ಹಾವೇರಿ: ‘ಕಲೆಗಳ ತವರೂರು ಭಾರತ. ಸಂತಸ, ನೆಮ್ಮದಿ, ಜೀವನ ಪ್ರೀತಿ ಉಕ್ಕಿಸುವ ಕಲೆಗೆ ಸೋಲದ ಮನಸುಗಳೇ ಇಲ್ಲ’ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಹೊಸಮಠದ ಬಸವೇಶ್ವರ ಸಮುದಾಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಎಸ್.ಜೆ.ಎಂ. ಪದವಿ ಪೂರ್ವ ಕಾಲೇಜು ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ‘ಯುವ ಸೌರಭ’ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ವ್ಯಾಪಾರವನ್ನು ನೆಚ್ಚಿಕೊಂಡಿರುವ ಅಮೆರಿಕ, ರಾಜಕೀಯ ಬುನಾದಿ ಮೇಲೆ ನಿಂತಿರುವ ಯುರೋಪ್, ತಂತ್ರಜ್ಞಾನ ಆಧಾರಿತ ಜಪಾನ್, ವಿಜ್ಞಾನದಲ್ಲಿ ಪಾರಮ್ಯ ಸಾಧಿಸಿರುವ ರಷ್ಯಾ ದೇಶಗಳು, ಸಂಬಂಧಿತ ಕ್ಷೇತ್ರಗಳಲ್ಲಿ ಏರುಪೇರಾದರೆ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತವೆ. ಆದರೆ, ಕಲೆ ಮತ್ತು ಸಂಸ್ಕೃತಿ ನಶಿಸಿದರೆ, ಭಾರತ ದೇಶವೇ ನಾಶವಾಗುತ್ತದೆ ಎಂಬುದನ್ನು ಎಲ್ಲರೂ ಮನಗಾಣಬೇಕು ಎಂದು ಸ್ವಾಮೀಜಿ ಎಚ್ಚರಿಸಿದರು.
ನಾಡು–ನುಡಿ ಸಂರಕ್ಷಿಸಿ:
ನಮ್ಮ ಪಾರಂಪರಿಕ ಕಲೆ, ಸಂಸ್ಕೃತಿಯನ್ನು ಉಳಿಸುವ ಜತೆಗೆ ನಾಡು–ನುಡಿಯನ್ನು ಸಂರಕ್ಷಿಸುವ ಕಾರ್ಯವಾಗಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪಾತ್ರ ದೊಡ್ಡದು. ಸರಳತೆ, ಆದರ್ಶ, ತತ್ವ, ಜೀವನ ಮೌಲ್ಯಗಳನ್ನು ನಾಟಕಗಳು ನಮಗೆ ಕಲಿಸುತ್ತವೆ. ಸಿನಿಮಾ ನೋಡುವಾಗ ಹಿಂದಿನ ಸ್ಥಳವನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ನಾಟಕ ನೋಡುವಾಗ ಮುಂದಿನ ಸ್ಥಳವನ್ನು ಆಯ್ಕೆ ಮಾಡುತ್ತೇವೆ. ಹಾಗಾಗಿ ಜೀವನದಲ್ಲಿ ನಮ್ಮನ್ನು ಮುಂದೆ ಕರೆದೊಯ್ಯುವ ರಂಗಕಲೆಯನ್ನು ಉಳಿಸಿ–ಬೆಳೆಸಬೇಕಿದೆ ಎಂದು ಅರ್ಥಪೂರ್ಣವಾಗಿ ತಿಳಿಸಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಸ್.ಕೆ.ಕರಿಯಣ್ಣನವರ ಮಾತನಾಡಿ, ‘ಟಿ.ವಿ. ಮಾಧ್ಯಮದ ಹಾವಳಿಯಿಂದ ನಮ್ಮ ಕಲೆ ಮತ್ತು ಸಂಸ್ಕೃತಿ ಬಿಂಬಿಸುವ ಪ್ರದರ್ಶನಗಳು ಕಡಿಮೆಯಾಗುತ್ತಿವೆ. ರಾಜ–ಮಹಾರಾಜರು ತಮ್ಮ ಆಸ್ಥಾನಗಳಲ್ಲಿ ಕಲಾವಿದರಿಗೆ ಆಶ್ರಯ ನೀಡುವ ಮೂಲಕ ಕಲೆಯನ್ನು ಪ್ರೋತ್ಸಾಹಿಸುತ್ತಿದ್ದರು. ಈಗಲೂ ಕಲಾಪೋಷಕರ ಅಗತ್ಯ ಹೆಚ್ಚು ಕಂಡುಬರುತ್ತಿದೆ. ವಿದ್ಯಾರ್ಥಿಗಳು ಪಠ್ಯದ ಜತೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಿ, ಉತ್ತಮ ಪ್ರಜೆಗಳಾಗಬೇಕು. ತಂದೆ–ತಾಯಂದಿರ ಕನಸಿಗೆ ತಣ್ಣೀರೆರಚಬೇಡಿ’ ಎಂದು ತಿಳಿ ಹೇಳಿದರು.
ದೇಸಿ ಕಲೆ ಕಣ್ಮರೆ:
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ವೀ.ಹುಡೇದ ಪ್ರಾಸ್ತಾವಿಕವಾಗಿ ಮಾತನಾಡಿ, ‘ಟಿ.ವಿ, ಮೊಬೈಲ್, ಇಂಟರ್‌ನೆಟ್ ಮುಂತಾದವುಗಳ ಭರಾಟೆಯಲ್ಲಿ ದೇಸಿ ಕಲೆಗಳು ಕಣ್ಮರೆಯಾಗುತ್ತಿವೆ. ಹಿಂದೂಸ್ತಾನಿ ಸಂಗೀತ, ಶಾಸ್ತ್ರೀಯ ಕಲೆಗಳು ಯುವಜನರಿಂದ ದೂರ ಸರಿಯುತ್ತಿವೆ. ಈ ಸಾಂಸ್ಕೃತಿಕ ಅರಾಜಕತೆಯ ಹೊತ್ತಿನಲ್ಲಿ ಪಾರಂಪರಿಕ ಕಲೆಗಳನ್ನು ಉಳಿಸಿ–ಬೆಳೆಸುವ ಕೆಲಸವನ್ನು ಇಲಾಖೆ ಮಾಡುತ್ತಿದೆ. ಸಾಂಸ್ಕೃತಿಕ ಸೌರಭ, ಯುವ ಸೌರಭ, ಚಿಗುರು, ಮಹಿಳಾ ಸಾಂಸ್ಕೃತಿಕ ಉತ್ಸವ ಮುಂತಾದ ಕಾರ್ಯಕ್ರಮಗಳ ಮೂಲಕ ಕಲಾಭಿರುಚಿ ಬೆಳೆಸುವ ಪ್ರಯತ್ನ ಮಾಡುತ್ತಿದೆ’ ಎಂದರು.
ಎಸ್.ಜೆ.ಎಂ. ಪದವಿಪೂರ್ವ ಕಾಲೇಜು ಪ್ರಾಚಾರ್ಯ ಪಿ.ಬಿ. ವಿಜಯಕುಮಾರ, ಹಿರೇಕೆರೂರು ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮಂಜಣ್ಣ, ವಿದ್ಯಾರ್ಥಿಗಳು ಮತ್ತು ಕಲಾವಿದರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.