟಗಾರಿಕೆ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಸೂಚಿಸದಿದ್ದರೆ, ಸಚಿವರು, ಅಧಿಕಾರಿಗಳ ಮನೆಯ ಮುಂದೆ ಧರಣಿ ಮಾಡುತ್ತೇವೆ
ಈರಣ್ಣ ಹಲಗೇರಿ, ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.