ADVERTISEMENT

ರಾಣೆಬೆನ್ನೂರು: ಟ್ರ್ಯಾಕ್ಟರ್‌ ಉರುಳಿಬಿದ್ದು ಚಾಲಕ ಸಾವು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 7:02 IST
Last Updated 1 ಏಪ್ರಿಲ್ 2024, 7:02 IST

ರಾಣೆಬೆನ್ನೂರು: ಅಪಘಾತ ತಪ್ಪಿಸಲು ಪ್ರಯತ್ನಿಸಿ ಟ್ರ್ಯಾಕ್ಟರ್‌ ಪಲ್ಟಿಯಾಗಿದ್ದು, ಗಂಭೀರ ಗಾಯಗೊಂಡ ಚಾಲಕ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ಘಟನೆ ವೈಟಿ ಮೇಡ್ಲೇರಿ - ಹಿರೇಬಿದರಿ ರಸ್ತೆಯಲ್ಲಿ ಸಂಭವಿಸಿದೆ.

ಟ್ರ್ಯಾಕ್ಟರ್‌ ಚಾಲಕ ಮೇಡ್ಲೇರಿ ತಾಂಡಾದ ನಿವಾಸಿ ರಾಜಪ್ಪ ಗಣಿಯಪ್ಪ ಲಮಾಣಿ(41) ಮೃತಪಟ್ಟವರು.

ಕಟ್ಟಿಗೆ ಹೇರಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್‌ ಮುಂದೆ ಚಲಿಸುತ್ತಿದ್ದ ಬೈಕ್‌ ಸವಾರ ಬೈಕನ್ನು ನಿಯಂತ್ರಿಸಲಾಗದೇ ಯಾವುದೇ ಮುನ್ಸೂಚನೆ ನೀಡದೇ ಬ್ರೇಕ್‌ ಹಾಕಿದ್ದರಿಂದ ಘಟನೆ ನಡೆದಿದೆ.

ADVERTISEMENT

ರಾಜಪ್ಪ ಅವರ ಪತ್ನಿ ಲಕ್ಷ್ಮೀ ರಾಜಪ್ಪ ಲಮಾಣಿ ನೀಡಿದ ದೂರಿನನ್ವಯ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌ ಕಳ್ಳತನ: ನಗರದ ರೈಲ್ವೆ ನಿಲ್ದಾಣದ ಹೊರಗೆ ಪಾರ್ಕಿಂಗ್‌ ಮಾಡಿ ನಿಲ್ಲಿಸಿದ ಹಿರೋ ಸ್ಪ್ಲೆಂಡರ್‌ ಮೋಟಾರ್‌ ಬೈಕ್‌ ಈಚೆಗೆ ಕಳುವಾಗಿದೆ. ಎಲ್ಲಾ ಕಡೆ ಹುಡುಕಿದರೂ ಸಿಗದ ಕಾರಣ ಬೈಕ್‌ ಮಾಲೀಕ ಇಲ್ಲಿನ ವಿಕಾಸ ನಗರದ ಸೋಮನಗೌಡ ಬಸವನಗೌಡ್ರ ಪಾಟೀಲ ಠಾಣೆಗೆ ದೂರು ಸಲ್ಲಿಸಿದ್ದಾರೆ.

ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈತ ಆತ್ಮಹತ್ಯೆ:

ಕೃಷಿ ಚಟುವಟಿಕೆಗೆ ಮಾಡಿದ ಸಾಲ ತೀರಿಸಲಾಗದೇ ಮನನೊಂದು ತಾಲ್ಲೂಕಿನ ಲಿಂಗದಹಳ್ಳಿ ಗ್ರಾಮದ ರೈತರ ಬಸವರಾಜ ನಾಗಪ್ಪ ಗುಡಕೇರಿ(25) ಅವರು ಗ್ರಾಮದ ಕರಬಸಪ್ಪ ಮೈಲಪ್ಪ ದುರುಗಣ್ಣನವರ ಅವರ ಜಮೀನಿನಲ್ಲಿ ವಿಷ ಸೇವಿಸಿ ಸಾವನ್ನಪ್ಪಿದ ಘಟನೆ ಮಾ.29 ರಂದು ನಡೆದಿದೆ.

ಕೂಡಲೇ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಸಿ.ಜೆ ಆಸ್ಪತ್ರೆಗೆ ದಾಖಲಿಸುವಾಗ ಆಸ್ಪತ್ರೆಯ ಗೇಟ್‌ ಬಳಿ ಮೃತಪಟ್ಟಿರುವ ಬಗ್ಗೆ ವೈದ್ಯರು ಖಚಿತ ಪಡಿಸಿದ್ದಾರೆ. ಅವರ ತಂದೆ ನಾಗಪ್ಪ ಗುಡಕೇರಿ ಹಲಗೇರಿ ಠಾಣೆಗೆ ದೂರು ಸಲ್ಲಿಸಿದ್ದಾರೆ.

ರಾಣೆಬೆನ್ನೂರಿನ ಇಂಡಿಯನ್‌ ಬ್ಯಾಂಕಿನಲ್ಲಿ ₹45 ಸಾವಿರ, ಹೊಸ ಮನೆ ಕಟ್ಟಲು ಅಪ್ಟೋಸ್‌ ಹೌಸಿಂಗ್‌ ಫೈನಾನ್ಸ್‌ನಲ್ಲಿ ₹5 ಲಕ್ಷ ಸಾಲ ಮಾಡಿದ್ದರು. ಮಳೆ ಬೆಳೆ ಸರಿಯಾಗಿ ಬಾರದೇ ಇರುವುದನ್ನು ಮನಸ್ಸಿಗೆ ಹಚ್ಚಿಕೊಂಡು ಮಾ.29 ರಂದು ವಿಷ ಸೇವಿಸಿದ್ದಾರೆ ಎಂದು ಪೊಲೀಸರಿಂದ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.