ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ನೇತೃತ್ವದಲ್ಲಿ ಜ.21ರಿಂದ 24ರವರೆಗೆ, ಇಲ್ಲಿನ ಬಿ.ಎಸ್. ಯಡಿಯೂರಪ್ಪ ಮಾರ್ಗದಲ್ಲಿರುವ ಮಾಲಿನಿ ಸಿಟಿ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ.
ನಾಲ್ಕು ದಿನಗಳ ಈ ಉತ್ಸವದಲ್ಲಿ ಯುವಜನೋತ್ಸವ, ಮಕ್ಕಳ ಗಾಳಿಪಟ ಹಬ್ಬ, ಮಹಿಳಾ ಉತ್ಸವ, ಗಾಯನ, ಸಮೂಹ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಉತ್ಸವದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆ ಇದೆ ಎಂದು ಶಾಸಕ ಅಭಯ ಪಾಟೀಲ ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈ ಬಾರಿ ವಿವಿಧ 11 ದೇಶಗಳಿಂದ ಗಾಳಿಪಟ ಆಟಗಾರರು ಆಗಮಿಸುತ್ತಿರುವುದು ವಿಶೇಷ. ಜತೆಗೆ ದೇಶದ 25 ರಾಜ್ಯಗಳೂ ಸೇರಿದಂತೆ ಜಿಲ್ಲೆಯ ಹಲವು ಯುವಕ– ಯುವತಿಯರು ಪಟ ಹಾರಿಸಲಿದ್ದಾರೆ. ಮಕ್ಕಳಿಗೆ ವಿಶೇಷ ಉತ್ಸವ ನಡೆಯಲಿದ್ದು 5,000 ಪಟಗಳನ್ನು ಉಚಿತವಾಗಿ ವಿತರಿಸಲಾಗುವುದು. ಸಿಡಿಮದ್ದುಗಳ ಪ್ರದರ್ಶನ ಹಾಗೂ ವೈವಿಧ್ಯಮಯ ಪಟಗಳ ಹಾರಾಟ ಈ ಬಾರಿ ಗಮನ ಸೆಳೆಯಲಿದೆ ಎಂದರು.
ಈ ಬಾರಿ ನಡೆಯುತ್ತಿರುವುದು 11ನೇ ವರ್ಷದ ಉತ್ಸವ. ಸಾರ್ವಜನಿಕ ಮನರಂಜನೆ ಮಾತ್ರವಲ್ಲದೇ, ಯುವಜನರಲ್ಲಿ ಹುಮ್ಮಸ್ಸು ತುಂಬುವ ಉದ್ದೇಶದಿಂದ ಇದನ್ನು ಆಯೋಜನೆ ಮಾಡುತ್ತ ಬಂದಿದ್ದೇವೆ. ಕಳೆದ ವರ್ಷ ಎರಡೂವರೆ ಲಕ್ಷ ಜನ ಇದರ ಸಂಭ್ರಮ ಅನುಭವಿಸಿದ್ದರು. ಈ ಬಾರಿ ನಾಲ್ಕು ಲಕ್ಷ ತಲುಪುವ ಸಾಧ್ಯತೆ ಇದೆ ಎಂದೂ ಅವರು ಹೇಳಿದರು.
ಉತ್ಸವದ ಸಂಚಾಲಕ ಚೈತನ್ಯ ಕುಲಕರ್ಣಿ ಮಾತನಾಡಿ, ‘ಮೊದಲ ದಿನ ಯುವಜನರಿಗಾಗಿ ಡಿ.ಜೆ ಸಂಗೀತ ಸಂಜೆ ಆಯೋಜಿಸಲಾಗಿದೆ. ಜ.22 ಹಾಗೂ 23ರಂದು ಭಾಷಣ, ಸಂಗೀತ ಹಾಗೂ ನೃತ್ಯ ಸ್ಪರ್ಧೆಗಳು ನಡೆಯಲಿವೆ. ಜ.24ರಂದು ಬಾಡಿ ಬಿಲ್ಡಿಂಗ್ ಸ್ಪರ್ಧೆ ನಡೆಯಲಿದೆ ಎಂದರು.
ಸಚಿವರ ಬಳಿ ನಿಯೋಗ
‘ಬೆಳಗಾವಿಯ ವಿಮಾನ ನಿಲ್ದಾಣ ಹಾಗೂ ಕೈಗಾರಿಕೆ ಅಭಿವೃದ್ಧಿ ಸಂಬಂಧ ಜ.21ರಂದು ಬೆಳಗಾವಿ ಶಾಸಕರ ನೇತೃತ್ವದಲ್ಲಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಬಳಿ ನಿಯೋಗ ಹೋಗಲಾಗುವುದು. ಮುಂಬೈ ವಿಮಾನ ರದ್ದು ಮಾಡಿದ್ದರಿಂದ ವಾಣಿಜ್ಯೋದ್ಯಮದ ಮೇಲೆ ಆಗುವ ಪರಿಣಾಮಗಳ ಕುರಿತೂ ಅವರಿಗೆ ಮನವರಿಕೆ ಮಾಡಲಾಗುವುದು’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.
‘ಬೆಳಗಾವಿ ವಿಮಾನ ರದ್ದಾಗಲು ಪ್ರಹ್ಲಾದ ಜೋಶಿ ಅವರೇ ಕಾರಣ ಎಂಬ ಆರೋಪಕ್ಕೆ ಅರ್ಥವಿಲ್ಲ. ಉಡಾನ್ ಯೋಜನೆ ಅಡಿ ಇರುವ 12 ವಿಮಾನಗಳು ಬಂದ್ ಆಗಿವೆ. ಉಡಾನ್ ಅವಧಿ ಮುಗಿದಿದ್ದೂ ಇದಕ್ಕೆ ಕಾರಣ ಇರಬಹುದು. ಇದರಲ್ಲಿ ಸಚಿವರ ತಪ್ಪೇನೂ ಇಲ್ಲ. ಹೀಗಾಗಿ, ನಮಗೆ ವಿಮಾನ ಸಂಚಾರ ಆರಂಭಿಸುವ ಸಂಬಂಧ ಅವರಿಗೆ ಮನವರಿಕೆ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.