ADVERTISEMENT

ಕೈಗಾರಿಕಾ ಕ್ಷೇತ್ರದಲ್ಲಿ ಕಳೆಗುಂದಿದ ಕಲಬುರ್ಗಿ

ಸಿದ್ದೇಶ
Published 30 ಜನವರಿ 2017, 6:39 IST
Last Updated 30 ಜನವರಿ 2017, 6:39 IST
ಕೈಗಾರಿಕಾ ಕ್ಷೇತ್ರದಲ್ಲಿ ಕಳೆಗುಂದಿದ ಕಲಬುರ್ಗಿ
ಕೈಗಾರಿಕಾ ಕ್ಷೇತ್ರದಲ್ಲಿ ಕಳೆಗುಂದಿದ ಕಲಬುರ್ಗಿ   
ಕಲಬುರ್ಗಿ: ‘ರಾಜ್ಯದ ಕೈಗಾರಿಕಾ ಅಭಿವೃದ್ಧಿಯಲ್ಲಿ ಜಿಲ್ಲೆಯ ಪಾಲು ಕೇವಲ ಶೇ 12ರಷ್ಟಿದ್ದು, ಇದರಿಂದ ಜಿಲ್ಲೆಗೆ 17ನೇ ಸ್ಥಾನ ಪ್ರಾಪ್ತವಾಗಿದೆ. ಬೃಹತ್‌ ಕೈಗಾರಿಕೆಗಳನ್ನು ಆರಂಭಿಸುವುದರಿಂದ ಈ ಕ್ಷೇತ್ರ ಬೆಳವಣಿಯಾಗುತ್ತದೆ. ಇದರ ಜೊತೆಗೆ ಸ್ಥಳೀಯವಾಗಿ ಉತ್ಪಾದಿಸಲ್ಪಡುವ ವಸ್ತುಗಳಿಗೆ ಉದ್ಯಮದ ಸ್ಪರ್ಶ ನೀಡಬೇಕು’ ಎಂದು ಕಲಬುರ್ಗಿ ಸರ್ಕಾರಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ಪ್ರೊ. ಮಲ್ಲೇಶಪ್ಪ ಕುಂಬಾರ ಅಭಿಪ್ರಾಯಪಟ್ಟರು.
 
‘ಸಂಕೀರ್ಣ’ ಗೋಷ್ಠಿಯಲ್ಲಿ ‘ಕೈಗಾರಿಕೆ ಮತ್ತು ವಾಣಿಜ್ಯ’ ವಿಷಯದ ಕುರಿತು ಮಾತನಾಡಿದ ಅವರು, ‘ನಮ್ಮ ಭಾಗದಲ್ಲಿ ತೊಗರಿ ಹೆಚ್ಚಾಗಿ ಬೆಳೆಯಲಾಗುತ್ತಿದೆ. ಇದರಿಂದ ಉಪ ಉತ್ಪನ್ನಗಳ ತಯಾರಿಕೆ ಮತ್ತು ಮಾರಾಟ ಮಾಡುವುದರಿಂದ ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತವೆ. ಹೈನುಗಾರಿಕೆ, ತೋಟಗಾರಿಕೆ ಅವಕಾಶವಿದ್ದು, ಕೃಷಿ ಪ್ರಧಾನ ಕೈಗಾರಿಕೋದ್ಯಮದತ್ತ ಚಿತ್ತ ಹರಿಸಬಹುದು’ ಎಂದು ಸಲಹೆ ನೀಡಿದರು. 
 
‘ಪ್ರವಾಸೋದ್ಯಮ’ದ ವಿಷಯದ ಕುರಿತು ಮಾತನಾಡಿದ ಕೇಂದ್ರೀಯ ವಿಶ್ವವಿದ್ಯಾಲಯದ ಡಾ. ಗಣಪತಿ ಸಿನ್ನೂರಕರ, ‘ಐತಿಹಾಸಿಕ ಪ್ರಸಿದ್ಧ ಸ್ಥಳಗಳಿರುವ ಕಲಬುರ್ಗಿಗೆ ವರ್ಷದಲ್ಲಿ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಶೇ10ನ್ನೂ ದಾಟುವುದಿಲ್ಲ. ಅವುಗಳನ್ನು ಪ್ರವಾಸಿಗರ ಸ್ನೇಹಿಯಾಗಿ ಅಭಿವೃದ್ಧಿಪಡಿಸದಿರುವುದೇ ಇದಕ್ಕೆ ಕಾರಣ’ ಎಂದು  ಬೇಸರ ವ್ಯಕ್ತಪಡಿಸಿದರು.
 
‘ಕೆಎಸ್‌ಟಿಡಿಸಿ ದಕ್ಷಿಣ ಕರ್ನಾಟಕಕ್ಕೆ 17 ಟೂರ್‌ ಪ್ಯಾಕೇಜ್‌ಗಳನ್ನು ರೂಪಿಸಿದ್ದು, ನಮ್ಮ ಭಾಗಕ್ಕೆ ಕೇವಲ 2 ಟೂರ್‌ ಪ್ಯಾಕೇಜ್‌ ಮಾಡಿದೆ.  ಈ ತಾತ್ಸಾರ, ಅನ್ಯಾಯ ಸರಿಪಡಿಸುವುದರ ಜೊತೆಗೆ ಈ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆಯು (ಕೆಎಸ್‌ಟಿಡಿಸಿ) ತನ್ನ ಪ್ರಾದೇಶಿಕ ಕಚೇರಿಯನ್ನು ಕಲಬುರ್ಗಿಯಲ್ಲಿ ಆರಂಭಿಸಬೇಕು’ ಎಂದು ಆಗ್ರಹಿಸಿದರು.
 
‘ನಮ್ಮಲ್ಲಿನ ಕಲೆ, ಸಂಸ್ಕೃತಿ, ಆಹಾರ ಹಾಗೂ ಪ್ರಸಿದ್ಧ ಸ್ಥಳಗಳನ್ನು ಅಭಿವೃದ್ಧಿಪಡಿಸುವುದರ ಜೊತೆಗೆ ಬ್ರ್ಯಾಂಡಿಂಗ್‌ ಮಾಡಿ ಪ್ರಚಾರ ಮಾಡಬೇಕು. ಇದರಿಂದ ಮಾತ್ರ ವಿಶ್ವದ ಭೂಪಟದಲ್ಲಿ ಕಲಬುರ್ಗಿಯನ್ನು ಪ್ರವಾಸಿಗರ ನೆಚ್ಚಿನ ತಾಣವನ್ನಾಗಿಸಬಹುದು’ ಎಂದು ಅಭಿಪ್ರಾಯಪಟ್ಟರು.
 
‘ಮಾನವ ಸಂಪನ್ಮೂಲ ಸದ್ಬಳಕೆ’ ವಿಷಯದ ಕುರಿತು ಮಾತನಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ.ಮೈಕಲ್‌, ‘ಶರಣರ ಆಶಯದಂತೆ ಮನುಷ್ಯನಲ್ಲಿ ಅರಿವು ಮೂಡಿಸಿದರೆ, ಆತ್ಮ ಸಾಕ್ಷಾತ್ಕಾರವಾಗುತ್ತದೆ. ಇದರಿಂದ ವ್ಯಕ್ತಿಯು ನೈಜ ಸ್ವಾತಂತ್ರ್ಯ ಅನುಭವಿಸಲು ಸಾಧ್ಯ. ಇದು ತಾನೂ ಸೇರಿದಂತೆ ಸುತ್ತಲಿನ ಪರಿಸರದ ಅಭಿವೃದ್ಧಿಗೆ ನಾಂದಿ ಹಾಡುತ್ತದೆ. ಆದ್ದರಿಂದ, ಮಾನವ ಸಂಪನ್ಮೂಲ ಸದ್ಬಳಕೆ ಎನ್ನುವುದಕ್ಕೆ ಬದಲಾಗಿ ಮಾನವ ಸ್ಪಂದನೆ ಎನ್ನುವುದು ಸೂಕ್ತ’ ಎಂದರು.
 
‘ಕಲಬುರ್ಗಿ ನಗರದಲ್ಲಿ ಕೆಲವು ಶಾಲೆಗಳಲ್ಲಿ ಮಾತ್ರ ಉತ್ತಮ ಶಿಕ್ಷಣ ಸಿಗುತ್ತದೆ. ಗ್ರಾಮೀಣ ಭಾಗದಲ್ಲಿನ ಶಾಲಾ–ಕಾಲೇಜುಗಳಲ್ಲಿ ಶೈಕ್ಷಣಿಕ ಮಟ್ಟ ಅತ್ಯಂತ ದಯನೀಯವಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.
 
ಗುಲಬರ್ಗಾ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಡಾ. ವಾಸುದೇವ ಸೇಡಂ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಸಿದ್ಧರಾಮ ಪೊಲೀಸ್‌ ಪಾಟೀಲ ಇದ್ದರು.
 
ಇದಕ್ಕೂ ಮುನ್ನ ಖಣದಾಳದ ಶ್ರೀಗುರು ವಿದ್ಯಾಪೀಠದ ವಿದ್ಯಾರ್ಥಿಗಳು ದೊಡ್ಡಾಟದಲ್ಲಿ ಶೈಲಿಯಲ್ಲಿ ದ್ರೌಪದಿ ವಸ್ತ್ರಾಪಹರಣ ಸನ್ನಿವೇಶ ಪ್ರಸ್ತುತಪಡಿಸುವ ಮೂಲಕ ಭಾರಿ ಚೆಪ್ಪಾಳಿ ಗಿಟ್ಟಿಸಿಕೊಂಡರು.
 
**
ರಸ್ತೆ, ತಲಾ ಆದಾಯ ಕಲಬುರ್ಗಿಗೆ ಕೊನೆಯ ಸ್ಥಾನ
‘ರಾಜ್ಯದಲ್ಲಿ ರಸ್ತೆ ನಿರ್ಮಾಣ ಮತ್ತು ತಲಾ ಆದಾಯದಲ್ಲಿ ಕಲಬುರ್ಗಿಗೆ ಕೊನೆಯ ಸ್ಥಾನವಿದೆ ಎಂದು ‘ಸಾರಿಗೆ ಸಂಪರ್ಕ’ ವಿಷಯದ ಕುರಿತು ಮಾತನಾಡಿದ ಕಲಬುರ್ಗಿ ಸರ್ಕಾರಿ ಮಹಾವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ. ಗುರುಬಸಪ್ಪ ಬೇಸರ ವ್ಯಕ್ತಪಡಿಸಿದರು.
 
‘ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 275 ಕಿ.ಮೀ ರಸ್ತೆ ಇದೆ. ದೇಶದಲ್ಲಿ 100 ಕಿ.ಮೀ ವಿಸ್ತೀರ್ಣಕ್ಕೆ 64 ಕಿ. ಮೀ ರಸ್ತೆ ಇದ್ದು, ರಾಜ್ಯದಲ್ಲಿ ಇದು 44.07 ಕಿ.ಮೀ. ಕಲಬುರ್ಗಿ ವಿಷಯಕ್ಕೆ ಬಂದರೆ ಇದು ಕೇವಲ 26.02 ಕಿ.ಮೀ. ಅದೇ ಮಂಡ್ಯ ಜಿಲ್ಲೆಯೂ 69.34 ಕಿ.ಮೀ ರಸ್ತೆ ಹೊಂದುವ ಮೂಲಕ ದೇಶ ಮತ್ತು ರಾಜ್ಯವನ್ನು ಮೀರಿಸಿದೆ’ ಎಂದರು.  ‘ರಾಜ್ಯದಲ್ಲಿ ವಲಯವಾರು ರಸ್ತೆ ನಿರ್ಮಾಣವಾಗಿರುವುದನ್ನು ಗಮನಿಸಿದರೆ ಮೈಸೂರು (ಶೇ 29.38), ಬೆಂಗಳೂರು (ಶೇ 28.86), ಬೆಳಗಾವಿಯ  (ಶೇ 25.85) ನಂತರದ ಸ್ಥಾನ ಕಲಬುರ್ಗಿ (ಶೇ 15.88) ವಲಯಕ್ಕೆ ಇದೆ. ಇದರಲ್ಲಿ ಕಲಬುರ್ಗಿ ಜಿಲ್ಲೆಯಲ್ಲಿ ಶೇ 5.73ರಷ್ಟು ಮಾತ್ರ ರಸ್ತೆ ನಿರ್ಮಾಣವಾಗಿದೆ’ ಎಂದು ಅಂಕಿ–ಅಂಶಗಳನ್ನು ಮುಂದಿಟ್ಟರು. ‘ಭಾರತೀಯನೊಬ್ಬನ ತಲಾದಾಯವು ₹86,879 ಇದ್ದು, ರಾಜ್ಯದಲ್ಲಿ ಇದು ₹1,30, 897 ಇದೆ. ಅದೇ ಕಲಬುರ್ಗಿಯಲ್ಲಿ ಕೇವಲ ₹67, 886 ಇದೆ’ ಎಂದು ವಿವರಿಸಿದರು.
 
‘ಪ್ರತಿ ದಿನ ಕಲಬುರ್ಗಿ ಮಾರ್ಗವಾಗಿ 17 ರೈಲುಗಳು ಸಂಚರಿಸುತ್ತಿದ್ದು, 15 ರೈಲುಗಳು ವಾರದಲ್ಲಿ ಎರಡು ಅಥವಾ ಮೂರು ದಿನಕ್ಕೊಮ್ಮೆ ಸಂಚರಿಸುತ್ತವೆ. ಉಳಿದಂತೆ ವಾಡಿಯಿಂದ 6 ರೈಲು ಸಂಚರಿಸುತ್ತಿದ್ದರೂ ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್‌ನಂಥ ಮಹಾನಗರಗಳಿಗೆ ತಿಂಗಳಿಗೆ ಮುಂಚಿತವಾಗಿ ಟಿಕೆಟ್‌ ಕಾಯ್ದಿರಿಸಬೇಕು. ಇದು ಈ ಭಾಗದಲ್ಲಿನ ರಾಜಕೀಯ ಇಚ್ಛಾಶಕ್ತಿಯ ಕೊರತೆಗೆ ಕೈಗನ್ನಡಿ’ ಎಂದರು.
 
‘ಸ್ವಾತಂತ್ರ್ಯ ಬಂದು 70 ವರ್ಷವಾಗಿದ್ದು, ವಿಮಾನ ಏರುವುದಲ್ಲ, ನೋಡದೆಯೇ ಒಂದು ತಲೆಮಾರು ಕಣ್ಮುಚ್ಚಿದೆ. ಎರಡನೇ ತಲೆಮಾರಿಗಾದರೂ ವಿಮಾನ ಕಾಣುವ ಭಾಗ್ಯ ಬಹುಬೇಗ ಬರಲಿ. ಇದರಿಂದ ಈ ಭಾಗದ ಅಭಿವೃದ್ಧಿ ಸೂಚ್ಯಂಕ ಹೆಚ್ಚಾಗಲಿದೆ’ ಎಂದರು.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.