ಗುಲ್ಬರ್ಗ: ಮಳೆಗಾಲ ಆರಂಭವಾಗುತ್ತಿದ್ದಂತೆ ನಗರದಲ್ಲಿ ಶೇಂಗಾ ಮಾರಾಟವು ಜೋರಾಗಿದೆ. ನಗರದ ವಿವಿಧೆಡೆ ಮಹಿಳೆಯರು ಶೇಂಗಾ ತುಂಬಿದ ಬುಟ್ಟಿ ಇಟ್ಟುಕೊಂಡು ಮಾರಾಟ ನಡೆಸುವ ದೃಶ್ಯ ಸಾಮಾನ್ಯವಾಗಿದೆ.
ಪ್ರತಿ ವರ್ಷವೂ ಮುಂಗಾರು ಆಗಮಿಸಿ ವಾತಾವರಣ ತಂಪಾಗುತ್ತಿದ್ದಂತೆ ಬಿಸಿಲು ನಾಡು ಗುಲ್ಬರ್ಗದಲ್ಲೂ `ಬಡವರ ಬಾದಾಮಿ' ಶೇಂಗಾದ ಮಾರಾಟ ಜೋರಾಗುತ್ತದೆ. ಇಲ್ಲಿ ಶೇಂಗಾ ಬೆಳೆಯಿದ್ದರೂ ಪಕ್ಕದ ವಿಜಾಪುರ, ಬೆಳಗಾವಿ, ಸೊಲ್ಲಾಪುರ ಮೊದಲಾದ ಕಡೆಗಳಿಂದ ಇಲ್ಲಿಗೆ ಹಸಿ ಶೇಂಗಾ ತರಲಾಗುತ್ತಿದೆ. ಇದನ್ನು ಖರೀದಿಸಿ ಸ್ಥಳೀಯ ಮಹಿಳೆಯರು ವ್ಯಾಪಾರ ಮಾಡುತ್ತಾರೆ. ಇದು ಅವರ ಉಪ ಜೀವನಕ್ಕೂ ಲಾಭದಾಯಕ. ಶೇಂಗಾದಲ್ಲಿ ದೊಡ್ಡ ಗಾತ್ರದ ಶೇಂಗಾವನ್ನು (ಅಬ್ಶೇಂಗಾ) ಹೆಚ್ಚಾಗಿ ಇಲ್ಲಿ ಮಾರಾಟವಾಗುತ್ತದೆ.
ಬೇಸಿಗೆಯಲ್ಲಿ ಸುಲಿಗಾಯಿ (ಹಸಿ ಕಡಲೆಕಾಯಿ), ಮೆಕ್ಕೆಜೋಳ ಮಾರಾಟ ಕುದುರಿಸಿದರೆ ಮಳೆಗಾಲ ಆಂಭವಾಗುತ್ತಿದ್ದಂತೆ ಹಸಿ ಶೇಂಗಾ ಮಾರಾಟ ನಗರದಲ್ಲಿ ಗರಿಗೆದರುತ್ತದೆ. ಪೋಷಕಾಂಶಯುಕ್ತ ಶೇಂಗಾಕ್ಕೆ ಜನರು ಮುಗಿ ಬೀಳುತ್ತಾರೆ. ಶೇಂಗಾವು ಬಾದಾಮಿಯಂತೆ ಪೋಷಕಾಂಶಗಳನ್ನು ಹೊಂದಿರುವುದರಿಂದ ಬಡವರು ಹೆಚ್ಚಾಗಿ ಇದನ್ನು ಮಕ್ಕಳಿಗೆ ನಿಡುತ್ತಾರೆ.
`ಮಾರ್ಕೆಟ್‌ನಿಂದ ಚೀಲವೊಂದಕ್ಕೆ 1,800ರಿಂದ 2000 ರೂಪಾಯಿ ಕೊಟ್ಟು ಹಸಿ ಶೇಂಗಾ ಖರೀದಿಸುತ್ತೇವೆ. ಹಸಿ ಶೇಂಗಾಕ್ಕೆ ಸೇರಿಗೆ 20 ರೂಪಾಯಿಯಂತೆ ಹಾಗೂ ಸುಟ್ಟ ಶೇಂಗಾಕ್ಕೆ 30 ರೂಪಾಯಿಯಂತೆ ಮಾರಾಟ ಮಾಡುತ್ತೇವೆ. ಕೆಲವೊಮ್ಮೆ ಒಂದು ಚೀಲದಷ್ಟು ಶೇಂಗಾ ಮಾರಾಟವಾದರೆ ಒಮ್ಮಮ್ಮೆ ವ್ಯಾಪಾರ ಕಡಿಮೆಯಿರುತ್ತದೆ. ಆದರೂ, ಇದಕ್ಕೆ ಬೇಡಿಕೆಯಂತು ಜಾಸ್ತಿ ಇದೆ' ಎನ್ನುತ್ತಾರೆ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದ ಮುಂಭಾಗದಲ್ಲಿ ಶೇಂಗಾ ಮಾರಾಟ ನಡೆಸುವ ತಾರಫೈಲ್ ನಿವಾಸಿ ಲಕ್ಮೀ ಬಾಯಿ.
`ಗುಲ್ಬರ್ಗದಲ್ಲಿ ಶೇಂಗಾ ಕಡಿಮೆ ಬೆಳೆಯುತ್ತಾರೆ. ಆದ್ದರಿಂದ ಸೊಲ್ಲಾಪುರ, ಬೆಳಗಾವಿ ಕಡೆಯಿಂದ ಇಲ್ಲಿಗೆ ಹಸಿ ಶೇಂಗಾ ಬರುತ್ತದೆ. ಮಳೆಗಾಲ ಆರಂಭದ ಎರಡು ತಿಂಗಳ ಕಾಲ ಇಲ್ಲಿ ಇದರ ಮಾರಾಟ ಜೋರಾಗಿಯೇ ನಡೆಯುತ್ತದೆ' ಎನ್ನುತ್ತಾರೆ ಮಲ್ಲಮ್ಮ.
`ಹಸಿಯಾಗಿಯೂ ತಿನ್ನಬಹುದು, ಆದರೆ ಸುಟ್ಟ ಶೇಂಗಾ ಹೆಚ್ಚು ರುಚಿಕರವಾಗಿರುತ್ತದೆ.
ಮಕ್ಕಳೂ ಇದನ್ನು ತುಂಬಾ ಇಷ್ಟು ಪಡುತ್ತಾರೆ. ಇತರ ಮಸಾಲೆ ಪದಾರ್ಥ ತಿನ್ನುವುದಕ್ಕಿಂತ ಮಕ್ಕಳ ಆರೋಗ್ಯದ ದೃಷ್ಟಿಯಿಂದಲೂ ಇದು ಉತ್ತಮ' ಎಂಬುದು ಗ್ರಾಹಕ ಶರಣಪ್ಪ ಅವರ ಅಭಿಪ್ರಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.