ADVERTISEMENT

ಭ್ರಷ್ಟಾಚಾರದಲ್ಲಿ ಮುಳುಗೇಳುತ್ತಿರುವ ಬಿಜೆಪಿ ಸರ್ಕಾರ: ಹರಿಪ್ರಸಾದ್‌

ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2021, 13:20 IST
Last Updated 3 ಡಿಸೆಂಬರ್ 2021, 13:20 IST
ಬಿ.ಕೆ.ಹರಿಪ್ರಸಾದ್‌
ಬಿ.ಕೆ.ಹರಿಪ್ರಸಾದ್‌   

ಹಾವೇರಿ: ‘ರಾಜ್ಯದಲ್ಲಿ ಶೇ 40ರಷ್ಟು ಕಮಿಷನ್‌ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರು ಪ್ರಧಾನಿಗೆ ಪತ್ರ ಬರೆದಿರುವುದು ಇತಿಹಾಸದಲ್ಲಿ ಇದೇ ಮೊದಲು. ಮೋದಿಗೆ ಮರ್ಯಾದೆ ಇದ್ದರೆ, ಬಿಜೆಪಿ ಸರ್ಕಾರವನ್ನು ಕೂಡಲೇ ಪದಚ್ಯುತಿಗೊಳಿಸಿ, ರಾಜ್ಯಪಾಲರ ಆಡಳಿತ ಹೇರಬೇಕು’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ವಾಗ್ದಾಳಿ ನಡೆಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ನಾನು ತಿನ್ನುವುದಿಲ್ಲ, ಇತರರೂ ತಿನ್ನಲು ಬಿಡುವುದಿಲ್ಲ ಎಂದು ಮೋದಿ ಹೇಳಿದ್ದರು. ಕೋವಿಡ್‌ ಕಾಲದಲ್ಲಿ ಬಿಜೆಪಿಯವರು ಹಣವನ್ನು ಲೂಟಿ ಹೊಡೆದಿದ್ದಾರೆ. ಕೋವಿಡ್‌ನಿಂದ ಸತ್ತವರ ಹೆಣ ಸುಡಲು ಯೋಗ್ಯತೆ ಇಲ್ಲದ ಸರ್ಕಾರ ಇದು. ಗಂಗಾ ನದಿಯಲ್ಲಿ 20 ಸಾವಿರ ಹೆಣ ತೇಲಿ ಬಂದವು’ ಎಂದು ಆರೋಪ ಮಾಡಿದರು.

ಕೋವಿಡ್‌ ಸಂದರ್ಭ ‘ಪಿಎಂ ಕೇರ್‌’ಗೆ ಸಾರ್ವಜನಿಕರು, ಸಚಿವರು, ಶಾಸಕರು, ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಿಂದ ಹಣ ಪಡೆಯಲಾಯಿತು. ಲೆಕ್ಕ ಕೇಳಿದರೆ ಅದು ಖಾಸಗಿ ಫಂಡ್‌ ಆದ ಕಾರಣ ಲೆಕ್ಕ ಕೊಡಲು ಬರುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ಜನರ ಹಣವನ್ನು ಲೂಟಿ ಮಾಡುವ ಹುನ್ನಾರವಿದು. ಇದು ದೇಶದ ದುರಂತ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಸೋಲು ಕಲಿಸಿದ ಪಾಠ:

7 ವರ್ಷದಿಂದ ಮೋದಿ ಅವರು ಅಹಂಕಾರ ಮತ್ತು ಸರ್ವಾಧಿಕಾರತ್ವದಿಂದ ಮೆರೆದರು. ಈಗ ಜನರ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಬಂದಿದೆ. ಜನರು ಬೊಬ್ಬೆ ಹೊಡೆದರೂ ತೈಲ ಬೆಲೆ ಇಳಿಸಲಿಲ್ಲ, ಚುನಾವಣೆಗಳಲ್ಲಿ ಸೋತ ಮೇಲೆ ಸ್ವಲ್ಪ ಬೆಲೆ ಇಳಿಸಿದರು.ಜನಸಾಮಾನ್ಯರ ಆಶಯಕ್ಕೆ ವಿರುದ್ಧವಾದ ತೀರ್ಮಾನಗಳನ್ನು ತೆಗೆದುಕೊಂಡ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

2023ಕ್ಕೆ ಯುಪಿಎ ಅಸ್ತಿತ್ವದಲ್ಲಿ ಇರುವುದಿಲ್ಲ ಎಂದು ಕೆಲವು ನಾಯಕರು ನೀಡುತ್ತಿರುವ ಹೇಳಿಕೆ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ‘ಚುನಾವಣೆ ಬಂದ ಸಂದರ್ಭ ಪ್ರಶಾಂತ್‌ ಕಿಶೋರ್‌, ಗುಲಾಂನಬಿ ಆಜಾದ್‌ ಮುಂತಾದವರು ಜ್ಯೋತಿಷಿಗಳ ರೀತಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್‌ ಎಂದಿಗೂ ಹೊಂದಾಣಿಕೆ ರಾಜಕಾರಣ ಮಾಡುವುದಿಲ್ಲ ಎಂದು ಉತ್ತರಿಸಿದರು.

ಇತ್ತೀಚಿನ ಬೆಳವಣಿಗೆ ನೋಡಿದರೆ, ಚಿಂತಕರ ಚಾವಡಿಯಾಗಿದ್ದ ವಿಧಾನ ಪರಿಷತ್‌ನ ಘನತೆ, ಗೌರವ ಸ್ವಲ್ಪ ಕಡಿಮೆಯಾಗುತ್ತಿದೆ ಅನಿಸುತ್ತದೆ. ಪರಿಷತ್‌ಗೆ ಕೆಲವು ರಾಜಕೀಯ ನಾಯಕರ ಅನಿವಾರ್ಯತೆ ಇದ್ದಾಗ, ಅಂಥವರನ್ನು ಮೇಲೆ ತರುವ ಕೆಲಸ ಅನಿವಾರ್ಯ ಎಂದು ಪ್ರಶ್ನೆಯೊಂದಕ್ಕೆ ಚುಟುಕಾಗಿ ಉತ್ತರಿಸಿದರು.

ರೈತರನ್ನು ತುಚ್ಛವಾಗಿ ಕಂಡ ಬಿಜೆಪಿ

ಬಿ.ಎಸ್‌.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ 2008ರ ಅವಧಿಯಲ್ಲಿ ಹಾವೇರಿಯಲ್ಲಿ ಗೋಲಿಬಾರ್‌ ಘಟನೆ ನಡೆದು, ಇಬ್ಬರು ರೈತರು ಮೃತಪಟ್ಟಿದ್ದರು. ಪ್ರತಿಭಟನೆ ನಡೆಸಿದ ರೈತರನ್ನು ‘ಗೂಂಡಾಗಳು’ ಎಂದು ಜರಿಯುವ ಮೂಲಕ ಬಿಜೆಪಿ ರೈತರನ್ನು ತುಚ್ಛವಾಗಿ ಕಂಡಿತ್ತು. ನವದೆಹಲಿಯಲ್ಲಿ ಪ್ರತಿಭಟನೆ ನಡೆಸಿದ ರೈತರನ್ನು ಪಾಕಿಸ್ತಾನಿಗಳು, ಖಲಿಸ್ಥಾನಿಗಳು, ಆಂದೋಲನ ಜೀವಿಗಳು ಎಂದು ಬಿಜೆಪಿ ಮೂದಲಿಸಿತು. ಸತ್ತ ರೈತರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಕೇಂದ್ರ ಕೃಷಿ ಸಚಿವರು ಹೇಳುತ್ತಿರುವುದು ರೈತರ ಮೇಲೆ ಕಾಳಜಿ ಇಲ್ಲದಿರುವುದನ್ನು ತೋರಿಸುತ್ತದೆ ಎಂದು ಮೂದಲಿಸಿದರು.

ದೇಶದ ಸಂಪತ್ತು ಖಾಸಗಿಯವರ ಪಾಲು

ಕಾಂಗ್ರೆಸ್‌ ಸರ್ಕಾರ ದೇಶಕ್ಕೆ ಸಂಪತ್ತು ಸೃಷ್ಟಿಸಿತು. ಆದರೆ, ಬಿಜೆಪಿ ಸರ್ಕಾರ ಏಳೇ ವರ್ಷದಲ್ಲಿ ದೇಶದ ಒಂದೊಂದೇ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿದೆ. 2014ರಲ್ಲಿ ಉದ್ಯೋಗ ಖಾತ್ರಿಯನ್ನು ಬಿಜೆಪಿ ಲೇವಡಿ ಮಾಡಿತ್ತು. ಕೊರೊನಾ ಸಂದರ್ಭ ಬಡಜನರಿಗೆ ಉದ್ಯೋಗ ನೀಡಿದ್ದು ಇದೇ ಉದ್ಯೋಗ ಖಾತ್ರಿ. ಉದ್ಯೋಗ ಜನಸಾಮಾನ್ಯರ ಹಕ್ಕು. ಆದರೆ ಉದ್ಯೋಗ ಸೃಷ್ಟಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಟೀಕಿಸಿದರು.

ನಿಲುವು ಸ್ಪಷ್ಟಪಡಿಸಲಿ:

ದೇವೇಗೌಡ ಮತ್ತು ಪ್ರಧಾನಿ ಭೇಟಿಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ, ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಜೆಡಿಎಸ್‌ನವರು ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಬೇಕು. ಜಾತ್ಯತೀತ ತತ್ವದಲ್ಲಿ ನಂಬಿಕೆ ಇದ್ದವರು ಜಾತ್ಯತೀತ ಪಕ್ಷವನ್ನು ಬೆಂಬಲಿಸಬೇಕು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡರಾದ ಡಿ.ಬಸವರಾಜು, ಬಾಲರಾಜು, ಸತೀಶ ಮೆಹರವಾಡೆ, ರುದ್ರಪ್ಪ ಲಮಾಣಿ, ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ.ಹಿರೇಮಠ, ಸಂಜೀವಕುಮಾರ ನೀರಲಗಿ, ಶ್ರೀನಿವಾಸ ಹಳ್ಳಳ್ಳಿ ಇದ್ದರು. |

****

ಹಾನಗಲ್‌ ಉಪಚುನಾವಣೆಯ ಫಲಿತಾಂಶ ಬೊಮ್ಮಾಯಿ ವಿರುದ್ಧ ಕೊಟ್ಟ ತೀರ್ಪು ಮಾತ್ರವಲ್ಲ, ಬಿಜೆಪಿಯನ್ನು ಸಂಪೂರ್ಣ ತಿರಸ್ಕರಿಸಿರುವುದಕ್ಕೆ ನಿದರ್ಶನ

– ಬಿ.ಕೆ.ಹರಿಪ್ರಸಾದ್‌, ವಿಧಾನ ಪರಿಷತ್‌ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.