ಫತ್ತೇಪುರ (ತುಮ್ಮಿನಕಟ್ಟಿ): ತುಂಗಭದ್ರಾ ನದಿ ತೀರದಲ್ಲಿರುವ ರಾಣೆಬೆನ್ನೂರು ತಾಲ್ಲೂಕಿನ ಸುಕ್ಷೇತ್ರ ಫತ್ತೇಪುರ ಗ್ರಾಮ ಕೃಷಿ ಪ್ರಧಾನವಾಗಿದ್ದು, ವಿಶಿಷ್ಟ ಆಚರಣೆಗಳ ಮೂಲಕ ಗಮನ ಸೆಳೆದಿದೆ.
ಮೈಸೂರು ಶೈಲಿಯಲ್ಲಿ ನಿರ್ಮಾಣವಾಗಿರುವ ವೀರಾಂಜನೇಯಸ್ವಾಮಿ ದೇವಸ್ಥಾನ ಗ್ರಾಮದ ಪ್ರಮುಖ ಆಕರ್ಷಣೆ. ಪರಿವಾರ ಸಮೇತನಾಗಿ ಸ್ವಾಮಿ ವಿರಾಜಮಾನನಾಗಿದ್ದಾನೆ. ಎದುರಿಗೆ ಬೃಹತ್ತಾದ ದೀಪಸ್ತಂಭವಿದೆ. ಬಲ ಭಾಗದಲ್ಲಿ ಪ್ರಸನ್ನ ಮಹಾಗಣಪತಿ ಮೂರ್ತಿ ನಿಂತಿರುವ ಭಂಗಿಯಲ್ಲಿದೆ. ಶೀಘ್ರ ಫಲ ನೀಡುವ ಮೂಲಕ ಭಕ್ತರ ಸಕಲ ವಿಘ್ನಗಳನ್ನು ನಿವಾರಣೆ ಮಾಡುತ್ತಾನೆ ಎನ್ನುವ ಪ್ರತೀತಿ ಇದೆ.
ಅದರ ಪಕ್ಕದಲ್ಲೇ ಆದಿಶೇಷ ನಾಗಮಂಟಪವಿದೆ. ಇಲ್ಲಿ ಸರ್ಪದೋಷ ನಿವಾರಣೆ, ಸಂತಾನ ಭಾಗ್ಯ, ಮದುವೆ ಸಮಸ್ಯೆ ಇರುವವರು ನಾಗನಿಗೆ ವಿಶೇಷ ಪೂಜೆ ಮಾಡಿ, ಸೇವೆ ಸಲ್ಲಿಸುವ ಮೂಲಕ ಇಷ್ಟಾರ್ಥಗಳನ್ನು ನೆರೆವೇರಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎನ್ನುತ್ತಾರೆ ದೇವಸ್ಥಾನದ ಸಮಿತಿ ಸದಸ್ಯರು.
ಎಡ ಭಾಗದಲ್ಲಿ ಆದಿತ್ಯಾದಿ ಸತ್ಯಶನೇಶ್ವರ ನವಗ್ರಹ ಮಂಟಪವಿದ್ದು, ಶನಿದೋಷ, ಇತರೆ ನವಗ್ರಹ ದೋಷ ನಿವಾರಣೆಗಾಗಿ ಫಲ ನೀಡುವ ದಿವ್ಯ ಸಾನ್ನಿಧ್ಯವನ್ನು ಹೊಂದಿದೆ. ದೇವಸ್ಥಾನದ ಮುಂಭಾಗದಲ್ಲಿ 13 ಅಡಿ ಎತ್ತರದ ವಿರಾಟ ಸ್ವರೂಪ ವೀರಾಂಜನೆಯಸ್ವಾಮಿ ಮೂರ್ತಿ ಇದೆ.
ಪ್ರತಿವರ್ಷ ಶಿವರಾತ್ರಿ ದಿನ ಶಿವಲಿಂಗ ಪೂಜೆ ಹಾಗೂ ಬಸವಣ್ಣ ಜಾತ್ರೆ, ಐದು ವರ್ಷಕ್ಕೊಮ್ಮೆ ಕರಿಯಮ್ಮನ ಜಾತ್ರೆ ವಿಜೃಂಭಣೆಯಿಂದ ಜರುಗುತ್ತವೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕ್ರೀಡಾಪಟು ರಂಗನಾಥ ಎಂ. ಅವರು ರಾಜ್ಯ ಮಟ್ಟದ ಚಕ್ರ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ಸೈ ಎನಿಸಿಕೊಂಡಿದ್ದಾರೆ. ಇಲ್ಲಿ ಓದಿದ ಹಲವರು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿದ್ದಾರೆ.
ಗಮನಸೆಳೆಯುವ ಉಬ್ಬುಶಿಲ್ಪ ಕಲಾಕೃತಿ:
ಗರ್ಭಗೃಹ, ನವರಂಗ ಮನೋಹರವಾಗಿವೆ. ಗರ್ಭಗೃಹದ ಮೇಲೆ 45 ಅಡಿ ಎತ್ತರದ ವಿಮಾನ ಗೋಪುರ ಅದ್ಭುತವಾಗಿದೆ. ಸುತ್ತಲೂ ಅಷ್ಟದಿಕ್ಪಾಲಕರ ಮೂರ್ತಿಗಳಿವೆ. ಸಂಪೂರ್ಣ ರಾಮಾಯಣವನ್ನು ಬಿಂಬಿಸುವ ಉಬ್ಬು ಶಿಲ್ಪ ಕಲಾಕೃತಿಗಳು ಹೊರ ಭಾಗದಲ್ಲಿದ್ದು ಗಮನಸೆಳೆಯುತ್ತವೆ.
ಪ್ರತಿ ಶನಿವಾರ ಸ್ವಾಮಿಗೆ ವಿಶೇಷ ಪೂಜೆ, ಸಂಕಷ್ಟ ಚತುರ್ಥಿ ದಿನ ಸ್ವಾಮಿಗೆ ವಿಶೇಷ ಪೂಜೆ, ಗಣಪತಿ ಹೋಮ, ಅಮವಾಸ್ಯೆ ದಿನ ಸುದರ್ಶನ ಹೋಮ, ಆಶ್ಲೇಷ ಬಲಿ ಮತ್ತು ಸರ್ಪ ಸಂಸ್ಕಾರಗಳು, ನವಗ್ರಹ ಶಾಂತಿ, ಹುಣ್ಣಿಮೆ ದಿನ ಸತ್ಯನಾರಾಯಣ ಪೂಜೆ, ಕಾರ್ತಿಕೋತ್ಸವವನ್ನು ವಿಶೇಷವಾಗಿ ಆಚರಿಸುತ್ತಾರೆ. ಇಲ್ಲಿ ಹೂವಿನ ಅಪ್ಪಣೆ ನೀಡುವ ಮೂಲಕ ಭಕ್ತರ ಇಷ್ಟಾರ್ಥಗಳನ್ನು ಸ್ವಾಮಿ ಈಡೇರಿಸುತ್ತಾನೆ ಎಂದು ಅರ್ಚಕ ವಿನಯ ಭಾರದ್ವಾಜ್ ವಿವರಿಸಿದರು.
ಬಸ್ ವ್ಯವಸ್ಥೆ ಕಲ್ಪಿಸಿ:
ಅದು ವರ್ಷದಿಂದ ಈಚೆಗೆ ಬೆಳಿಗ್ಗೆ 8 ಗಂಟೆಗೆ ಗ್ರಾಮಕ್ಕೆ ಒಂದು ಬಸ್ ಮಾತ್ರ ಬಂದು ಹೋಗುತ್ತದೆ. ಸರಿಯಾದ ಬಸ್ ವ್ಯವಸ್ಥೆ ಇಲ್ಲ. ಹಾಗಾಗಿ, ನಡೆದೇ ಹೋಗಬೇಕು. ಇಲ್ಲವೇ, ಬೈಕ್ ಅಥವಾ ಖಾಸಗಿ ವಾಹನಗಳಲ್ಲಿ ಹೋಗಬಹುದು. ಹೀಗಾಗಿ, ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮವಹಿಸಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.