ADVERTISEMENT

ರಾಣೆಬೆನ್ನೂರು | ಹವಾಮಾನದಲ್ಲಿ ಬದಲಾವಣೆ: ವೈರಾಣು ಜ್ವರ ವ್ಯಾಪಕ, ಮಕ್ಕಳು ಹೈರಾಣ

ಮುಕ್ತೇಶ ಕೂರಗುಂದಮಠ
Published 28 ಸೆಪ್ಟೆಂಬರ್ 2024, 5:08 IST
Last Updated 28 ಸೆಪ್ಟೆಂಬರ್ 2024, 5:08 IST
ರಾಣೆಬೆನ್ನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಗ್ರಾಮಗಳಿಂದ ಮಕ್ಕಳ ಆರೋಗ್ಯ ತಪಾಸಣೆಗೆ ಆಗಮಿಸಿದ ಪಾಲಕರು
ರಾಣೆಬೆನ್ನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿವಿಧ ಗ್ರಾಮಗಳಿಂದ ಮಕ್ಕಳ ಆರೋಗ್ಯ ತಪಾಸಣೆಗೆ ಆಗಮಿಸಿದ ಪಾಲಕರು   

ರಾಣೆಬೆನ್ನೂರು: ಹವಾಮಾನದ ಬದಲಾವಣೆಯಿಂದಾಗಿ ತಾಲ್ಲೂಕಿನಾದ್ಯಂತ ಚಿಕ್ಕಮಕ್ಕಳಲ್ಲಿ ಕೆಮ್ಮು, ಜ್ವರ, ನೆಗಡಿ ಪ್ರಕರಣಗಳು ಹೆಚ್ಚಾಗಿವೆ.

ನಗರದ ಪ್ರಮುಖ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ಹೊರರೋಗಿ ವಿಭಾಗಗಳಿಗೆ ಭೇಟಿ ನೀಡುತ್ತಿರುವವರಲ್ಲಿ ಶೇ 30 ರಿಂದ 40ಕ್ಕೂ ಹೆಚ್ಚು ಮಂದಿ ಜ್ವರ ತಪಾಸಣೆಗೆ ಒಳಗಾಗುತ್ತಿದ್ದಾರೆ. ಇವರಲ್ಲಿ ಮಕ್ಕಳೇ ಹೆಚ್ಚಾಗಿದ್ದಾರೆ. ತಾಪಮಾನ ಏರಿಳಿತ, ಗಾಳಿ ಸಹಿತ ಮಳೆ ಹಾಗೂ ಬಿಸಿಲಿನಿಂದಾಗಿ ವೈರಾಣು ಜ್ವರವು ಮಕ್ಕಳನ್ನು ಹೆಚ್ಚಾಗಿ ಕಾಡುತ್ತಿದೆ. ಇನ್ನೊಂದು ಕಡೆ, ಶೀತ– ಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಗಳೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿವೆ.

‘ತಾಲ್ಲೂಕಿನ ಒಟ್ಟು 14 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ದಿನಕ್ಕೆ 10 ರಿಂದ 15 ರೋಗಿಗಳನ್ನು ತಪಾಸಣೆ ಮಾಡಲಾಗುತ್ತದೆ. ಕಳೆದ ವಾರ ಎರಡು–ಮೂರು ದಿನಗಳಲ್ಲಿ ದಿನಕ್ಕೆ ನೂರಾರು ರೋಗಿಗಳು ಜ್ವರ, ನೆಗಡಿ, ಕೆಮ್ಮಿನಿಂದ ಬಳಲಿ ತಪಾಸಣೆಗೆ ಬಂದಿದ್ದರು. ವಾತಾವರಣ ಬದಲಾವಣೆಯಾದಾಗ ಜ್ವರದ ಪ್ರಕರಣಗಳು ಕಾಣಿಸುತ್ತವೆ’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ರಾಜೇಶ್ವರಿ ಕದರಮಂಡಲಗಿ ಹೇಳಿದರು.

ADVERTISEMENT

‘ಎರಡೂ–ಮೂರು ದಿನಗಳಿಂದ ಮಕ್ಕಳಿಗೆ ಜ್ವರ ಕಾಣಿಸಿಕೊಂಡಿತ್ತು, ನಮ್ಮೂರಾಗ ವೈದ್ಯರ ಬಳಿ ತೋರಿಸಿದ್ದೆವು. ಕಡಿಮೆಯಾಗದ ಕಾರಣ, ನಗರದ ಸರ್ಕಾರಿ ಆಸ್ಪತ್ರೆಯ ವೈದ್ಯರಲ್ಲಿ ತೋರಿಸಿ ಚಿಕಿತ್ಸೆ ಪಡೆದ ಮೇಲೆ ಈಗ ಆರಾಮವಾಗಿದ್ದಾಳೆ’ ಎಂದು ಕುಸಗೂರ ಗ್ರಾಮದ ನಿರ್ಮಲಾ ಕುಸಗೂರ ಹಾಗೂ ನಗರದ ಶಿಲ್ಪಾ ಮರಿಯಮ್ಮನವರ ತಿಳಿಸಿದರು.

‘ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದ್ದು, ಸಾಮಾನ್ಯವಾಗಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ನಂತರ ಮನೆ ಮಂದಿಗೆಲ್ಲ ವ್ಯಾಪಕವಾಗಿ ಹರಡುತ್ತದೆ. ನೆಗಡಿ, ಕೆಮ್ಮು, ಮೈ–ಕೈ ನೋವಿನಿಂದ ಆರಂಭವಾಗಿ, ನಾಲ್ಕಾರು ದಿನ ಸಮಸ್ಯೆ ಬಾಧಿಸುತ್ತದೆ. ಸೀನು, ಕೆಮ್ಮಿದಾಗ ಹೊರ ಹೊಮ್ಮುವ ನೀರಿನ ಹನಿ ಬೇರೆಯವರಿಗೆ ತಗುಲದಂತೆ ಎಚ್ಚರ ವಹಿಸಬೇಕು. ಡೆಂಗಿ, ಎಚ್‌1 ಎನ್‌1, ಕೊರೊನಾ ಶಂಕಿತ ಪ್ರಕರಣಗಳು ಕಂಡು ಬರುತ್ತಿವೆ. ಕಳೆದ ಹತ್ತಾರು ದಿನಗಳಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯರು ಜ್ವರ, ನೆಗಡಿ, ಕೆಮ್ಮು ರೋಗಿಗಳನ್ನು ತಪಾಸಣೆ ಮಾಡಿ ಸುಸ್ತಾಗಿದ್ದಾರೆ’ ಎಂದು ಡಾ.ಗಿರೀಶ ಕೆಂಚಪ್ಪನವರ ತಿಳಿಸಿದರು.

‘ರೋಗಿಯು ವೈದ್ಯರನ್ನು ಸಂಪರ್ಕಿಸದೇ ಔಷಧಗಳನ್ನು ಸೇವಿಸುವುದರಿಂದ ಅಡ್ಡ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು’ ಎಂದು ಅವರು ತಿಳಿಸಿದರು.

ದಿನಕ್ಕೆ 70–80 ರೋಗಿಗಳು

ಸಾರ್ವಜನಿಕ ಆಸ್ಪತ್ರೆಯಲ್ಲಿ ಜ್ವರ ನೆಗಡಿ ಕೆಮ್ಮಿಗೆ ಸಂಬಂಧಿಸಿ ದಿನಕ್ಕೆ 70 ರಿಂದ 80 ರೋಗಿಗಳು ಬರುತ್ತಿದ್ದಾರೆ. ಸ್ಟೇಶನ್‌ ರಸ್ತೆಯ ಹೆರಿಗೆ ಆಸ್ಪತ್ರೆಯಲ್ಲಿ ಯಾವಾಗಲೂ ದಿನಕ್ಕೆ 60 ರಿಂದ 70 ಚಿಕ್ಕಮಕ್ಕಳನ್ನು ತಪಾಸಣೆ ಮಾಡಲಾಗುತ್ತದೆ. ಅವರಲ್ಲಿ 8 ರಿಂದ 10 ಮಕ್ಕಳು ಒಳರೋಗಿಗಳಾಗಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಸರಾಸರಿ ತಿಂಗಳಿಗೆ 1500 ರಿಂದ 1800 ರೋಗಿಗಳನ್ನು ತಪಾಸಣೆ ಮಾಡಲಾಗುತ್ತದೆ ಎಂದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜು ಶಿರೂರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.