ADVERTISEMENT

ಡಿ.24ರಂದು ಬೃಹತ್‌ ಉದ್ಯೋಗ ಮೇಳ

ಶರಣಬಸವ ಅಂಗಡಿ ಲಾ ಫರ್ಮ್‌ ವತಿಯಿಂದ ಆಯೋಜನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 6:45 IST
Last Updated 12 ಡಿಸೆಂಬರ್ 2023, 6:45 IST
ಶರಣಬಸವ ಅಂಗಡಿ 
ಶರಣಬಸವ ಅಂಗಡಿ    

ಹಾವೇರಿ: ಶರಣಬಸವ ಲಾ ಫರ್ಮ್, ಹಾವೇರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ, ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಡಿ.24ರಂದು ನಗರದ ಹುಕ್ಕೇರಿಮಠ ಶಿವಲಿಂಗೇಶ್ವರ ಮಹಿಳಾ ಮಹಾವಿದ್ಯಾಲಯದ ಆವರಣದಲ್ಲಿ ಬೆಳಿಗ್ಗೆ 8.30ಕ್ಕೆ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ‘ಶರಣಬಸವ ಲಾ ಫರ್ಮ್’ ಚೇರಮನ್ ಶರಣಬಸವ ಅಂಗಡಿ ತಿಳಿಸಿದರು. 

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮೇಳದಲ್ಲಿ 30ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳು ಪಾಲ್ಗೊಳ್ಳಲಿದ್ದು, ಸುಮಾರು 5 ಸಾವಿರ ಉದ್ಯೋಗಾಕಾಂಕ್ಷಿಗಳಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ. ಕ್ಯೂಆರ್ ಕೋಡ್ ಬಳಸಿ ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳಬಹುದು. 5ನೇ ತರಗತಿಯಿಂದ ಯಾವುದೇ ಪದವಿ ಹಾಗೂ ತಾಂತ್ರಿಕ ಪದವಿ ಹೊಂದಿರುವ ಉದ್ಯೋಗಾಕಾಂಕ್ಷಿಗಳು ಮೇಳದಲ್ಲಿ ಪಾಲ್ಗೊಳ್ಳಬಹುದು ಎಂದು ಹೇಳಿದರು. 

ಆನ್‍ಲೈನ್ ಮೂಲಕ ನೋಂದಾಯಿಸಿಕೊಳ್ಳದವರು ನೇರವಾಗಿ ಸಹ ಪಾಲ್ಗೊಳ್ಳಲು ಅವಕಾಶವಿದೆ. ಈಗಾಗಲೇ 700 ಉದ್ಯೋಗಾಕಾಂಕ್ಷಿಗಳು ನೋಂದಾಯಿಸಿಕೊಂಡಿದ್ದು, ಸುಮಾರು 7 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ADVERTISEMENT

ಉದ್ಯೋಗ ಮೇಳದ ಕುರಿತು ಸಂಬಂಧಿಸಿದ ಸರ್ಕಾರಿ ಇಲಾಖೆ ಮತ್ತು ಸಂಸ್ಥೆಗಳ ಜತೆಗೂ ಸಮನ್ವಯ ಸಾಧಿಸಲಾಗಿದೆ. ಸಾಧ್ಯವಾದಷ್ಟು ಸ್ಥಳೀಯರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ಚಿಂತನೆ ಇದೆ. ಇದು ರಾಜಕೀಯ ರಹಿತವಾದ ಸೇವಾ ಕಾರ್ಯ ಎಂದು ಸ್ಪಷ್ಟಪಡಿಸಿದ ಅವರು ಉದ್ಯೋಗ ಮೇಳದ ನಂತರವೂ ಉದ್ಯೋಗ ಭರವಸೆ ನೀಡಿದ ಸಂಸ್ಥೆಗಳು ಹಾಗೂ ಉದ್ಯೋಗಾಕಾಂಕ್ಷಿಗಳ ಮಧ್ಯ ಸೇತುವೆಯಾಗಿ ಕೆಲಸ ಮಾಡಲಿದ್ದೇವೆ ಎಂದರು.

ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ರವಿ ಮೆಣಸಿನಕಾಯಿ ಮಾತನಾಡಿ, ಜಿಲ್ಲೆಯ ಯುವಕರಿಗೆ ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಆಯೋಜಿಸಿರುವ ಉದ್ಯೋಗ ಮೇಳಕ್ಕೆ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯಿಂದ ಸಹಕಾರ ನೀಡಲಾಗುವುದು. ಜಿಲ್ಲೆಯ ಯುವಕ, ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ವೇಳದ ಸದುಪಯೋಗ ಪಡೆಯಬೇಕು ಮಾಹಿತಿಗೆ ಮೊ:6362857426 ಸಂಪರ್ಕಿಸಿ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ಶಿವಣ್ಣ ವಡಕಣ್ಣನವರ, ಸುನೀಲ ಮೇಧಾವಿ, ಮಹೇಶ ಗುಜ್ಜರಿ, ಈರಣ್ಣ ಗಾಣಗೇರ, ವಿಜಯಕುಮಾರ ಪೂಜಾರ, ಅತೀಶ ಪಾಟೀಲ, ಎಚ್.ಎಂ. ಸೊಪ್ಪಿನ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.