ADVERTISEMENT

ದೇಗಲಮಡಿಯ `ವಿದ್ಯುತ್' ಮನುಷ್ಯ!

ಜಗನ್ನಾಥ ಡಿ ಶೇರಿಕಾರ, ಚಿಂಚೋಳಿ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ವಿದ್ಯುತ್ ಎಂದರೆ ಭಯ ಪಡುವವರ ಸಂಖ್ಯೆಯೇ ಹೆಚ್ಚು. ಇದಕ್ಕೆ ಮುಖ್ಯ ಕಾರಣ ವಿದ್ಯುತ್‌ನ ಶಾಕ್. ಇಂತಹ ಶಾಕ್‌ನಿಂದ ಅಸಂಖ್ಯ ಜೀವಗಳು ಪ್ರಾಣ ತೆತ್ತಿರುವುದು ನಮಗೆ ಗೊತ್ತಿರುವ ಸಂಗತಿ.

ವಿದ್ಯುತ್ ಪೂರೈಕೆ ಸ್ಥಗಿತಗೊಂಡ ತಂತಿ ಕೈಗೆ ಹಿಡಿಯಲು ಅನೇಕರು ಹಿಂಜರಿಯುತ್ತಾರೆ. ಶಾಕ್‌ಗೆ ಹೆದರಿ ಸುಟ್ಟು ಹೋದ ವಿದ್ಯುತ್ ದೀಪ ಬದಲಿಸಲು ಅದೆಷ್ಟೋ ಕಸರತ್ತು ಮಾಡುವವರು ಇದ್ದಾರೆ.

ಕಾಲಲ್ಲಿ ಪ್ಲಾಸ್ಟಿಕ್ ಚಪ್ಪಲ್, ಕೈಗೆ ಕರಚೀಫ್ ಹಿಡಿದು ಸುಟ್ಟ ಬಲ್ಬ್ ಬದಲಿಸುವವರಿಗೆ ಇಲ್ಲೊಂದು ಅಚ್ಚರಿಯಿದೆ. ಮನೆಯಲ್ಲಿ ಏಕಾ ಏಕಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡರೆ ನಾವು ತಕ್ಷಣ ಎಲೆಕ್ಟ್ರಿಷಿಯನ್ ಅಥವಾ ಜೆಸ್ಕಾಂನ ಲೈನ್‌ಮನ್ ಸಹಾಯ ಪಡೆಯುತ್ತೇವೆ. ಅವರು ಕಟಿಂಗ್ ಪ್ಲೇಯರ್, ಟೆಸ್ಟರ್, ಸ್ಕ್ರೂಟ್ರೈವರ್ ಹಿಡಿದು ದುರಸ್ತಿ ಮಾಡುವುದು ಕಾಣುತ್ತೇವೆ.

ಆದರೆ ಇಲ್ಲೊಬ್ಬ ವಿಶೇಷ ವ್ಯಕ್ತಿಯಿದ್ದಾನೆ. ಈತನ ಚಮತ್ಕಾರ ನೋಡಿದರೆ ನಿಮ್ಮ  ಎದೆಗುಂಡಿಗೆ ನಡುಗುತ್ತದೆ. ಈ ವ್ಯಕ್ತಿಗೆ ವಿದ್ಯುತ್ ಎಂದರೆ ಮಾಣಿಕ್ಯದಷ್ಟೇ ಪ್ರೀತಿ. ಮನೆಯ ವಿದ್ಯುತ್ ಸಮಸ್ಯೆ ಇರಲಿ, ತೋಟಕ್ಕೆ ನೀರು ಪೂರೈಸುವ ಮೋಟಾರ್ ಆಗಲಿ ಅಥವಾ ಸ್ಟಾರ್ಟರ್ ಕೆಲಸ ಮಾಡದಿದ್ದರೇ, ಸಮರ್ಪಕವಾಗಿ ವಿದ್ಯುತ್ ಪ್ರವಹಿಸದೇ ಎಲ್ಲಿಯಾದರೂ ಅಡಚಣೆ ಇದ್ದರೆ ಅಥವಾ ಟ್ರಾನ್ಸಫಾರ‌್ಮರ್‌ನ ಫ್ಯೂಸ್ ಸುಟ್ಟಿದ್ದರೆ ಬರಿ ಗೈಯಲ್ಲಿ ತೆರಳುವ ಇವರು, ಹರಿಯುವ ವಿದ್ಯುತ್‌ಗೆ ಕೈ ಹಾಕಿ ದುರಸ್ತಿ ಮಾಡಿಕೊಡುವುದು ನೋಡುವಾಗ ಎಂತಹವರ ಮೈ ಜುಮ್ಮ ಎನ್ನುತ್ತದೆ.

ಇವನಿಗೆ ಸ್ಕ್ರೂ ಡ್ರೈವರ್, ಟೆಸ್ಟರ್,, ಕಟಿಂಗ್ ಪ್ಲೇಯರ್ ಎಂದರೆ ತನ್ನ ಕೈಗಳೆ. ಅಂತೆಯೇ ವಿದ್ಯುತ್‌ನ ಯಾವುದೇ ಕೆಲಸ ಮಾಡಬೇಕಾದರೂ ನೇರವಾಗಿ ಕೈಗಳನ್ನೂ ಬಳಸಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಾರೆ.
ಹೈಲೋಡ್‌ನ ವಿದ್ಯುತ್ ತಂತಿ ಕೈಗೆ ಹಿಡಿಯುತ್ತಾರೆ. ದೀಪ ತೆಗೆದು ಹೋಲ್ಡರ್‌ಗೆ ಕೈ ಹಾಕಿ ಅಲ್ಲಿ ಸೇರಿದವರಿಗೆ ಅಚ್ಚರಿ ಮೂಡಿಸುತ್ತಾರೆ. ಟೆಸ್ಟರ್ ದೇಹದ ವಿವಿಧ ಭಾಗಗಳಿಗೆ ಹಚ್ಚಿದರೆ ಎಲ್ಲೆಲ್ಲೂ ಟೆಸ್ಟರ್ ಒಳಗಿನ ಪುಟ್ಟ ದೀಪ ಉರಿಯುವ ಮೂಲಕ ವಿದ್ಯುತ್ ಹರಿಯುತ್ತಿರುವುದು ಸಾಬೀತು ಪಡಿಸುತ್ತದೆ.

ಆದರೂ ಇವರಿಗೆ ಶಾಕ್ ಉಂಟಾಗುವುದಿಲ್ಲ. ವಿದ್ಯುತ್ ಹರಿಯುವ ತಂತಿ ನಾಲಿಗೆಗೆ ಒರೆಸಿಕೊಳ್ಳುತ್ತಾರೆ. ಹಸಿಯಾದ ನೆಲದ ಮೇಲೆ ನಿಂತು ವಿದ್ಯುತ್‌ಗೆ ಕೈಹಾಕಿ ಅಚ್ಚರಿ ಮೂಡಿಸುತ್ತಾರೆ.

ಗುಲ್ಬರ್ಗ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ದೇಗಲಮಡಿ ಗ್ರಾಮದ ಮಾಣಿಕ್ ಹೊನ್ನಪ್ಪ ಬಾದಲಾಪೂರ ಒಂದು ರೀತಿಯಲ್ಲಿ ಎಲೆಕ್ಟ್ರಿಕ್ ಶಾಕ್ ಪ್ರೂಫ್ ಮ್ಯಾನ್.! 55ರ ಇಳಿ ವಯಸ್ಸಿನಲ್ಲೂ ಇವರಿಗೆ ಉಪ ಜೀವನಕ್ಕೆ ವಿದ್ಯುತ್ ಕೆಲಸವೇ ಆಧಾರವಾಗಿದೆ. 

ವಿದ್ಯುತ್ ತಂತಿ ಕೈಗೆ ಹಿಡಿದರೂ ಶಾಕ್ ಉಂಟಾಗದಂತೆ ನಾವು ಕಂಡಿದ್ದು ಕೇವಲ ಇಬ್ಬರನ್ನೂ ಮಾತ್ರ. ಒಬ್ಬರು ಮಾಣಿಕ. ಇನ್ನೊಬ್ಬರು ಮಾಣಿಕನ ಮಗ. ಜನರು ಕೊಟ್ಟಷ್ಟು ಹಣ ಪಡೆದು ಅವರು ಹೇಳಿದ ಕೆಲಸ ಮಾಡಿ ಕೊಡುತ್ತಾನೆ. ಇವನು ನಮ್ಮ ಊರಿನ ಪಾಲಿಗೆ ಅಪಾದ್ಬಾಂಧವ ಎನ್ನುತ್ತಾರೆ ಗ್ರಾಮದ ಯುವ ಮುಖಂಡ ಮಲ್ಲಿಕಾರ್ಜುನ ಪರೀಟ್.

ನಾನು ಕೇವಲ 4ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದೇನೆ. ಕಳೆದ 20 ವರ್ಷಗಳಿಂದ ನಾನು ವಿದ್ಯುತ್ ಸಂಬಂಧಿತ ಕೆಲಸಗಳನ್ನು ದೇಗಲಮಡಿ, ನೀಮಾ ಹೊಸಳ್ಳಿ, ಪಟಪಳ್ಳಿ, ಯಂಪಳ್ಳಿ ಮುಂತಾದ ಕಡೆಗಳಲ್ಲಿ ಮಾಡುತ್ತಿದ್ದೇನೆ.

ನಾನು ಎಲ್ಲೂ ಇದರ ಕೆಲಸ ಕಲಿತಿಲ್ಲ. ಮಾಡುತ್ತ ಕಲಿತಿದ್ದೇನೆ. ವಿದ್ಯುತ್ ಶಾಕ್ ಎಂದರೆ ಹೇಗಿರುತ್ತೆ ಎಂಬುದೇ ನನಗೆ ಗೊತ್ತಿಲ್ಲ ಎನ್ನುತ್ತಲೇ ವಿದ್ಯುತ್ ಪರಿವರ್ತಕಕ್ಕೆ ತೆರಳಿ ನಮ್ಮ ಎದುರುಗಡೆಯೇ ಬರಿ ಗೈಯಲ್ಲಿ `ಫ್ಯೂಸ್' ತೆಗೆದು ಹಾಕಿದರು. ಆಗ ಸಾಕಷ್ಟು (ಸ್ಪಾರ್ಕಿಂಗ್) ಕಿಡಿ ಕಾರಿತು. ಇದಕ್ಕೆ ಎಳ್ಳಷ್ಟು ಹೆದರದ ಮಾಣಿಕ ಇನ್ನೇನು ಮಾಡಬೇಕು ಹೇಳಿ ಎಂದು ನಮ್ಮನ್ನೇ ಪ್ರಶ್ನಿಸಿ ಬೆರಗುಗೊಳಿಸಿದರು.

ದಿನದ 24 ಗಂಟೆಯೂ ವಿದ್ಯುತ್ ಸಂಬಂಧಿತ ಕೆಲಸಕ್ಕೆ ಇವರು ರೆಡಿ. ವಿದ್ಯುತ್ ಹರಿಯುತ್ತಿರಲಿ ಇಲ್ಲವೇ ಲೋಡ್ ಶೆಡ್ಡಿಂಗ್ ಇರಲಿ ಇವರ ಪಾಲಿಗೆ ಎರಡು ಅಷ್ಟೇ. ಹೆಚ್ಚಿನ ಮಾಹಿತಿಗೆ (ಮಾಣಿಕ -                                 9663257542) ಸಂಪರ್ಕಿಸಬಹುದಾಗಿದೆ.
-

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.