ADVERTISEMENT

ಹಾವೇರಿ | ಟೊಮೆಟೊಗೆ ‘ಟುಟಾ’ ಕಾಟ: ರೈತನಿಗೆ ನಷ್ಟ

ಕಾಯಿ, ಹಣ್ಣುಗಳಲ್ಲಿ ರಂಧ್ರ ಕೊರೆಯುವ ಕೀಟ; ಬೆಲೆ ಏರಿಕೆ ದಿನದಲ್ಲೇ ಅನ್ನದಾತನಿಗೆ ಹಾನಿ

ಸಂತೋಷ ಜಿಗಳಿಕೊಪ್ಪ
Published 10 ಜುಲೈ 2024, 5:02 IST
Last Updated 10 ಜುಲೈ 2024, 5:02 IST
<div class="paragraphs"><p>ಟುಟಾ ಅಬ್ಸುಲುಟಾ (ಊಜಿ) ಕೀಟ ತಿಂದಿದ್ದರಿಂದ ಕೊಳೆಯುತ್ತಿರುವ ಟೊಮೆಟೊ ಹಣ್ಣು</p></div>

ಟುಟಾ ಅಬ್ಸುಲುಟಾ (ಊಜಿ) ಕೀಟ ತಿಂದಿದ್ದರಿಂದ ಕೊಳೆಯುತ್ತಿರುವ ಟೊಮೆಟೊ ಹಣ್ಣು

   

ಹಾವೇರಿ: ಜಿಲ್ಲೆಯ ಹಲವೆಡೆ ಟೊಮೆಟೊ ಬೆಳೆಯಲಾಗುತ್ತಿದ್ದು, ಸದ್ಯದ ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ಬೆಲೆ ಸಿಗುತ್ತಿದೆ. ಇದರ ನಡುವೆಯೇ ಟೊಮೆಟೊ ಬೆಳೆಯಲ್ಲಿ ‘ಟುಟಾ ಅಬ್ಸುಲುಟಾ (ಊಜಿ)’ ಕೀಟ ಕಾಣಿಸಿಕೊಳ್ಳುತ್ತಿದ್ದು, ಇಳುವರಿ ಕಡಿಮೆಯಾಗುವ ಆತಂಕದಲ್ಲಿ ರೈತರು ಕಂಗಾಲಾಗಿದ್ದಾರೆ.

ಜಿಲ್ಲೆಯ ಹಾವೇರಿ, ಹಾನಗಲ್, ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು, ಶಿಗ್ಗಾವಿ ಹಾಗೂ ಸವಣೂರು ತಾಲ್ಲೂಕಿನ ಹಲವು ರೈತರು ಟೊಮೆಟೊ ಸಸಿ ಹಚ್ಚಿದ್ದಾರೆ. ಸದ್ಯ ಮಾರುಕಟ್ಟೆಯಲ್ಲಿ ಟೊಮೆಟೊ ಬೇಡಿಕೆ ಪ್ರಮಾಣ ಹೆಚ್ಚಾಗಿದ್ದು, ಹಲವರು ಟೊಮೆಟೊ ಹರಿದು ಮಾರುಕಟ್ಟೆಗೆ ಕಳುಹಿಸುತ್ತಿದ್ದಾರೆ.

ADVERTISEMENT

ನೀರಾವರಿ ಆಶ್ರಯದಲ್ಲಿ ಬೆಳೆದಿರುವ ಟೊಮೆಟೊ, ಕೆಲವರ ಹೊಲದಲ್ಲಿ ಚೆನ್ನಾಗಿ ಇಳುವರಿ ಬರುತ್ತಿದೆ. ಆದರೆ, ಬಹುತೇಕ ಹೊಲಗಳಲ್ಲಿ ಊಜಿ ಕೀಟದ ಕಾಟದಿಂದ ಟೊಮೆಟೊ ಇಳುವರಿ ಕಡಿಮೆಯಾಗುತ್ತಿದೆ. ಇದರಿಂದ ರೈತರಿಗೆ ಅಂದುಕೊಂಡಷ್ಟು ಲಾಭ ಬರುತ್ತಿಲ್ಲ.

ಹಾವೇರಿ ಹೊರವಲಯದಲ್ಲೂ ಹಲವರು ಟೊಮೆಟೊ ಬೆಳೆದಿದ್ದಾರೆ. ಈ ಪೈಕಿ ಬಹುತೇಕ ರೈತರ ಹೊಲದಲ್ಲಿ ಊಜಿ ಸಮಸ್ಯೆ ಕಾಣಿಸಿಕೊಳ್ಳುತ್ತಿದ್ದು, ಅವುಗಳನ್ನು ನಿಯಂತ್ರಿಸಲು ರೈತರು ನಾನಾ ಔಷಧಿಗಳ ಮೊರೆ ಹೋಗುತ್ತಿದ್ದಾರೆ.

‘ಹವಾಮಾನ ವೈಪರೀತ್ಯ ಹಾಗೂ ಮಳೆಯ ಪ್ರಮಾಣದಲ್ಲಿ ಏರುಪೇರು ಉಂಟಾದಾಗ ಊಜಿ ಕೀಟ ಕಾಣಿಸಿಕೊಳ್ಳುತ್ತದೆ. ಹಣ್ಣಿನಲ್ಲಿ ರಂಧ್ರವನ್ನು ತೆಗೆದು ಬೀಜವನ್ನು ಕೀಟ ತಿನ್ನುತ್ತದೆ. ನಂತರ, ಅದೇ ಸ್ಥಳದಲ್ಲಿ ಮೊಟ್ಟೆಗಳನ್ನು ಇಟ್ಟು ಸಂತಾನೋತ್ಪತ್ತಿ ಮಾಡುತ್ತದೆ. ನಂತರ, ಅದೇ ಕೀಟಗಳು ಪಕ್ಕದ ಗಿಡಕ್ಕೂ ವ್ಯಾಪಿಸಿ ಆ ಗೀಡದ ಹಣ್ಣುಗಳಲ್ಲಿಯೂ ರಂಧ್ರವನ್ನು ಕೊರೆಯುತ್ತವೆ. ಇದರಿಂದಾಗಿ, ಟೊಮೆಟೊ ಹಣ್ಣು ಆಗುವ ಸಮಯದಲ್ಲಿ ಸಂಪೂರ್ಣ ಕೊಳೆತು ಹೋಗುತ್ತದೆ. ಮಾರುಕಟ್ಟೆಯಲ್ಲಿ ಬೆಲೆಯೇ ಸಿಗುವುದಿಲ್ಲ. ಇಳುವರಿಯೂ ಕಡಿಮೆಯಾಗುತ್ತದೆ’ ಎಂದು ಕೃಷಿ ತಜ್ಞರೊಬ್ಬರು ಹೇಳಿದರು.

ನಾಗೇಂದ್ರಮಟ್ಟಿಯ ರೈತ ಮಾರುತಿ ಕೊಂಡೆಮ್ಮನವರ, ‘20 ಗುಂಟೆಯಲ್ಲಿ ಟೊಮೆಟೊ ಬೆಳೆದಿದ್ದೇನೆ. ಮಾರುಕಟ್ಟೆಯಲ್ಲಿ ಉತ್ತಮ ದರವಿದ್ದು, ಒಳ್ಳೆಯ ಲಾಭದ ನಿರೀಕ್ಷೆಯಲ್ಲಿದ್ದೆ. ಇನ್ನೊಂದು 15 ದಿನದಲ್ಲಿ ಹಣ್ಣುಗಳನ್ನು ಹರಿಯಬೇಕಿತ್ತು. ಅಷ್ಟರಲ್ಲೇ ಗಿಡಗಳಲ್ಲಿ ಕೀಟ ಕಾಣಿಸಿಕೊಂಡಿದೆ. ಒಂದೊಂದು ಕಾಯಿ–ಹಣ್ಣುಗಳು ಹಾಳಾಗಿ ಉದುರಿಬೀಳುತ್ತಿವೆ’ ಎಂದು ಅಳಲು ತೋಡಿಕೊಂಡರು.

‘ಕೀಟಗಳ ನಿಯಂತ್ರಣಕ್ಕೆ ಔಷಧಿ ಸಿಂಪಡಣೆ ಮಾಡಲಾಗಿದೆ. ಆದರೆ, ಅಂದುಕೊಂಡಷ್ಟು ಇಳುವರಿ ಬರುವುದಿಲ್ಲವೆಂಬ ಚಿಂತೆ ಶುರುವಾಗಿದೆ’ ಎಂದರು.

ದಕ್ಷಿಣ ಆಫ್ರಿಕಾದ ಕೀಟ...

‘ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಬಂದಿರುವ ಟುಟಾ ಅಬ್ಸೊಲುಟಾ ಕೀಟಕ್ಕೆ, ಊಜಿ ಅಥವಾ ರಂಗೋಲಿ ಕೀಟವೆಂದೂ ಕರೆಯುತ್ತಾರೆ. ಸಂಜೆ 6 ಗಂಟೆಯಿಂದ ರಾತ್ರಿ 10 ಗಂಟೆ ಅವಧಿಯಲ್ಲಿ ಈ ಕೀಟಗಳು ಬೆಳೆಗಳ ಮೇಲೆ ದಾಳಿ ಮಾಡುತ್ತವೆ. ಟೊಮೆಟೊ ಗಿಡ ಹಾಗೂ ಕಾಯಿಗಳ ಮೇಲೆ ಕುಳಿತುಕೊಂಡು, ಎಲ್ಲವನ್ನೂ ಕ್ರಮೇಣ ತಿನ್ನುತ್ತವೆ. ಇದರಿಂದ ಶೇ 40ರಷ್ಟು ಇಳುವರಿ ಕಡಿಮೆಯಾಗುತ್ತದೆ’ ಎಂದು ತೋಟಗಾರಿಕೆ ಬೆಳೆಗಳ ವಿಜ್ಞಾನಿ ಡಾ. ಪಿ. ವೆಂಕಟರಾಮಿರೆಡ್ಡಿ ತಿಳಿಸಿದರು.

‘ಟೊಮೆಟೊ ಗಿಡಗಳು 25 ದಿನವಿದ್ದಾಗಿನಿಂದಲೇ ಈ ಕೀಟ ಕಾಣಿಸಿಕೊಳ್ಳುತ್ತದೆ. ಮುಂಜಾಗ್ರತಾ ಕ್ರಮವಾಗಿ ಬಲೆಗಳು, ಹಳದಿ–ನೀಲಿ ಟ್ರ್ಯಾಪ್‌ ಕಾರ್ಡ್‌ಗಳು ಹಾಗೂ ಇತರೆ ಉಪಾಯದ ಮೂಲಕ ಕೀಟಗಳನ್ನು ತಡೆಗಟ್ಟಬಹುದು. ಕರ್ನಾಟಕ ಮಾತ್ರವಲ್ಲದೇ ಆಂಧ್ರಪ್ರದೇಶ, ತೆಲಂಗಾಣ ಹಾಗೂ ತಮಿಳುನಾಡಿನ ರೈತರು ಈ ಕೀಟದಿಂದ ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ’ ಎಂದು ಹೇಳಿದರು.

ಮಾರುಕಟ್ಟೆಯಲ್ಲಿ ರೈತರಿಗೆ ಪ್ರತಿ ಕೆ.ಜಿ ಟೊಮೆಟೊಗೆ ₹ 70ರಿಂದ ₹ 75 ಸಿಗುತ್ತಿದೆ. ಈ ಸಮಯದಲ್ಲೇ ಹುಳುಗಳಿಂದ ಇಳುವರಿ ಕಡಿಮೆಯಾಗಿದೆ.
ಮಾರುತಿ ಕೊಂಡೆಮ್ಮನವರ, ನಾಗೇಂದ್ರಮಟ್ಟಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.