ರಾಣೆಬೆನ್ನೂರು: ಒಂದು ಎಕರೆ ಜಮೀನನ್ನು ತರಕಾರಿ ಬೆಳೆಗೆ ಮೀಸಲಿಟ್ಟು ಸಾವಯವ ಪದ್ಧತಿ ಮೂಲಕ ಬೆಂಡೆಕಾಯಿ ಹಾಗೂ ಚೌಳಿಕಾಯಿ ಬೆಳೆಯುತ್ತಿರುವ ತಾಲ್ಲೂಕಿನ ಕಮದೋಡ ಗ್ರಾಮದ ರೈತ ಕೃಷ್ಣಾಜಿ ಹನುಮಂತಪ್ಪ ದಾಸರ ಅವರು ಅಧಿಕ ಇಳುವರಿ ಹಾಗೂ ದುಪ್ಪಟ್ಟು ಆದಾಯ ಪಡೆಯುತ್ತಿದ್ದಾರೆ.
15 ಗುಂಟೆ ಬೆಂಡಿಕಾಯಿ, ಅರ್ಧ ಎಕರೆ ಟೊಮೆಟೋ ಮತ್ತು 10 ಗುಂಟೆ ಚೌಳಿಕಾಯಿ ಬೆಳೆದಿದ್ದಾರೆ. ಬೆಂಡಿಕಾಯಿ ದಿನಾಲು 35 ರಿಂದ 40 ಕೆಜಿ ಉತ್ಪನ್ನ ಬರುತ್ತದೆ. 90 ತೆಂಗಿನಮರ, 4 ಎಕರೆ ಕಬ್ಬು ಹಾಕಿದ್ದಾರೆ. ಮೊದಲು ರೇಷ್ಮೆ ಬೆಳೆಯನ್ನು ಬೆಳೆಯುತ್ತಿದ್ದರು ಕೂಲಿ ಆಳಿನ ತೊಂದರೆ, ಕೊಳವೆಬಾವಿ ನೀರು ಕಡಿಮೆಯಾಗಿದ್ದಕ್ಕೆ ರೇಷ್ಮೆ ಬೆಳೆಯನ್ನು ಸ್ಥಗಿತಗೊಳಿಸಿದ್ದಾರೆ.
‘ಕಡಿಮೆ ಸಮಯದಲ್ಲಿ ತರಕಾರಿ ಬೆಳೆದು ಉತ್ತಮ ಇಳುವರಿ ಪಡೆದು ಹೆಚ್ಚಿನ ಆದಾಯ ಗಳಿಸುವ ಮನಸ್ಸಿನಿಂದ ಈ ಬಾರಿ ಸಾವಯವ ಪದ್ದತಿಯಲ್ಲಿ ಬೆಂಡೆಕಾಯಿ ಕೃಷಿ ಮಾಡಿದ್ದೇನೆ. ಈ ವರ್ಷ ಕಡಿಮೆ ವೆಚ್ಚದಲ್ಲಿ ಉತ್ತಮ ಲಾಭ ಸಿಗುತ್ತಿದೆ’ ಎಂದು ರೈತ ಕೃಷ್ಣಾಜಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕೃಷಿ ವಿಜ್ಞಾನ ಕೇಂದ್ರದಿಂದ ಮಾರ್ಗದರ್ಶನ ಪಡೆದು ಬೆಂಡೆಕಾಯಿ ಕೃಷಿ ಮಾಡಿದ್ದು, 30 ರಿಂದ 35 ದಿನಗಳಲ್ಲಿ ಬೆಂಡೆಕಾಯಿ ಫಸಲು ಬರುತ್ತದೆ. ದಿನಾಲು ಮಾರುಕಟ್ಟೆಗೆ ಬೆಂಡೆಕಾಯಿ ಮಾರಾಟ ಮಾಡಿ ಕೈ ತುಂಬ ಹಣ ಸಂಪಾದಿಸುತ್ತಿದ್ದೇನೆ. ಸಾವಯವ ಕೃಷಿಯಿಂದ ಪ್ರತಿ ಬಾರಿ 7ರಿಂದ 8 ಮಣವರೆಗೆ ಬೆಂಡೆಕಾಯಿ ಸಿಗುತ್ತದೆ. ಈಗ ಮಾರುಟ್ಟೆಯಲ್ಲಿ ಉತ್ತಮ ಲಾಭ ಸಿಗುತ್ತಿದೆ. ಸಾವಯವ ಬೆಂಡೆಕಾಯಿ ಬೆಳೆಗೆ ಪ್ರಸ್ತುತ ಒಂದು ಮಣಕ್ಕೆ ₹800ರಿಂದ ₹1000 ವರೆಗೆ ಬೆಲೆ ಸಿಗುತ್ತದೆ. ಇದರಿಂದ ನಮ್ಮ ಅರ್ಥಿಕ ಪರಿಸ್ಥಿತಿ ಅನುಕೂಲಕರವಾಗಿದೆ’ ಎಂದರು.
ಇವರು 5.5 ಎಕರೆ ಜಮೀನಿನಲ್ಲಿ ವೈಜ್ಞಾನಿಕವಾಗಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡಿದ್ದಾರೆ. ಯುವ ಪ್ರಗತಿಪರ ರೈತರಾಗಿದ್ದು, ಪಿಯುಸಿ ವಿದ್ಯಾಭ್ಯಾಸ ಮುಗಿಸಿದ ನಂತರ ಕೃಷಿಯಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಛಲದಿಂದ ತಮ್ಮ ಹುಟ್ಟೂರಿಗೆ ಬ೦ದು ಕೃಷಿಯಲ್ಲಿ ತೊಡಗಿಸಿ ಕೊಳ್ಳುವುದರ ಜೊತೆಗೆ ಹಲವಾರು ಯುವಕರಿಗೆ ದಾರಿದೀಪವಾಗಿದ್ದಾರೆ.
ಬೆಂಡೆಕಾಯಿ ಹಾಗೂ ಕೊತ್ತಂಬರಿ ಸೊಪ್ಪನ್ನು ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಬೆಳೆದು ಅಧಿಕ ಲಾಭ ಪಡೆದು ಸುಸ್ಥಿರ ಜೀವನ ಸಾಗಿಸುತ್ತಿದ್ದಾರೆ. ವಿಶೇಷವಾಗಿ ತರಕಾರಿ ಬೆಳೆಗಳಾದ ಬೆಂಡೆಕಾಯಿ, ಟೊಮೆಟೊ ಮತ್ತು ಚೌಳಿಕಾಯಿಯನ್ನು ಮಾರುಕಟ್ಟೆಗೆ ಅನುಗುಣವಾಗಿ ಬೆಳೆದು ಲಾಭವನ್ನು ಪಡೆಯುತ್ತಿದ್ದಾರೆ.
ಕೇವಲ 5 ಎಕರೆ ಜಮೀನಿನಲ್ಲಿ ಕೃಷ್ಣಾಜಿ ಹನುಮಂತಪ್ಪ ದಾಸರ ಅವರು ಬೇಸಿಗೆಯಲ್ಲಿ ಕೊಳವೆಬಾವಿ ನೀರು ಬಳಸಿ, ಮಳೆಗಾಲದಲ್ಲಿ ಮಳೆ ನೀರು ಬಳಸಿ ನಿರಂತರ ತರಕಾರಿ ಬೆಳೆಯುತ್ತಾರೆ. ಆಳುಗಳ ಸಹಾಯ ಪಡೆಯುವುದಿಲ್ಲ. ಎಲ್ಲ ಕೆಲಸವನ್ನು ಮನೆಯವರೇ ಹೊಲದಲ್ಲಿ ದುಡಿದು ತರಕಾರಿ ಬೆಳೆದು ತಾವೇ ಮಾರುಕಟ್ಟೆಗೆ ಒಯ್ದು ಮಾರಾಟ ಮಾಡುತ್ತಾರೆ. ಕಳೆ ತೆಗೆಯುವುದು, ನೀರು ಹಾಯಿಸುವುದು, ತರಕಾರಿ ಕೊಯ್ಯುವುದು, ಬುಟ್ಟಿಗೆ ತುಂಬುವುದು ಮತ್ತು ಮಾರುಕಟ್ಟೆಗೆ ಸಾಗಿಸುವ ಕೆಲಸ ಕೃಷ್ಣಾಜಿ ಹನುಮಂತಪ್ಪ ದಾಸರ ಅವರದ್ದು. ದಿನಾಲು ಸಂಜೆ ಮಾರುಕಟ್ಟೆಗೆ ಹೋಗಿ ಮಾರಾಟ ಮಾಡಿ ಬರುತ್ತಾರೆ.
‘ದಿನಾಲು ಬೆಂಡೆ, ಹೀರೆಕಾಯಿ, ಚವಳಿಕಾಯಿ, ಟೊಮೆಟೊ, ಬದನೆಕಾಯಿ ಇತ್ಯಾದಿ ತರಕಾರಿಗಳನ್ನು ಮಾರುಕಟ್ಟೆಗೆ ಸಾಗಿಸುತ್ತೇವೆ’ ಎನ್ನುತ್ತಾರೆ ದಾಸರ ದಂಪತಿ.
- ಈ ವರ್ಷ ತರಕಾರಿ ಸೀಸನ್ ಆರಂಭವಾದಾಗಿನಿಂದ ಮುಂಗಾರಿನಲ್ಲಿ ಎಲ್ಲ ತರಕಾರಿಗಳಿಗೂ ಉತ್ತಮ ದರ ಸಿಕ್ಕಿದೆಕೃಷ್ಣಾಜಿ ಹನುಮಂತಪ್ಪ ದಾಸರ ರೈತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.