ADVERTISEMENT

ಸಾಹಸ ಕ್ರೀಡೆಗೆ ‘ತಿಮ್ಮಕ್ಕ ಸಸ್ಯೋದ್ಯಾನ’

ಹಾವೇರಿಯ ಕರ್ಜಗಿಯಲ್ಲಿ ಮನ ಸೆಳೆಯುತ್ತಿರುವ ಟ್ರೀ ಪಾರ್ಕ್: ಸಂಜೆ, ವಾರಾಂತ್ಯಕ್ಕೊಂದು ವಿಹಂಗಮ ತಾಣ

ಹರ್ಷವರ್ಧನ ಪಿ.ಆರ್.
Published 12 ಮೇ 2019, 19:46 IST
Last Updated 12 ಮೇ 2019, 19:46 IST
ಹಾವೇರಿಯ ಕರ್ಜಗಿ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ –ಪ್ರಜಾವಾಣಿ ಚಿತ್ರಗಳು: ನಾಗೇಶ ಬಾರ್ಕಿ
ಹಾವೇರಿಯ ಕರ್ಜಗಿ ರಸ್ತೆಯಲ್ಲಿರುವ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನ –ಪ್ರಜಾವಾಣಿ ಚಿತ್ರಗಳು: ನಾಗೇಶ ಬಾರ್ಕಿ   

ಹಾವೇರಿ: ಇಲ್ಲಿನ ಕರ್ಜಗಿ ರಸ್ತೆ ಬದಿಯಅರಣ್ಯ ಇಲಾಖೆಯ ‘ಸಾಲು ಮರದ ತಿಮ್ಮಕ್ಕ ಸಸ್ಯೋದಾನ’ವು ಹಿರಿಯರು–ಜೋಡಿಗಳಿಗೆ ಬಿಸಿಲ ಬೇಗೆಯಿಂದ ತಂಪು ನೀಡಿದರೆ, ಪುಟಾಣಿಗಳಿಗೆ ಸಾಹಸ ಕ್ರೀಡೆಗಳ ಕೇಂದ್ರವಾಗಿದೆ. ರಜಾ–ಮಜಾ ಸವಿಯಲು ಇಚ್ಛಿಸುವ ಕುಟುಂಬಗಳಿಗೆ, ನಿಸರ್ಗದ ಜೊತೆ ‘ಲೋ ರೋಪ್‌ ಆ್ಯಕ್ಟಿವಿಟಿ’ ಹೊಸ ಅನುಭವ ನೀಡುತ್ತವೆ.

ಜಿಲ್ಲಾ ಕೇಂದ್ರದಿಂದ ಕರ್ಜಗಿಗೆ ಹೋಗುವ ಹಾದಿಯಲ್ಲಿ ಸಿಗುವ ಕೇಂದ್ರೀಯ ವಿದ್ಯಾಲಯ ಹಾಗೂ ವಸತಿ ನಿಲಯಗಳ ಮುಂಭಾಗದ ಐದು ಎಕರೆಯಲ್ಲಿ ಉದ್ಯಾನವಿದೆ. ಉದ್ಯಾನದಲ್ಲಿ ಅರಳಿ, ಆಲ, ಬಸರೀ ಸೇರಿದಂತೆ ಹೂ–ಹಣ್ಣು ಬಿಡುವ ಸಸ್ಯ ಸಂಪತ್ತನ್ನು ಬೆಳೆಸಲಾಗುತ್ತಿದೆ. ಸದಾ ಹಸಿರಿನಿಂದ ನಳನಳಿಸುವ ಸಸ್ಯ ಪ್ರಭೇದಗಳಿಂದಾಗಿ, ನವಿಲು, ಮಂಗಟೆ, ಗಿಳಿ, ಕೋಗಿಲೆ, ಮರ ಕುಟ್ಟಿಗ ಮತ್ತಿತರ ಹಕ್ಕಿಗಳು, ಜಿಂಕೆ, ಕೃಷ್ಣಮೃಗ ಇತ್ಯಾದಿ ಹಕ್ಕಿ–ಪ್ರಾಣಿಗಳು ಬರುತ್ತಿವೆ.

‘ಇದು ಟ್ರೀ ಪಾರ್ಕ್‌. ಹೀಗಾಗಿ, ಅರಣ್ಯದ ಸ್ವಚ್ಛ ಪರಿಸರ, ಶುದ್ಧ ಗಾಳಿ, ಆಹ್ಲಾದಕ ಅನುಭವವನ್ನು ಸಿಗುವಂತೆ ರೂಪಿಸಿದ್ದೇವೆ. ಅರಣ್ಯ ಪ್ರದೇಶದಲ್ಲಿ ನಿರ್ವಹಿಸಬಹುದಾದ ಸಾಹಸ ಕ್ರೀಡೆಗಳನ್ನೂ ಪರಿಚಯಿಸಿದ್ದೇವೆ. ನಗರದ ಹೊಗೆ, ಬಿಸಿಲು, ಕಾಂಕ್ರಿಟ್‌, ಟ್ರಾಫಿಕ್ ಕಿರಿಕಿರಿಯಿಂದ ಸಂಪೂರ್ಣ ಮುಕ್ತವಾಗಿದೆ. ದೊಡ್ಡವರಿಗೆ ₹10, ಮಕ್ಕಳಿಗೆ ₹ 5 ಪ್ರವೇಶ ಶುಲ್ಕವಿದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಗಿರೀಶ್‌ ಸಿ.ಎಚ್. ವಿವರಿಸಿದರು.

ADVERTISEMENT

ಸಾಹಸ ಕ್ರೀಡೆ: ಉದ್ಯಾನದಲ್ಲಿ ಮಕ್ಕಳಿಗೆ ಸಾಹಸ ಕ್ರೀಡೆಗಳಿಗಾಗಿ ‘ಲೋ ರೋಪ್ ಆ್ಯಕ್ಟಿವಿಕಟಿ’ ಇದೆ. ಈ ಪೈಕಿ ಟನಲ್ ಕ್ರಾಸ್‌, ಸಮತಲ ಏಣಿ, ಆನೆ ಹೆಜ್ಜೆ ನಡಿಗೆ, ಓಲಾಡುವ ಏಣಿ, ಬರ್ಮಾ ಸೇತುವೆ, ಇಸಿ ಬೆಸ್ಸಿ, ಓಲಾಡುವ ಟಯರ್, ಓಲಾಡುವ ಬೀಮ್, ಮಿನಿ ಜಿಪ್‌ ಲೈನ್, ಕಮಾಂಡೋ ನೆಟ್‌ಮತ್ತಿತರ ಸಾಹಸ ಮಾದರಿಗಳಿವೆ.

ಆಟೋಟ:ಸಾಹಸದ ಜೊತೆ ಜಾರುಬಂಡಿ, ಉಯ್ಯಾಲೆ, ಕಾಡಿನ ನಡಿಗೆ, ಏತಪಾತ, ಪ್ಯಾರಾಗೋಲ ಮತ್ತಿತರ ಆಟಿಕೆಗಳೂ ಮಕ್ಕಳಿಗಾಗಿವೆ. ಇಲ್ಲಿ ಮಕ್ಕಳು ಆಟವಾಡುತ್ತಾ ಕಾಲ ಕಳೆಯಬಹುದು. ಇಲ್ಲವೇ, ಜೊತೆಯಾಗಿ ಕಣ್ಣಾಮುಚ್ಚಾಲೆ ಮತ್ತಿತರ ತಮ್ಮದೇ ಆಟಗಳನ್ನೂ ಆಡಬಹುದು.

ಮಾಹಿತಿ ಫಲಕ:
ಉದ್ಯಾನದ ಅಲ್ಲಲ್ಲಿ ಮಾಹಿತಿ ಫಲಕಗಳನ್ನು ಹಾಕಲಾಗಿದ್ದು, ಪಕ್ಷಿ ಹಾಗೂ ಪ್ರಾಣಿ ಪ್ರಬೇಧದ ಮಾಹಿತಿಗಳಿವೆ. ಇದು ಮಕ್ಕಳಿಗೆ ಆಟದ ಜೊತೆ ಕಲಿಕೆಯಂತಿದೆ. ಇದರಲ್ಲಿ ಈ ಭಾಗದ ಹಕ್ಕಿಗಳು, ಪ್ರಾಣಿಗಳು ಅವುಗಳ ಆಹಾರ ಕ್ರಮ, ಊರು ಮತ್ತಿತರ ಮಾಹಿತಿಗಳು ಪಠ್ಯ ಹಾಗೂ ಸಾಮಾನ್ಯ ಜ್ಞಾನಕ್ಕೆ ಪೂರಕವಾಗಿವೆ.

ವಿಹಾರ ತಾಣ:
ಉದ್ಯಾನದಲ್ಲಿ ಪ್ಯಾರಾಗೋಲ, ಬಿದಿರಿನ ಗುಡಿಸಲು ಮಾದರಿ, ಅಲ್ಲಲ್ಲಿ ನೆರಳಿನ ಆಸರೆ, ಕುರ್ಚಿಗಳನ್ನು ಹಾಕಲಾಗಿದೆ. ಇದು ಕುಟುಂಬ ಹಾಗೂ ಜೋಡಿಗಳಿಗೆ ನಿರುಮ್ಮಳವಾಗಿ ಕಾಲ ಕಳೆಯಲು ಸೂಕ್ತ ಸ್ಥಳವಾಗಿವೆ. ಅತ್ತ ಮಕ್ಕಳು ಆಡುತ್ತಿದ್ದರೆ, ಇತ್ತ ಹಿರಿಯರು ತಮ್ಮದೇ ಸಂಭ್ರಮದಲ್ಲಿ ತೊಡಗಬಹುದು.

ಪ್ರತಿ ಸಸ್ಯವನ್ನೂ ಜತನವಾಗಿ ಬೆಳೆಯಲಾಗುತ್ತಿದೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಬಂದಾಗ, ಟ್ಯಾಂಕರ್‌ ನೀರು ಹಾಕುತ್ತಿದ್ದೇವೆ. ರಜಾ ಕಳೆಯಲು ಮಕ್ಕಳಿಗೆ ಉತ್ತಮ ತಾಣ ಎನ್ನುತ್ತಾರೆ ವಲಯ ಅರಣ್ಯಾಧಿಕಾರಿ ಉಮರ್ ಬಾಷಾ.

ಸದ್ಯ ಇಲ್ಲಿ ಕ್ಯಾಂಟೀನ್ ಇಲ್ಲ. ನೀರು–ಆಹಾರ ತಂದರೆ ಉತ್ತಮ. ಆದರೆ, ಪ್ಲಾಸ್ಟಿಕ್ ನಿಷಿದ್ಧ. ಸ್ವಚ್ಛತೆ ಬಹುಮುಖ್ಯ ಎನ್ನುತ್ತಾರೆ ಇಲ್ಲಿನ ಸಿಬ್ಬಂದಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.