ADVERTISEMENT

₹300 ಕೋಟಿ ಅನುದಾನ ವಾಪಸ್‌: ಖಂಡನೆ

ಅಲೆಮಾರಿ ಸಮುದಾಯಕ್ಕೆ ಮನೆ ನಿರ್ಮಿಸಿಕೊಡಲು ಒಕ್ಕೊರಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 16:02 IST
Last Updated 25 ಫೆಬ್ರುವರಿ 2023, 16:02 IST
ಅಲೆಮಾರಿ ಸಮುದಾಯಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ರಾಜೀವಗಾಂಧಿ ವಸತಿ ನಿಗಮದಿಂದ ಮಂಜೂರಾಗಿದ್ದ ₹300 ಕೋಟಿಯನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಖಂಡಿಸಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಹಾವೇರಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು  –ಪ್ರಜಾವಾಣಿ ಚಿತ್ರ 
ಅಲೆಮಾರಿ ಸಮುದಾಯಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ರಾಜೀವಗಾಂಧಿ ವಸತಿ ನಿಗಮದಿಂದ ಮಂಜೂರಾಗಿದ್ದ ₹300 ಕೋಟಿಯನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಖಂಡಿಸಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಹಾವೇರಿ ನಗರದಲ್ಲಿ ಶನಿವಾರ ಪ್ರತಿಭಟನೆ ನಡೆಯಿತು  –ಪ್ರಜಾವಾಣಿ ಚಿತ್ರ    

ಹಾವೇರಿ: ಅಲೆಮಾರಿ ಸಮುದಾಯಗಳಿಗೆ ಮನೆಗಳನ್ನು ನಿರ್ಮಿಸಿಕೊಡಲು ರಾಜೀವಗಾಂಧಿ ವಸತಿ ನಿಗಮದಿಂದ ಮಂಜೂರಾಗಿದ್ದ ಹಣವನ್ನು ಸರ್ಕಾರ ಹಿಂದಕ್ಕೆ ಪಡೆದಿರುವುದನ್ನು ಖಂಡಿಸಿ, ₹300 ಕೋಟಿ ಅನುದಾನವನ್ನು ವಾಪಸ್‌ ನೀಡಬೇಕು ಎಂದು ಒತ್ತಾಯಿಸಿ ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನಾ ರ‍್ಯಾಲಿ ನಡೆಸಲಾಯಿತು.

ನಗರದ ಕಾಗಿನೆಲೆ ರಸ್ತೆ ಮುರುಘರಾಜೇಂದ್ರ ಮಠದಿಂದ ಹೊಸಮನಿ ಸಿದ್ದಪ್ಪ ಸರ್ಕಲ್‍ವರೆಗೆ ಶನಿವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶೆಟ್ಟಿ ವಿಭೂತಿ ಮಾತನಾಡಿ, ಊರಿಲ್ಲದ, ಸೂರಿಲ್ಲದ ಮತ್ತು ವಿಳಾಸವೂ ಇರದ ಲಕ್ಷಾಂತರ ಅಲೆಮಾರಿ ಸಮುದಾಯಗಳಾದ ಹಕ್ಕಿಪಿಕ್ಕಿಗಳು, ಹಂದಿಜೋಗಿಗಳು, ಸುಡುಗಾಡು ಸಿದ್ಧರು, ಚನ್ನದಾಸರು, ಬುಡ್ಗಜಂಗಮರು, ದೊಂಬರು, ಕಿಳ್ಳೆಕ್ಯಾತರು, ಕೊರಚ, ಕೊರಮ ಮುಂತಾದ ಜನರಿಗೆ ಮನೆ ಕಟ್ಟಿಕೊಡಲು ಕಳೆದ ಎರಡು ವರ್ಷಗಳಿಂದ ಮೀಸಲಿರಿಸಿದ್ದ ₹300 ಕೋಟಿ ಅನುದಾನವನ್ನು ಸರ್ಕಾರ ವಾಪಸ್ ಪಡೆದಿರುವುದು ಖಂಡನೀಯ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಗುಡಸಲಿನಲ್ಲಿ ವಾಸ ಇರುವ ಅಲೆಮಾರಿಗಳಿಗೆ ಸೂರು ಕಟ್ಟಿಕೊಡುವುದು ಸರ್ಕಾರ ಕರ್ತವ್ಯವಾಗಿದೆ. ಆದರೆ ಸರ್ಕಾರವೇ ಸೂರು ನಿರ್ಮಿಸಿ ಕೊಡುವ ಬದಲು ಸೂರು ನಿರ್ಮಿಸಲು ನಿಗದಿಯಾಗಿದ್ದ ಹಣವನ್ನು ವಾಪಾಸ್‌ ಪಡೆದಿರುವುದು ದುರಂತದ ಸಂಗತಿಯಾಗಿದೆ. ಅಲೆಮಾರಿಗಳ ಬಗ್ಗೆ ಸರ್ಕಾರಕ್ಕೆ ಸ್ವಲ್ಪವಾದರೂ ಕಾಳಜಿ ಇದ್ದರೆ ಕೂಡಲೇ ಹಣವನ್ನು ಮರಳಿ ನೀಡಬೇಕು ಎಂದು ಒತ್ತಾಯಿಸಿದರು.

ಜಂಗಮರಿಗೆ ಪ್ರಮಾಣಪತ್ರ: ಖಂಡನೆ

ಡಿಎಸ್‍ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ ಮಾತನಾಡಿ, ಸಮಾಜದ ಕಟ್ಟಕಡೆಯ ಅಕ್ಷರ ಪಂಚಿತ, ಸಂವಿಧಾನದ ಅರಿವಿಲ್ಲದ ಅಲೆಮಾರಿ ಸಮುದಾಯದವರಾದ ಬೇಡ ಬುಡ್ಗ ಜಂಗಮರಿಗೆ ಸರ್ಕಾರ ನೀಡುತ್ತಿರುವ ಪರಿಶಿಷ್ಟ ಜಾತಿ ಪ್ರಮಾಣಪತ್ರವನ್ನು ಹಲವು ವೀರಶೈವ ಜಂಗಮರಿಗೆ ನೀಡುತ್ತಿರುವುದು ನಮಗೆ ಆಘಾತ ಮೂಡಿಸಿದೆ. ವೀರಶೈವ ಜಂಗಮರಿಗೆ ಈಗಾಗಲೇ ನೀಡಲಾಗಿರುವ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಧರ್ಮಣ್ಣ ಹಮಾಂತ, ಶಂಕ್ರಪ್ಪ ಮಹಾಂತ, ಶಂಕ್ರಪ್ಪ ವಿಭೂತಿ, ಮಲ್ಲೇಶ ಕಡಕೋಳ, ಮಂಜ್ಪಪ ಮರೋಳ, ಶಿವರಾಜ ಹರಿಜನ, ಗುಡ್ಡಪ್ಪ ಬಣಕಾರ, ರಮೇಶ ಜಾಲಿಹಾಳ, ಜಗದೀಶ ಹರಿಜನ, ಮಂಜಪ್ಪ ವೇಷಗಾರರು, ಯಲ್ಲಪ್ಪ ಕೋಮಾರಿ, ಈರಪ್ಪ ಮೊತಿ, ಮಾರೆಪ್ಪ ಮೊತಿ, ಅಕ್ಕಮ್ಮ ವಿಭೂತಿ, ಸುಂಕಮ್ಮ ರಮೇಶ ಮಹಾಂತ, ರಾಜು ಕೋಮಾರಿ, ರವಿ ಕೊರವರ, ಭೀಮಣ್ಣ ಭಜಂತ್ರಿ, ಗಂಗಾಧರ ಚನ್ನದಾಸರ, ಬಸವರಾಜಪ್ಪ ಚನ್ನದಾಸರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.