ರಾಣೆಬೆನ್ನೂರು: ನಗರದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗಲಿ ಎಂದು ಇಲ್ಲಿನ ಹಳೇ ಪಿ.ಬಿ.ರಸ್ತೆಯ ಎರಡು ಬದಿ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ವಾಹನಗಳ ಪಾರ್ಕಿಂಗ್ ಮಾಡಲು ಸಂಚಾರಿ ಠಾಣೆ ಮತ್ತು ನಗರಸಭೆಯವರು ಬಿಳಿ ಬಣ್ಣದ ಗುರುತು ಮಾಡಿದ್ದು, ಇದರೊಳಗೆ ದ್ವಿಚಕ್ರ ವಾಹನ ಸವಾರರು ವಾಹನಗಳನ್ನು ನಿಲ್ಲಿಸಲು ಆರಂಭಿಸಿದ್ದಾರೆ.
ಕೋರ್ಟ್, ಬಸ್ ನಿಲ್ದಾಣ, ಹಳೇ ಪಿ.ಬಿ.ರಸ್ತೆ ಸೇರಿದಂತೆ ನಗರದ ಹಲವೆಡೆ ಎಲ್ಲಂದರಲ್ಲಿ ಸಾರ್ವಜನಿಕರು ವಾಹನಗಳನ್ನು ಪಾರ್ಕಿಂಗ್ ಮಾಡುತ್ತಿದ್ದರು. ಇದರಿಂದ ರಸ್ತೆ ಕಿರಿದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಇದರಿಂದ ಅಪಘಾತಗಳೂ ಸಂಭವಿಸುತ್ತಿದ್ದವು.
ಈಚೆಗೆ ಪಂಚಮುಖಿ ದೇವಸ್ಥಾನ ರಸ್ತೆಯ ಬಳಿ ಪಿ.ಬಿ. ರಸ್ತೆ ದಾಟುವಾಗ ಬೈಕ್ ಸವಾರರೊಬ್ಬರ ಮೇಲೆ ಟಿಪ್ಪರ್ ಹರಿದು ಸಾವನ್ನಪ್ಪಿದ ಘಟನೆ ನಡೆದಿತ್ತು.
ಇದನ್ನು ಕಂಡ ಶಾಸಕ ಪ್ರಕಾಶ ಕೋಳಿವಾಡ ಅವರು ಸಂಚಾರಿ ಠಾಣೆ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ, ಪ್ರತಿಯೊಬ್ಬರು ಸಂಚಾರಿ ನಿಯಮ ಪಾಲಿಸುವುದು ಅಗತ್ಯವಿದೆ. ಈ ಬಗ್ಗೆ ಸಾರ್ಜನಿಕರಲ್ಲಿ ಜನ ಜಾಗೃತಿ ಮೂಡಿಸಬೇಕು. ಎಲ್ಲ ಕಡೆ ಪ್ರಮುಖ ರಸ್ತೆಗಳಲ್ಲಿ ವಾಹನ ಪಾರ್ಕಿಂಗ್ ಮಾಡಲು ಸಂಚಾರಿ ನಿಯಮದ ಪ್ರಕಾರ ಬಿಳಿ ಪಟ್ಟಿ ಬಳಿಯಲು ಆದೇಶ ಮಾಡಿದ ಹಿನ್ನೆಲೆಯಲ್ಲಿ ಸಂಚಾರಿ ಠಾಣೆ ಪೊಲೀಸರು ಬಿಳಿ ಪಟ್ಟಿ ಹಾಕುವ ಮೂಲಕ ಸುಗಮ ಸಂಚಾರಕ್ಕೆ ಒತ್ತು ಕೊಟ್ಟಿದ್ದಾರೆ.
ಈ ಹಿನ್ನೆಲೆಯಲ್ಲಿ ನಗರದ ಹಳೇ ಪಿ.ಬಿ.ರಸ್ತೆ, ಬಸ್ ನಿಲ್ದಾಣ ಮತ್ತು ಕೋರ್ಟ್ ವೃತ್ತದ ಬಳಿ, ಅಂಚೆ ಕಚೇರಿ ವೃತ್ತ, ಎಂ.ಜಿ. ರಸ್ತೆ, ನೆಹರೂ ಮಾರುಕಟ್ಟೆ, ದೇರವಗುಡ್ಡ ರಸ್ತೆ, ಬಿಳಿ ಪಟ್ಟಿಯನ್ನು ಮಾರ್ಕ್ ಮಾಡಲಾಗಿದೆ. ಟ್ರಾಫಿಕ್ ಸಿಗ್ನಲ್ ಬಳಿ ಝೀಬ್ರಾ ಗೆರೆಗಳನ್ನು ಬರೆಯಲಾಗಿದೆ. ಇದರಿಂದ ಅಪಘಾತಗಳ ಸಂಖ್ಯೆ ಕಡಿಮೆಯಗಾಗುತ್ತದೆ. ನಗರದ ಸೌಂದರ್ಯ ಕೂಡ ಹೆಚ್ಚುತ್ತದೆ. ವಾಹನಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ ಎಂದು ಸಂಚಾರಿ ಪೊಲೀಸರು ತಿಳಿಸಿದರು.
‘ಪಿ.ಬಿ.ರಸ್ತೆಯಲ್ಲಿ ಬಿಳಿ ಪಟ್ಟಿಯ ಮಾರ್ಕ್ ಮಾಡಿದ್ದರಿಂದ ಮೂರು ನಾಲ್ಕು ದಿನಗಳಿಂದ ಬಿಳಿ ಪಟ್ಟಿಯಲ್ಲಿ ಬೈಕ್ ನಿಲ್ಲಿಸಿದ್ದರಿಂದ ಅಚ್ಚುಕಟ್ಟಾಗಿ ಕಾಣುತ್ತಿದೆ. ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಬೇಕು‘ ಎನ್ನುತ್ತಾರೆ ಕನಸಿನ ರಾಣೆಬೆನ್ನೂರು ತಂಡದ ಸಂಚಾಲಕ ಡಾ.ನಾರಾಯಣ ಪವಾರ.
Quote - ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ಮಾಡಿ ನಗರದಲ್ಲಿ ಸಂಚಾರ ನಿಯಮ ಪಾಲನೆಗೆ ಕ್ರಮವಹಿಸಬೇಕು ಎಂದು ಸೂಚಿಸಲಾಗಿತ್ತು. ಹೀಗಾಗಿ ವಾಹನಗಳ ನಿಲುಗಡೆಗೆ ಬಿಳಿ ಪಟ್ಟಿ ಗುರುತು ಮಾಡಲಾಗಿದೆ. ಎಲ್ಲರೂ ನಿಯಮ ಪಾಲಿಸಬೇಕು. ಪ್ರಕಾಶ ಕೋಳಿವಾಡ ಶಾಸಕರು
ನಗರದಲ್ಲಿ ಬಿಳಿ ಪಟ್ಟಿಯನ್ನು ಹಾಕಿದ್ದರಿಂದ ಸುಗಮ ಸಂಚಾರಕ್ಕೆ ಮತ್ತು ತುರ್ತು ವಾಹನ ಸಂಚಾರಕ್ಕೆ ಅನುಕೂಲವಾಗಿದೆ. ಪ್ರತಿಯೊಬ್ಬರೂ ಸಂಚಾರಿ ನಿಯಮ ಪಾಲಿಸಬೇಕು.ಶಂಕರ ಸಿಪಿಐ ನಗರ ಠಾಣೆ
‘ನಿಯಮ ಉಲ್ಲಂಘಿಸಿದರೆ ಕ್ರಮ’
‘ವಾಹನ ಸವಾರರು ಇನ್ನು ಮೇಲೆ ಎಲ್ಲಿ ಬೇಕಾದಲ್ಲಿ ವಾಹನಗಳನ್ನು ಪಾರ್ಕ್ ಮಾಡುವಂತಿಲ್ಲ. ಬಿಳಿಗೆರೆಯ ಪಟ್ಟಿಯಲ್ಲಿಯೇ ಬೈಕ್‌ಗಳನ್ನು ನಿಲ್ಲಿಸಬೇಕು. ಏಕ ಮುಖ ರಸ್ತೆಯಲ್ಲಿ ಎದುರಿಗೆ ಬರುವಂತಿಲ್ಲ. ಇಷ್ಟರಲ್ಲಿಯೇ ಸಂಚಾರಿ ನಾಮಫಲಕಗಳನ್ನು ಅಳವಡಿಸಲಾಗುವುದು. ಸಾರ್ವಜನಿಕರು ತಪ್ಪದೇ ಸಂಚಾರಿ ನಿಯಮಗಳನ್ನು ಪಾಲಿಸಬೇಕು. ಉಲ್ಲಂಘಿಸಿದರೆ ಕ್ರಮಕೈಗೊಳ್ಳಲಾಗುವುದು’ ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ. ತಹಶೀಲ್ದಾರ್ ಕಚೇರಿ ಬಸ್ ನಿಲ್ದಾಣ ಕೋರ್ಟ್ ಆವರಣ ಹೊಟೇಲ್ ಹೂವಿನ ಅಂಗಡಿ ಪೆಟ್ರೋಲ್ ಬಂಕ್ ಮುಂದೆ ರಸ್ತೆ ಬದಿಗೆ ವಾಹನಗಳನ್ನು ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ಸಮೀಪದ ಶಾಲಾ ಕಾಲೇಜುಗಳು ಇರುವುದರಿಂದ ವಿದ್ಯಾರ್ಥಿಗಳ ಸಂಚಾರಕ್ಕೂ ತೊಂದರೆಯಾಗುತ್ತಿತ್ತು. ಈಗ ಬಿಳಿ ಪಟ್ಟಿ ಹಾಕಿದ್ದರಿಂದ ಅನುಕೂಲವಾಗಿದೆ ಎಂದು ಸಾಫ್ಟವೇರ್ ಎಂಜಿನಿಯರ್ ಇರ್ಫಾನ್ ದಿಡಗೂರ ಹಾಗೂ ನಾಗರಾಜ ಮರಿಯಮ್ಮನವರ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.