ADVERTISEMENT

‘ಜಾಲಹಳ್ಳಿ’ ನಿಂಬೆಹಣ್ಣಿನ ಜಾದು ಕಂಡಿರಾ?

ಅಲಿಬಾಬಾ ಪಟೇಲ್
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಜಾಲಹಳ್ಳಿ: 10 ವರ್ಷಗಳ ಹಿಂದೆ ನಿಂಬೆ­ಹಣ್ಣಿನ ಬೆಳೆಗೆ ರಾಜ್ಯದಲ್ಲಿಯೇ ಹೆಸರು­ವಾಸಿ­ಯಾಗಿದ್ದ  ದೇವದುರ್ಗ ತಾಲ್ಲೂ­ಕಿನ ಜಾಲಹಳ್ಳಿ ಗ್ರಾಮದ ಸುತ್ತಮುತ್ತ ಈಗ ಎಲ್ಲಿ ನೋಡಿದರೂ ಭತ್ತದ ಗದ್ದೆ­ಗಳೇ ಕಾಣಿಸುತ್ತಿವೆ. ಪ್ರಮುಖ ತೋಟ­ಗಾರಿಕೆ ಪ್ರದೇಶವಾಗಿದ್ದ ಈ ಭಾಗದಲ್ಲಿ ತೆಂಗು, ನಿಂಬೆಹಣ್ಣು ಹಾಗೂ ವಿವಿಧ ರೀತಿಯ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯಲಾಗುತ್ತಿತ್ತು. ಆದರೆ ನಾರಾ­ಯಣ­ಪುರ ಬಲದಂಡೆ ಕಾಲುವೆ ನೀರು ಬಂದಿದ್ದರಿಂದ ಭೂಮಿಯಲ್ಲಿ ತೇವಾಂಶ ಹೆಚ್ಚಾಗಿ ತೋಟಗಾರಿಕೆ ಬೆಳೆಗಳು ಬೆಳೆಯಲಾರದಂತಹ ಸ್ಥಿತಿ ನಿರ್ಮಾಣ­ವಾಗಿ ಭತ್ತದ ಕಡೆ ಹೆಚ್ಚಿನ ಆಸಕ್ತಿ ತೋರಿಸುವಂತಾಯಿತು.

ಆದರೆ ಅದಕ್ಕೆ ಅಪವಾದ ಎನ್ನುವಂತೆ ಜಾಲಹಳ್ಳಿಯ ರಂಗನಾಥ ಭೋವಿ ತಮ್ಮ ಜಮೀನಿನಲ್ಲಿ ನಿಂಬೆಹಣ್ಣು ಬೆಳೆಯುವ ಮೂಲಕ ಮತ್ತೆ ರಾಜ್ಯದಲ್ಲಿ ಜಾಲಹಳ್ಳಿಯ ನಿಂಬೆಹಣ್ಣು ಹೆಸರು ಮಾಡುವಂತೆ ಮಾಡಿದ್ದಾರೆ. ಗುತ್ತಿಗೆದಾರರೂ ಆಗಿರುವ ರಂಗನಾಥ ಭೋವಿ 6 ಎಕರೆ ಕೃಷಿ ಭೂಮಿಯಲ್ಲಿ 2 ಎಕರೆ ಭತ್ತ ಹಾಗೂ 4 ಎಕರೆ ಭೂಮಿಯಲ್ಲಿ 400 ನಿಂಬೆಹಣ್ಣಿನ ಗಿಡಗಳನ್ನು ಬೆಳೆದು ಪ್ರತಿ ವರ್ಷಕ್ಕೆ ₨ 2 ಲಕ್ಷಕ್ಕೂ ಅಧಿಕ ಲಾಭ ಪಡೆಯು­ತ್ತಿದ್ದಾರೆ.

ಐದು ವರ್ಷಗಳ ಹಿಂದೆ ಪ್ರತಿ ನಿಂಬೆಸಸಿಯನ್ನು ₨ 25 ನಂತೆ ಖರೀದಿಸಿ, ₨50 ಸಾವಿರ ಖರ್ಚು ಮಾಡಿ ಸಸಿಗಳನ್ನು ನಾಟಿ ಮಾಡಿದ್ದಾರೆ. ಕೇವಲ 2 ವರ್ಷಗಳ ಬೆಳವಣಿಗೆಯ ನಂತರ ಪ್ರತಿ ವರ್ಷ ₨2 ಲಕ್ಷ ಲಾಭ ಪಡೆಯುತ್ತಿದ್ದಾರೆ. ಅಲ್ಲದೇ ಮಿಶ್ರಬೆಳೆಯಾಗಿ ಮಹಾರಾಷ್ಟ್ರದ ಸೊಲ್ಲಾಪುರ ನಗರದಿಂದ ತೈವಾನ್ ತಳಿಯ 3 ಸಾವಿರ ಪಪ್ಪಾಯಿ ಸಸಿಗಳನ್ನು ತಂದು ಬೆಳೆಸಲಾಗಿದೆ.

ಆ ಬೆಳೆಗೆ ಸುಮಾರು ₨ 80 ಸಾವಿರ ಖರ್ಚು ಮಾಡಿದ್ದಾರೆ. ಕೇವಲ 9 ತಿಂಗಳಲ್ಲಿ ಫಲ ನೀಡಲು ಪ್ರಾರಂಭವಾಗಿ ಅದರಿಂದ ಸುಮಾರು ₨3 ಲಕ್ಷಕ್ಕೂ ಅಧಿಕ ಲಾಭವಾಗಿದೆ. ಅದು ಕೇವಲ 2 ವರ್ಷದ ಬೆಳೆಯಾಗಿದೆ. 1 ಕೆ.ಜಿ ಪಪ್ಪಾಯಿ ₨4 ರಿಂದ 15ರ ವರೆಗೆ ಮಾರಾಟವಾಗಿದೆ. ಮುಖ್ಯವಾಗಿ ದೆಹಲಿ, ಮುಂಬೈ, ಹೈದರಾಬಾದ್ ನಗರದಿಂದ ವರ್ತಕರು ಬಂದು ಪಪ್ಪಾಯಿ ಖರೀದಿ ಮಾಡುತ್ತಾರೆ. ಇದರಿಂದಾಗಿ ಪ್ರತಿವರ್ಷ ಸುಮಾರು ₨ 1.5 ಲಕ್ಷಕ್ಕೂ ಹೆಚ್ಚು ಲಾಭವಾಗುತ್ತಿದೆ.

‘ವಿಶೇಷವಾಗಿ ರಂಜಾನ್ ಹಬ್ಬದ ಸಮಯದಲ್ಲಿ ಪಪ್ಪಾಯಿಗೆ ತುಂಬಾ ಬೇಡಿಕೆ ಇರುತ್ತದೆ. ಆ ಸಮಯದಲ್ಲಿ ಮಾರಾಟ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು’ ಎನ್ನುತ್ತಾರೆ ರಂಗನಾಥ ಭೋವಿ. ಬೆಳೆಗಳಿಗೆ ಕೇವಲ ಸಾವಯವ ಗೊಬ್ಬರವನ್ನು ಹಾಕುತ್ತಾರೆ. ವರ್ಷಕ್ಕೆ ಸುಮಾರು ₨ 40 ಸಾವಿರ ಖರ್ಚು ಮಾಡಿದರೆ ಸಾವಯವ ಗೊಬ್ಬರ ಉತ್ಪಾದನೆ ಮಾಡಬಹುದು. ಅದರಿಂದ ಬೆಳೆಗಳು ಕೂಡ ಉತ್ತಮ ಫಸಲು ಕೊಡುತ್ತವೆ ಎನ್ನುವುದು ಅನುಭವದ ಮಾತು. ಅವರ ತೋಟದಲ್ಲಿ 100 ತೆಂಗಿನಗಿಡ ಹಾಗೂ 50 ಸಪೋಟ ಹಣ್ಣಿನ ಗಿಡಗಳು ಬೆಳೆಯುತ್ತಿವೆ.

‘ಐದು ವರ್ಷಗಳ ನಿರಂತರ ಶ್ರಮದಿಂದ ಈ ರೀತಿಯ ತೋಟವನ್ನು ನೋಡುವಂತಾಗಿದೆ. ತೋಟಗಾರಿಕೆ ಇಲಾಖೆಯ ತಾಲ್ಲೂಕು ಅಧಿಕಾರಿ ಸುರೇಶಕುಮಾರ ಅವರ ನಿರಂತರ ಸಲಹೆ ಹಾಗೂ ಇಲಾಖೆಯ ₨ 25 ಸಾವಿರ ಸಹಾಯಧನದಿಂದ ಈ ಮಟ್ಟಿಗೆ ತೋಟವನ್ನು ಬೆಳೆಸಲು ಸಾಧ್ಯವಾಗಿದೆ’ ಎಂದು ಭೋವಿ ತಿಳಿಸಿದರು.

ಅವರಿಗೆ ಒಟ್ಟು 6 ಎಕರೆ ಕೃಷಿಭೂಮಿ ಇದ್ದು, 2 ಎಕರೆ ಭೂಮಿಯಲ್ಲಿ ಭತ್ತ ಬೆಳೆಯಲಾಗಿದೆ. 3 ಜನ ಸಹೋದರ­ರಲ್ಲಿ ಒಬ್ಬರು ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಇನ್ನೊಬ್ಬ ಸಹೋದರ ರಾಮಣ್ಣ ಭೋವಿ ಹಾಗೂ ಅವರ ಪತ್ನಿ ಲಕ್ಷ್ಮಿ ಮತ್ತು ತಮ್ಮ  ಪತ್ನಿ ಬಸಮ್ಮ ನವರ ಸಹಕಾರದಿಂದ ಕೃಷಿಯಲ್ಲಿ ಇಷ್ಟು ಸಾಧನೆ ಮಾಡಲು ಸಾಧ್ಯವಾಗಿದೆ. ಮೂಲತಃ ಗುತ್ತಿಗೆದಾರರಾದರೂ ತೋಟದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಕೆಲಸ ಮಾಡುತ್ತಾರೆ.ಕೃಷಿಯ ಜೊತೆಗೆ ಪಶುಸಂಗೋಪನೆ ಕೂಡ ಮಾಡಲಾಗಿದ್ದು ಹಸು, ಎತ್ತು, ಎಮ್ಮೆ ಹಾಗೂ ಕುರಿ, ಕೋಳಿಗಳನ್ನು ಸಹ ಸಾಕುತ್ತಿದ್ದಾರೆ. (ಮೊ: 9901320026)
–ಅಲಿಬಾಬಾ ಪಟೇಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT