ಹುಬ್ಬಳ್ಳಿ: ‘ಸ್ವಾರ್ಥ, ಲೂಟಿ ಹಾಗೂ ಸಂಕುಚಿತ ಭಾವನೆಯೇ ರಾಜಕೀಯ. ಈ ಗುಣಗಳು ಪಕ್ಷಾತೀತವಾಗಿವೆ. ಇಂತಹ ಅಯೋಗ್ಯರ ಜೊತೆ ಸೇರಿಯೂ ನಾನು ಅಯೋಗ್ಯನಾಗದೆ ಉಳಿದೆ ಎಂಬ ಸಂತೋಷ ನನಗಿದೆ’ ಎಂದು ಮಾಜಿ ಐಪಿಎಸ್ ಅಧಿಕಾರಿ ಶಂಕರ ಬಿದರಿ ಹೇಳಿದರು.
ಸಪ್ನಾ ಬುಕ್ ಹೌಸ್ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ತಮ್ಮ ಆತ್ಮಚರಿತ್ರೆ ‘ಸತ್ಯಮೇವ ಜಯತೆ’ ಪುಸ್ತಕ ಬಿಡುಗಡೆ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ರಾಜಕಾರಣಿಗಳಿಗೆ ಕೈಕೋಳವೂ ಚಿನ್ನದ ಖಡ್ಗವಿದ್ದಂತೆ. ಜೈಲಿಗೆ ಕಳಿಸಿದರೆ ಅರಮನೆಗೆ ಕಳಿಸಿದಂತೆ. ಅಲ್ಲಿಂದ ವಾಪಸ್ ಬರುವಾಗ ದೊಡ್ಡ ಮೆರವಣಿಗೆಯ ಸ್ವಾಗತ ಸಿಗುತ್ತದೆ. ಕ್ರೇನ್‌ಗಳಲ್ಲಿ ಸೇಬಿನ ಹಾರ ಹಾಕಿಸಿಕೊಳ್ಳುತ್ತಾರೆ. ಅಧಿಕಾರಿಗಳು ರಾಜಕಾರಣಿಗಳ ಮರ್ಜಿಗೆ ಒಳಗಾಗದೆ,ಕಾನೂನುಬದ್ಧವಾಗಿ ಕೆಲಸ ಮಾಡಬೇಕು. ತಮ್ಮನ್ನು ಮಾರಿಕೊಳ್ಳಬಾರದು. ಎಂತಹ ಸಂದರ್ಭದಲ್ಲೂ ಆತ್ಮಹತ್ಯೆ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಬಾರದು’ ಎಂದು ಸಲಹೆ ನೀಡಿದರು.
‘2012ರಲ್ಲಿ ಜಾರಿಗೆ ತಂದ ಒಂದು ವರ್ಷದ ವರ್ಗಾವಣೆ ನಿಯಮದಿಂದಾಗಿ, ಪೊಲೀಸ್ ಇಲಾಖೆ ಸೇರಿದಂತೆ ಇಡೀ ನೌಕರಶಾಹಿ ಹಾಗೂ ನ್ಯಾಯದಾನ ವ್ಯವಸ್ಥೆ ಹಾಳಾಗುತ್ತಿದೆ. ರಾಜ್ಯ ವಿನಾಶದತ್ತ ಸಾಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದರೂ, ಯಾರಿಗೂ ತಿಳಿವಳಿಕೆ ಬಂದಿಲ್ಲ. ವರ್ಗಾವಣೆ ನಿಯಮವನ್ನು ತಕ್ಷಣ ರದ್ದುಪಡಿಸಬೇಕು. ಬೇರೆ ರಾಜ್ಯಗಳಲ್ಲಿರುವಂತೆ ಸಾಮಾನ್ಯ ವರ್ಗಾವಣೆ ಅವಧಿಯನ್ನು ಕನಿಷ್ಠ 2 ವರ್ಷಕ್ಕೆ ನಿಗದಿಪಡಿಸಬೇಕು’ ಎಂದು ಒತ್ತಾಯಿಸಿದರು.
‘ಪತ್ರಕರ್ತ ರವಿ ಬೆಳಗೆರೆ ಒಮ್ಮೆ ನನ್ನನ್ನು ಭೇಟಿ ಮಾಡಿ, ಅಣ್ಣಾ ₹50 ಲಕ್ಷ ಕೊಡ್ತಿನಿ. ನಿಮ್ಮ ಅನುಭವಗಳನ್ನು ಹೇಳಿ. ಒಂದು ಸೂಪರ್ ಹಿಟ್ ಸಿನಿಮಾ ಮಾಡುತ್ತೇನೆ ಎಂದಿದ್ದ. ಬೇರೆಯವರು ಸಹ ಪ್ರಯತ್ನಿಸಿದ್ದರು. ಆದರೆ, ಬೇಡ ಎಂದು ನಾನೇ ಸುಮ್ಮನಾಗಿದ್ದೆ. ಗ್ರಾಮೀಣ ಭಾಗದವರಿಗೆ ಸಾಧನೆ ಮಾಡಲು ಆತ್ಮವಿಶ್ವಾಸ ತುಂಬಬೇಕು ಎಂದು ಈ ಆತ್ಮಚರಿತ್ರೆ ಬರೆದೆ. ಇದರ ಇಂಗ್ಲಿಷ್, ತೆಲುಗಿನ ಅನುವಾದದ ಪುಸ್ತಕ ಹಾಗೂ ಆಡಿಯೊ ಕೂಡ ಶೀಘ್ರ ಹೊರಬರಲಿದೆ’ ಎಂದರು.
ಸಪ್ನಾ ಬುಕ್ ಹೌಸ್‌ನ ಹುಬ್ಬಳ್ಳಿ ಶಾಖೆ ವ್ಯವಸ್ಥಾಪಕ ರಘು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.