ಗುತ್ತಲ (ಹಾವೇರಿ ಜಿಲ್ಲೆ): ಹಾವೇರಿ ತಾಲ್ಲೂಕಿನ ಮೇವುಂಡಿ ಮತ್ತು ಕೆರೆಕೊಪ್ಪ ಗ್ರಾಮಗಳಲ್ಲಿ ಶನಿವಾರ ತೋಳ ಕಚ್ಚಿದ ಪರಿಣಾಮ 9ಮಂದಿ ಗಾಯಗೊಂಡರು. ಜತೆಗೆ ಜಾನುವಾರುಗಳ ಮೇಲೂ ತೋಳ ದಾಳಿ ನಡೆಸಿತು.ಘಟನೆಯಿಂದ ರೊಚ್ಚಿಗೆದ್ದ ಕೆರೆಕೊಪ್ಪ ಗ್ರಾಮದ ಜನರು ದೊಣ್ಣೆಯಿಂದ ಹೊಡೆದು ತೋಳವನ್ನು ಹತ್ಯೆ ಮಾಡಿದರು.
ಮೇವುಂಡಿ ಗ್ರಾಮದ ಗುಡ್ಡಪ್ಪ ಕೊಪ್ಪದ, ಜೋಳವ್ವ ಕಂಬಳಿ, ತನು ಗೊರವರ, ಮಲ್ಲವ್ವ ಕನವಳ್ಳಿ, ಗಂಗವ್ವ ಯಲಗಚ್ಚಿ, ಸಂತೋಷ ಮುಂಡವಾಡ, ನಿರ್ಮಲ ಕರಿಯಮ್ಮನವರ ಅವರ ಮೇಲೆ ದಾಳಿ ಮಾಡಿದೆ.ಗಾಯಗೊಂಡವರನ್ನು ಗುತ್ತಲದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಗೆ ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಶನಿವಾರ ಬೆಳಗಿನ ಜಾವಮೇವುಂಡಿ ಗ್ರಾಮಕ್ಕೆ ನುಗ್ಗಿದ ತೋಳ ಸಿಕ್ಕ ಸಿಕ್ಕವರನ್ನು ಕಚ್ಚಿತು. ನಂತರ ದನದ ಕೊಟ್ಟಿಗೆಗೆ ನುಗ್ಗಿ ಜಾನುವಾರಗಳ ಮೇಲೂ ದಾಳಿ ಮಾಡಿತು. ಅಲ್ಲಿಂದ ಕೆರೆಕೊಪ್ಪ ಗ್ರಾಮಕ್ಕೆ ನುಗ್ಗಿ ಇಬ್ಬರು ವ್ಯಕ್ತಿಗಳ ಮೇಲೆ ದಾಳಿ ಮಾಡಿತು. ಜತೆಗೆ ಎರಡು ನಾಯಿ ಮತ್ತು ಜಾನುವಾರುಗಳು ಗಾಯಗೊಂಡವು.
‘ಮೇವುಂಡಿ ಗ್ರಾಮದಲ್ಲಿ ಜನ ಮತ್ತು ಜಾನುವಾರುಗಳ ಮೇಲೆ ತೋಳ ದಾಳಿ ಮಾಡಿರುವ ವಿಷಯವನ್ನು ಮೇವುಂಡಿ ಗ್ರಾಮದ ಪಿಡಿಒ ತಿಳಿಸಿದರು.ಅರಣ್ಯ ಇಲಾಖೆಯ ಸಿಬ್ಬಂದಿ ಕಬ್ಬಿನ ಗದ್ದೆಯಲ್ಲಿ ತೋಳಕ್ಕಾಗಿ ಹುಡುಕಾಟ ನಡೆಸಿದೆವು. ಈ ಸಂದರ್ಭದಲ್ಲಿ ಕೆರೆಕೊಪ್ಪ ಗ್ರಾಮದಲ್ಲಿ ಜನರು ತೋಳವನ್ನು ಹೊಡೆದು ಸಾಯಿಸಿರುವ ಬಗ್ಗೆ ವಿಷಯ ತಿಳಿದ ನಂತರ ನಮ್ಮ ಸಿಬ್ಬಂದಿ ವಾಪಸ್ ಬಂದಿದ್ದಾರೆ’ ಎಂದು ವಲಯ ಅರಣ್ಯ ಅಧಿಕಾರಿರಾಮಪ್ಪ ಪೂಜಾರ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.