ಹಾವೇರಿ:ರಾಜ್ಯದ 29,076 ಹಳ್ಳಿಗಳ ಪೈಕಿ 1,428 ಹಳ್ಳಿಗಳಲ್ಲಿ ಸ್ಮಶಾನವೇ ಇಲ್ಲ. ಹೀಗಾಗಿ ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ, ಗೌರವಯುತ ಅಂತ್ಯಸಂಸ್ಕಾರ ನೆರವೇರಿಸಲು ಜಾಗವಿಲ್ಲದೆ ಭೂರಹಿತ ಬಡ ಕುಟುಂಬಗಳು ಪರದಾಡುತ್ತಿವೆ.
ಕೆಲವು ಗ್ರಾಮಸ್ಥರು ಸ್ಮಶಾನ ಸೌಲಭ್ಯಕ್ಕಾಗಿ ದಶಕಗಳಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ಸಂಬಂಧಪಟ್ಟ ತಹಶೀಲ್ದಾರ್‌ಗಳಿಗೆ ಹಲವು ಬಾರಿ ಮನವಿ ಕೊಟ್ಟರೂ ಸ್ಮಶಾನಕ್ಕಾಗಿ ಜಾಗ ಸಿಕ್ಕಿಲ್ಲ. ರಸ್ತೆ ಬದಿ, ಹೊಳೆ ದಂಡೆ, ಕೆರೆಯ ಅಂಚು, ನದಿ ತೀರ ಹಾಗೂ ಪಾಳುಬಿದ್ದ ಖಾಸಗಿ ಜಮೀನುಗಳಲ್ಲಿ ಅಂತ್ಯಕ್ರಿಯೆ ಮಾಡುವ ಪರಿಸ್ಥಿತಿ ಇದೆ.
ಹೈಕೋರ್ಟ್ ನಿರ್ದೇಶನ: ‘ವ್ಯಕ್ತಿಯೊಬ್ಬ ಮೃತಪಟ್ಟಾಗ ಗೌರವಯುತ ಅಂತ್ಯಸಂಸ್ಕಾರ ಕೂಡ ಮೂಲಭೂತ ಹಕ್ಕುಗಳ ವ್ಯಾಪ್ತಿಗೆ ಸೇರುತ್ತದೆ’ ಎಂದು ನ್ಯಾಯಾಲಯ ಹಲವು ಬಾರಿ ಹೇಳಿದೆ. ನ್ಯಾಯಾಂಗ ನಿಂದನಾ ಅರ್ಜಿಗೆ ಸಂಬಂಧಪಟ್ಟಂತೆ, ಇತ್ತೀಚೆಗೆ ಕರ್ನಾಟಕ ಹೈಕೋರ್ಟ್ ಕೂಡ ಒಂದು ವಾರದೊಳಗೆ ಸ್ಮಶಾನ ಸೌಲಭ್ಯ ಒದಗಿಸುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನಿರ್ದೇಶಿಸಿದೆ.
ಸ್ಮಶಾನ ಕೊರತೆಯು ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಗಂಭೀರ ಸಮಸ್ಯೆಯಾಗಿದೆ.ಉಳ್ಳವರು ತಮ್ಮ ಜಮೀನುಗಳಲ್ಲಿ ಅಂತ್ಯಕ್ರಿಯೆ ನೆರವೇರಿಸುತ್ತಾರೆ. ಸ್ಮಶಾನಗಳಿಲ್ಲದ ಹಳ್ಳಿಗಳಲ್ಲಿ ವಾಸಿಸುವ ಭೂರಹಿತ ಕೂಲಿ ಕಾರ್ಮಿಕರು, ಪರಿಶಿಷ್ಟ ಜನರು, ಅಲೆಮಾರಿಗಳು ಹೆಣ ಹೂಳಲು ಅಥವಾ ಸುಡಲು ಅನುಭವಿಸುವ ಪಡಿಪಾಟಲು ಹೇಳತೀರದಾಗಿದೆ.
ಶವ ಹೂಳಲು ಜಾಗವಿಲ್ಲ: ‘ರಾಣೆಬೆನ್ನೂರು ತಾಲ್ಲೂಕಿನ ಕೊಡಿಯಾಲ ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆ ಇದ್ದು, ಹೆಣ ಹೂಳಲು ಸ್ಮಶಾನವಿಲ್ಲ. ತುಂಗಭದ್ರಾ ನದಿ ದಂಡೆಯಲ್ಲಿ ಅಂತ್ಯಸಂಸ್ಕಾರ ಮಾಡುತ್ತೇವೆ. ಕೋವಿಡ್ ಸಂಕಷ್ಟ ಸಮಯದಲ್ಲಿ ಶವ ಹೂಳಲು ಅನೇಕ ಸವಾಲುಗಳನ್ನು ಎದುರಿಸಿದ್ದೇವೆ’ ಎಂದು ಗ್ರಾಮಸ್ಥಕರಿಬಸಪ್ಪ ದ್ಯಾಮಕ್ಕನವರ ಸಮಸ್ಯೆ ತೋಡಿಕೊಂಡರು.
ಸ್ಮಶಾನಗಳಿಗೆ ದಾರಿಗಳಿಲ್ಲ:ಕೆಲವು ಗ್ರಾಮಗಳಲ್ಲಿ ಸ್ಮಶಾನಗಳಿದ್ದರೂ ಹೋಗಲು ದಾರಿಗಳೇ ಇಲ್ಲ. ಬೆಳೆ ಹಾಳಾಗುತ್ತದೆ ಎಂದು ಜಮೀನುಗಳಲ್ಲಿ ಹೋಗಲು ರೈತರು ಅಡ್ಡಿಪಡಿಸುತ್ತಾರೆ. ಮೂಲಸೌಕರ್ಯದಿಂದ ವಂಚಿತವಾಗಿರುವ ಸ್ಮಶಾನಗಳು ಇದ್ದೂ ಇಲ್ಲದಂತಾಗಿವೆ. ಈ ಬಗ್ಗೆ ಸರ್ಕಾರ ಗಮನಹರಿಸಬೇಕು ಎನ್ನುತ್ತಾರೆ ರಾಣೆಬೆನ್ನೂರು ತಾಲ್ಲೂಕಿನ ಹೊಳೆಅನ್ವೇರಿ ಗ್ರಾಮಸ್ಥರು.
ರಸ್ತೆಬದಿಯೇ ಅಂತ್ಯಸಂಸ್ಕಾರ!
‘ಹಾವೇರಿ ತಾಲ್ಲೂಕಿನ ಕೋಡಬಾಳ, ಅಕ್ಕೂರ ಗ್ರಾಮಗಳಲ್ಲಿ ಸ್ಮಶಾನವಿಲ್ಲದ ಕಾರಣ ರಸ್ತೆ ಬದಿಯಲ್ಲಿ ಶವಗಳನ್ನು ಸುಡುತ್ತೇವೆ. ಮಳೆಗಾಲದಲ್ಲಿ ಶವಸಂಸ್ಕಾರ ಮಾಡುವುದು ತುಂಬಾ ಕಷ್ಟ. 2015ರಿಂದ ನಿರಂತರವಾಗಿ ತಹಶೀಲ್ದಾರರಿಗೆಮತ್ತು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದರೂ ಪರಿಹಾರ ಸಿಕ್ಕಿಲ್ಲ’ ಎಂದು ಕೋಡಬಾಳ ಗ್ರಾಮದ ಮುಖಂಡ ಲೋಕೇಶ ಕುಬಸದ ಹೇಳುತ್ತಾರೆ.
ಅತಿ ಹೆಚ್ಚು ಸ್ಮಶಾನ ಕೊರತೆ ಇರುವ ಜಿಲ್ಲೆಗಳು
ಜಿಲ್ಲೆ;ಗ್ರಾಮಗಳ ಸಂಖ್ಯೆ
ಶಿವಮೊಗ್ಗ;310
ಬೆಳಗಾವಿ;233
ಉತ್ತರ ಕನ್ನಡ;210
ಗದಗ/ವಿಜಯಪುರ;78
ಮೈಸೂರು;54
ಕೊಡಗು;48
ಕಲ್ಬುರ್ಗಿ/ಹಾವೇರಿ;40
ಹಾವೇರಿ ಜಿಲ್ಲೆಯ 10 ಗ್ರಾಮಗಳಿಗೆ ಸ್ಮಶಾನ ಕಲ್ಪಿಸಲು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ. ಖಾಸಗಿ ಜಮೀನು ನೀಡಿದರೆ ಖರೀದಿಸಲು ಸಿದ್ಧವಿದ್ದೇವೆ.
– ಸಂಜಯ ಶೆಟ್ಟೆಣ್ಣವರ, ಹಾವೇರಿ ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.