ADVERTISEMENT

ಯುವಜನ ದುಶ್ಚಟಗಳಿಗೆ ಬಲಿಯಾಗದಿರಲಿ: ಪ್ರಭಾಕರ ರಾವ್

​ಪ್ರಜಾವಾಣಿ ವಾರ್ತೆ
Published 2 ಜೂನ್ 2024, 13:39 IST
Last Updated 2 ಜೂನ್ 2024, 13:39 IST
ಹಾವೇರಿಯ ನಾಗೇಂದ್ರಮಟ್ಟಿಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಭಾನುವಾರ ‘ವಿಶ್ವ ತಂಬಾಕು ವಿರೋಧಿ ದಿನ‘ ದ ಅಂಗವಾಗಿ ಕಾರ್ಯಕ್ರಮ ನಡೆಯಿತು. ಸಾಹಿತಿ ಹನುಮಂತಗೌಡ ಗೊಲ್ಲರ, ಜನ ಜಾಗೃತಿ ವೇದಿಕೆ ಸದಸ್ಯ ಪ್ರಭಾಕರ ರಾವ್ ಮಂಗಳೂರು ಇದ್ದಾರೆ 
ಹಾವೇರಿಯ ನಾಗೇಂದ್ರಮಟ್ಟಿಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಭಾನುವಾರ ‘ವಿಶ್ವ ತಂಬಾಕು ವಿರೋಧಿ ದಿನ‘ ದ ಅಂಗವಾಗಿ ಕಾರ್ಯಕ್ರಮ ನಡೆಯಿತು. ಸಾಹಿತಿ ಹನುಮಂತಗೌಡ ಗೊಲ್ಲರ, ಜನ ಜಾಗೃತಿ ವೇದಿಕೆ ಸದಸ್ಯ ಪ್ರಭಾಕರ ರಾವ್ ಮಂಗಳೂರು ಇದ್ದಾರೆ    

ಹಾವೇರಿ: ‘ತಂಬಾಕಿನ ಉತ್ಪನ್ನಗಳನ್ನು ಸೇವಿಸುವ ಮೂಲಕ ಅಪಾಯಕಾರಿ ವಿಷ ದೇಹದೊಳಕ್ಕೆ ಸೇರಿಕೊಳ್ಳುವುದರಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ರೋಗಗಳು ಬರುತ್ತವೆ. ಈ ಬಗ್ಗೆ ಜನರು ಎಚ್ಚರ ವಹಿಸಬೇಕು’ ಎಂದು ಜನ ಜಾಗೃತಿ ವೇದಿಕೆ ಸದಸ್ಯ ಪ್ರಭಾಕರ ರಾವ್ ಮಂಗಳೂರು ಹೇಳಿದರು.

ಸ್ಥಳೀಯ ನಾಗೇಂದ್ರಮಟ್ಟಿಯ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಶ್ರಯದಲ್ಲಿ ಭಾನುವಾರ ನಡೆದ ವಿಶ್ವ ತಂಬಾಕು ವಿರೋಧಿ ದಿನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಯುವ ಜನಾಂಗವನ್ನು ತಂಬಾಕು ಸೇವನೆಯಿಂದ ದೂರವಿಡಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ ಎಂದು ತಿಳಿಸಿದ ಅವರು ದಾನಗಳಲ್ಲಿ ನೇತ್ರದಾನ ಶ್ರೇಷ್ಠವಾದ ದಾನ. ಇದರ ಬಗ್ಗೆ ಅರಿವು ಮೂಡಿಸುವುದು ಅತ್ಯಗತ್ಯವಾಗಿದೆ’ ಎಂದು ಹೇಳಿದರು.

ADVERTISEMENT

ಸಾಹಿತಿ ಹನುಮಂತಗೌಡ ಗೊಲ್ಲರ ಮಾತನಾಡಿ, ‘ಪ್ರತಿವರ್ಷ ತಂಬಾಕು ಸೇವನೆಯಿಂದ 10 ಲಕ್ಷಕ್ಕೂ ಹೆಚ್ಚು ಮಂದಿ ಸಾವಿಗೀಡಾಗುತ್ತಿದ್ದಾರೆ. ಪ್ರತಿನಿತ್ಯ 2200ಕ್ಕೂ ಅಧಿಕ ಭಾರತೀಯರು ತಂಬಾಕು ಸೇವನೆಯಿಂದ ಸಾಯುತ್ತಿದ್ದಾರೆ. ಪ್ರತಿ 100 ಕ್ಯಾನ್ಸರ್ ಪ್ರಕರಣಗಳಲ್ಲಿ ಶೇ 40ರಷ್ಟು ತಂಬಾಕು ಸೇವನೆಯಿಂದ ಸಂಭವಿಸಿದ್ದಾಗಿರುತ್ತದೆ. ಬಾಯಿ ಕ್ಯಾನ್ಸರ್‌ಗೆ ತಂಬಾಕು ಸೇವನೆಯೇ ಪ್ರಮುಖ ಕಾರಣವಾಗಿದೆ’ ಎಂದು ತಿಳಿಸಿದರು.

ಯೋಜನಾಧಿಕಾರಿ ನಾರಾಯಣ ಜಿ. ಮಾತನಾಡಿ, ‘ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಿ, ದುಶ್ಚಟಗಳಿಗೆ ದಾಸರಾಗದಂತೆ ನೋಡಿಕೊಳ್ಳಬೇಕು. ಈ ಕುರಿತು ನೆರೆಹೊರೆಯವರಿಗೂ ಜಾಗೃತಿ ಮೂಡಿಸಬೇಕು’ ಎಂದರು.

ಕಾರ್ಯಕ್ರಮದಲ್ಲಿ ಅಶ್ವಿನಿ, ರಾಜೇಶ್ವರಿ, ಅನ್ನಪೂರ್ಣ ಜಯಶ್ರೀ ಅನಿಸಿಕೆ ಹಂಚಿಕೊಂಡರು. ಕಾರ್ಯಕ್ರಮದಲ್ಲಿ 150ಕ್ಕೂ ಅಧಿಕ ಮಹಿಳೆಯರು ಪಾಲ್ಗೊಂಡಿದ್ದರು. ಒಕ್ಕೂಟದ ಶೋಭಾ, ನಸ್ರಿನ್,  ಜೈ ಬೊಂದಿ ಹಾಜರಿದ್ದರು. ಮೇಲ್ವಿಚಾರಕಿ ಹರಿಪ್ರಿಯಾ ಸ್ವಾಗತಿಸಿ ನಿರೂಪಿಸಿದರು,  ಸೇವಾ ಪ್ರತಿನಿಧಿ ಅನ್ನಪೂರ್ಣ ವಂದಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.