ಹಾವೇರಿ: ತಾಲ್ಲೂಕಿನ ವೃತ್ತಿನಿರತ ಛಾಯಾಗ್ರಾಹಕರು ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ 182ನೇ ವಿಶ್ವ ಛಾಯಾಗ್ರಹಣ ದಿನವನ್ನು ಹಾವೇರಿ ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಹುಬ್ಬಳ್ಳಿಯ ಹಿರಿಯ ಛಾಯಾಗ್ರಾಹಕ ಶಶಿ ಸಾಲಿ ಮತ್ತು ಹಾವೇರಿ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅವರು ಕ್ಯಾಮೆರಾ ಕ್ಲಿಕ್ಕಿಸುವ ಮೂಲಕ ಉದ್ಘಾಟಿಸಿದರು.
ಹಾವೇರಿ ವೈದ್ಯರಾದ ಮೃತ್ಯುಂಜಯ ತುರ್ಕಾಣಿ ಅವರು ಉಚಿತವಾಗಿ ಆರೋಗ್ಯ ತಪಾಸಣೆ ಮತ್ತು ಹುಬ್ಬಳ್ಳಿಯ ಜನಪ್ರಿಯ ಆಸ್ಪತ್ರೆಯ ವೆಂಕಟರಾಮ ಕಟ್ಟಿ ಅವರು ಉಚಿತವಾಗಿ ಕಣ್ಣಿನ ತಪಾಸಣೆ ಮಾಡಿದರು.
ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ‘ಕಣ್ಣು ಮತ್ತು ಕ್ಯಾಮೆರಾ ನಡುವೆ ಅವಿನಾಭಾವ ಸಂಬಂಧವಿದೆ. ಛಾಯಾಗ್ರಾಹಕ ಚಿತ್ರಿಸಿದ ಚಿತ್ರಗಳು ದಾಖಲೆಗಳಾಗಿ ಉಳಿಯುತ್ತವೆ. ಪರಿಪೂರ್ಣವಾದ ಛಾಯಾಗ್ರಾಹಕ ತೆಗೆದ ಚಿತ್ರಗಳು ಮಾತ್ರ ಪರಿಪೂರ್ಣವಾಗಿರುತ್ತವೆ. ಜೀವ ಜಗತ್ತಿನ ಸತ್ಯಾಸತ್ಯತೆ ಹೇಳುವ ಪ್ರತಿಬಿಂಬಿವೇ ಛಾಯಾಗ್ರಹಣ. ಇವುಗಳನ್ನು ಅಳಿಸಲು ಯಾರಿಂದಲೂ ಸಾದ್ಯವಿಲ್ಲ’ ಎಂದು ಹೇಳಿದರು.
ಹಿರಿಯ ಛಾಯಾಗ್ರಾಹಕ ಶಶಿ ಸಾಲಿ ಮಾತನಾಡಿ, ‘ಛಾಯಾಗ್ರಾಹಕರು ಈಗಿನ ವಿದ್ಯುನ್ಮಾನ ಅಳವಡಿಸಿಕೊಂಡು ಅತ್ಯುತ್ತಮವಾದ ಚಿತ್ರಗಳನ್ನು ತೆಗೆಯುವಲ್ಲಿ ಯಶಸ್ವಿಯಾಗಬೇಕು. ಜನರ ಜೊತೆ ಉತ್ತಮವಾದ ರೀತಿಯಲ್ಲಿ ನಡೆದುಕೊಳ್ಳಿ’ ಎಂದು ಸಲಹೆ ನೀಡಿದರು.
ತಾಲ್ಲೂಕು ಸಂಘದ ಅಧ್ಯಕ್ಷರಾದ ಶಂಭುಗೌಡ ಅಂದಾನಿಗೌಡ್ರ, ಉಪಾದಕ್ಷ್ಯ ಸಿದ್ದಣ್ಣ ಹಳ್ಳಿಕೇರಿ, ಕಾರ್ಯದರ್ಶಿ ಮಲ್ಲು ಕುಂಬಾರಿ, ಪತ್ರಿಕಾ ಛಾಯಾಗ್ರಾಹಕರಾದ ರಾಜೇಂದ್ರ ರಿತ್ತಿ, ನಾಗೇಶ ಬಾರ್ಕಿ, ಸದಸ್ಯರಾದ ಪ್ರಕಾಶ ನಂದಿ, ರಾಜು ಬಾರ್ಕಿ, ರಾಜು ಆನ್ವೇರಿ, ಕೃಷ್ಣ ಮಾಳಗಿ, ಕುಬೇರಗೌಡ ಕರಿಗೌಡ್ರ, ಕುಮಾರ ಕೋಳುರ, ಶಿವಬಸವ ಬಣಕಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.