ADVERTISEMENT

ಯೂರಿಯಾ ಅಕ್ರಮ ದಾಸ್ತಾನು: ಆರೋಪ

ರೈತರೊಂದಿಗೆ ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಚರ್ಚೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2020, 15:51 IST
Last Updated 31 ಜುಲೈ 2020, 15:51 IST
ಸಂಜಯ ಬಿ.ಶೆಟ್ಟಣ್ಣವರ, ಜಿಲ್ಲಾಧಿಕಾರಿ
ಸಂಜಯ ಬಿ.ಶೆಟ್ಟಣ್ಣವರ, ಜಿಲ್ಲಾಧಿಕಾರಿ   

ಹಾವೇರಿ: ಜಿಲ್ಲೆಯ ರೈತರ ಸಮಸ್ಯೆಗಳು ಗಮನಕ್ಕೆ ಬಂದಿವೆ. ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಜಿಲ್ಲಾಧಿಕಾರಿ ಸಂಜಯ ಬಿ.ಶೆಟ್ಟಣ್ಣವರ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ವಿವಿಧ ರೈತ ಮುಖಂಡರೊಂದಿಗೆ ಅವರು ಚರ್ಚಿಸಿದರು.

ಬರ ಮತ್ತು ಅತಿವೃಷ್ಟಿ ನೆರೆಯಿಂದ ರೈತರು ಪ್ರತಿ ವರ್ಷ ತೊಂದರೆಗೆ ಒಳಗಾಗುತ್ತಿದ್ದರು. ಈ ವರ್ಷ ಉತ್ತಮ ಮಳೆಯಾಗುತ್ತಿದೆ. ಉತ್ತಮ ಫಸಲು ಬಂದಿದೆ. ಕಳೆದ ವರ್ಷಗಳಿಗಿಂತ ದ್ವಿಗುಣವಾದ ಗೊಬ್ಬರ ಬೇಡಿಕೆ ಇದೆ. ಪ್ರಸ್ತುತ ಮಳೆಯಾಗುತ್ತಿರುವುದರಿಂದ ಯೂರಿಯಾ ಗೊಬ್ಬರದ ಕೊರತೆ ಉಂಟಾಗಿದ್ದು, ಕೆಲವರು ಅನಧಿಕೃತವಾಗಿ ದಾಸ್ತಾನು ಮಾಡಿಕೊಂಡಿದ್ದಾರೆ. ರೈತರ ಬೇಡಿಕೆಯಂತೆ ಯೂರಿಯಾವನ್ನು ಮೂರ್ನಾಲ್ಕು ದಿನಗಳಲ್ಲಿ ಪೂರೈಸಬೇಕು. ಅಕ್ರಮವಾಗಿ ಯೂರಿಯಾ ಗೊಬ್ಬರ ದಾಸ್ತಾನು ಮಾಡಿಕೊಂಡು ಕೃತಕ ಅಭಾವ ಸೃಷ್ಟಿಸುವವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ರೈತ ಮುಖಂಡರು ಜಿಲ್ಲಾಧಿಕಾರಿಗೆ ಬೇಡಿಕೆ ಸಲ್ಲಿಸಿದರು.

ADVERTISEMENT

ಜಿಲ್ಲಾಧಿಕಾರಿ ಸಂಜಯ ಶೆಟ್ಟಣ್ಣವರ ಮಾತನಾಡಿ, ಬೆಳೆ ಪರಿಹಾರ ಹಾಗೂ ಗೊಬ್ಬರ ಸಮಸ್ಯೆಗಳ ಕುರಿತಂತೆ ಶೀಘ್ರವೇ ರೈತರ ಸಭೆ ಕರೆದು ಚರ್ಚಿಸಲಾಗುವುದು. ಸದ್ಯ ಪೂರೈಕೆಯಾಗುವ ಗೊಬ್ಬರವನ್ನು ಸೊಸೈಟಿಗಳ ಮೂಲಕ ವಿತರಣೆ ಮಾಡಲಾಗುವುದು. ಅಕ್ರಮ ದಾಸ್ತಾನು ಮಾಡಿ ಕೃತ ಅಭಾವ ಸೃಷ್ಟಿಸುವವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ತಾಳ್ಮೆಯಿಂದ ಎಲ್ಲರೂ ಸಹಕರಿಸಿ ಎಂದು ಮನವಿ ಮಾಡಿದರು.

ಕೃಷಿ ಜಂಟಿ ನಿರ್ದೇಶಕ ಮಂಜುನಾಥ ಅವರು ರೈತರಿಗೆ ಮಾಹಿತಿ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.