ಬೆಳಗಾವಿ: ‘ರಾಜಕುಮಾರ ಟಾಕಳೆ ನನ್ನನ್ನು ಮದುವೆಯಾಗಿ ಮೋಸ ಮಾಡಿದ್ದಾರೆ. ನಾನು ಅವರ ಮೇಲೆ ಹನಿಟ್ರ್ಯಾಪ್ ಮಾಡಿಲ್ಲ. ನನ್ನನ್ನೇ ಅವರು ಹನಿಟ್ರ್ಯಾಪ್‌ನಲ್ಲಿ ಸಿಕ್ಕಿಸಿದ್ದಾರೆ. ನನ್ನ ಖಾಸಗಿ ವಿಡಿಯೊಗಳನ್ನು ತೆಗೆದುಕೊಂಡು ಅವರೇ ವೈರಲ್ ಮಾಡಿದ್ದಾರೆ. ಈ ಕುರಿತು ಸೈಬರ್ ಅಪರಾಧ ವಿಭಾಗದಲ್ಲಿ ದೂರು ನೀಡಲು ಬೆಳಗಾವಿಗೆ ಬಂದಿದ್ದೇನೆ’ ಎಂದು ಚನ್ನಪಟ್ಟಣದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ಹೇಳಿದರು.
ನಗರದಲ್ಲಿ ಶನಿವಾರ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ ಅವರು, ‘ತೋಟಗಾರಿಕೆ ಇಲಾಖೆಯ ಖಾನಾಪುರದ ಸಸ್ಯ ಪಾಲನಾಲಯದ ಸಹಾಯಕ ನಿರ್ದೇಶಕ ರಾಜಕುಮಾರ ಟಾಕಳೆ ಹಾಗೂ ನಾನು ಬೆಂಗಳೂರಿನ ‘ಕುಮಾರ ಕೃಪಾ’ ಸರ್ಕಾರಿ ಬಂಗಲೆ ಆವರಣದ ಗಣೇಶ ದೇಗುಲದಲ್ಲಿ 2020ರ ಮೇ ತಿಂಗಳಲ್ಲಿ ಮದುವೆಯಾಗಿದ್ದೇವೆ. ನಂತರ ನನ್ನೊಂದಿಗೆ ಸಂಸಾರವನ್ನೂ ಮಾಡಿದ್ದಾರೆ. ಆದರೆ, ಮುಂಚಿತವಾಗಿ ಅವರಿಗೆ ಮದುವೆಯಾಗಿ, ಮಕ್ಕಳಿರುವ ವಿಚಾರ ಮುಚ್ಚಿಟ್ಟಿದ್ದಾರೆ. ಅಲ್ಲದೇ, ನನ್ನನ್ನು ಯಾಮಾರಿಸಿ ಕುಮಾರ ಕೃಪಾ ಬಂಗಲೆಯನ್ನೂ ದುರುಪಯೋಗ ಮಾಡಿಕೊಂಡಿದ್ದಾರೆ. ಈ ಬಗ್ಗೆ ಈಗಾಗಲೇ ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಗೆ ದೂರು ಸಲ್ಲಿಸಿದ್ದೇನೆ’ ಎಂದರು.
‘ರಾಜಕುಮಾರ ಮಾಡಿದ ಮೋಸದ ಬಗ್ಗೆ ದೂರು ನೀಡಲು ಈಚೆಗೆ ಬೆಳಗಾವಿಗೆ ಬಂದಿದ್ದೆ. ಆಗ ದೂರು ನೀಡದಂತೆ ಕೆಲವರು ಒತ್ತಡ ಹೇರಿದ್ದರಿಂದ ಮರಳಿ ಹೋಗಿದ್ದೆ. ಶನಿವಾರ ಎಲ್ಲ ವಿವರಗಳೊಂದಿಗೆ ಬಂದಿದ್ದು, ಬೆಳಗಾವಿಯ ಎಪಿಎಂಸಿ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಿಸಲಿದ್ದೇನೆ’ ಎಂದರು.
‘ಮುಂಚಿತವಾಗಿಯೇ ಎಲ್ಲ ಯೋಜನೆ ಮಾಡಿಕೊಂಡಿದ್ದ ರಾಜಕುಮಾರ ನನ್ನ ಖಾಸಗಿ ವಿಡಿಯೊ ಮಾಡಿಕೊಂಡಿದ್ದಾರೆ. ಯಾವುದೇ ವಿಡಿಯೊದಲ್ಲಿ ಅವರು ಕಾಣಿಸದಂತೆ, ನಾನು ಮಾತ್ರ ಬರುವಂತೆ ಮಾಡಿದ್ದಾರೆ. ಅವುಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ನಾನು ವಿದೇಶಕ್ಕೆ ಹೋದ ಸಂದರ್ಭದಲ್ಲಿ ಉದ್ದೇಶ ಪೂರ್ವಕವಾಗಿ ಖಾಸಗಿ ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಇದರಲ್ಲಿ ಚನ್ನಪಟ್ಟಣದ ಒಬ್ಬ ಕಾಂಗ್ರೆಸ್ ನಾಯಕ ಹಾಗೂ ಪತ್ರಿಕೆಯೊಂದರ ಸಂಪಾದಕರ ಕೈವಾಡವೂ ಇದೆ. ದೂರಿನಲ್ಲಿ ಎಲ್ಲವನ್ನೂ ಬರೆಯುತ್ತೇನೆ’ ಎಂದರು.
‘ರಾಜಕುಮಾರ ನನ್ನನ್ನು ಅಪಹರಿಸಿ ಬೆಳಗಾವಿ ಹೊರವಲಯದ ಗಣೇಶಪುರದ ಮಾವಿನ ತೋಪದಲ್ಲಿ ಇರಿಸಿದ್ದರು. ಕತ್ತಲೆ ಕೋಣೆಯಲ್ಲಿ ಕೂಡಿಹಾಕಿದ್ದರು. ಅಲ್ಲಿಯೂ ನನ್ನ ವಿಡಿಯೊ ಮಾಡಿಕೊಂಡಿದ್ದರು. ತನ್ನ ಕಾಮತೃಷೆ ತೀರಿಸಿಕೊಳ್ಳಲು ನನ್ನನ್ನು ಬಳಸಿಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನೂ ದೂರಿನಲ್ಲಿ ಬರೆಯುತ್ತೇನೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.