ADVERTISEMENT

ಸೌಕರ್ಯ ನೆನೆದು ಕಣ್ಣೀರಿಟ್ಟ ಕ್ರೀಡಾಪಟುಗಳು

ಸಿದ್ದೇಶ
Published 19 ಡಿಸೆಂಬರ್ 2016, 6:21 IST
Last Updated 19 ಡಿಸೆಂಬರ್ 2016, 6:21 IST

ಕಲಬುರ್ಗಿ: ‘ಏಳನೇ ತರಗತಿಯಿಂದಲೂ 800 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿದ್ದೇನೆ. ಆದರೆ, ಒಂದು ಜೊತೆ ಕ್ರೀಡಾ ಶೂ ಖರೀದಿಸಿಲು ನನಗೆ ಇನ್ನೂ ಆಗಿಲ್ಲ. ಇದರಿಂದ ಉನ್ನತ ಸಾಧನೆ ಮಾಡಬೇಕೆಂಬ ನನ್ನ ಆಸೆ ಕೈಗೂಡುತ್ತಿಲ್ಲ’ ಎಂದು ಕಣ್ಣೀರಾದರು ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮೆಣಸಗಿ ಗ್ರಾಮದ ರಶ್ಮಿ ಅಂಗಡಿ.

ಇದೇ ಅಸಹಾಯಕತೆ ವ್ಯಕ್ತಪಡಿಸಿ ಕಣ್ಣೀರಿಟ್ಟರು ಹಾವೇರಿ ಜಿಲ್ಲೆಯ ಹಿರೇಕೆರೂರ ತಾಲ್ಲೂಕಿನ ಚಿಕ್ಕೆರೆಯ ತನುಜಾ ಎಂ.
ಇಲ್ಲಿನ ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪದವಿಪೂರ್ವ ಕಾಲೇಜು ಬಾಲಕ–ಬಾಲಕಿಯರ ರಾಜ್ಯಮಟ್ಟದ ಅಥ್ಲೆಟಿಕ್ಸ್‌ ಕೂಟದಲ್ಲಿ ಪಾಲ್ಗೊಂಡಿರುವ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳ ಹಲವು ವಿದ್ಯಾರ್ಥಿಗಳ ಬಳಿ ಕ್ರೀಡಾ ಶೂ ಹಾಗೂ ಉಡುಪು ಇಲ್ಲ.

‘ಸರ್ವ ರೀತಿಯಲ್ಲೂ ಸಶಕ್ತರಾದ ಕರಾವಳಿ ಹಾಗೂ ಹಳೆಯ ಮೈಸೂರು ವಿಭಾಗದ ಕ್ರೀಡಾಪಟುಗಳಿಗೆ ಯಾವುದೇ ಸೌಕರ್ಯವಿಲ್ಲದ ನಾವು ಸ್ಪರ್ಧೆವೊಡ್ಡುವುದು ಹೇಗೆ?’ ಎನ್ನುತ್ತಲೇ ‘ನಮ್ಮ ಆಸೆ ಕೈಗೂಡುವುದಿಲ್ಲ ಬಿಡಿ’ ಎಂದು ಬೆನ್ನು ತಿರುಗಿಸಿದರು ಆಗಷ್ಟೆ 800 ಮೀ. ಸ್ಪರ್ಧೆಯಲ್ಲಿ ಕೊನೆಯವರಾಗಿ ಸ್ಪರ್ಧೆ ಮುಗಿಸಿ ದಣಿದಿದ್ದ ಈ ಕ್ರೀಡಾಪಟುಗಳು.

ಗದಗ ಜಿಲ್ಲೆಯ ಎಸ್‌ಎಲ್‌ವಿ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ರಶ್ಮಿ ಹಾಗೂ ಹಾವೇರಿ ಜಿಲ್ಲೆಯ ಪಿವಿಎಸ್‌ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ಕಲಿಯುತ್ತಿರುವ ತನುಜಾ, ದಿನಕ್ಕೆ ಮೂರು ತಾಸಿಗೂ ಹೆಚ್ಚಿನ ಸಮಯವನ್ನು ತಾಲೀಮಿಗೆ ಮೀಸಲಿಟ್ಟಿದ್ದಾರೆ. ಬೆಳಿಗ್ಗೆ ಐದು ಗಂಟೆಗೇ ಎದ್ದು ಬರಿಗಾಲಿನಲ್ಲೇ ಓಡುವ ಮೂಲಕ ಅಭ್ಯಾಸ ಮಾಡುತ್ತಾರೆ.

‘ನಮಗೆ ಕ್ರೀಡಾ ಗುರುವೂ ಇಲ್ಲ, ಸೌಕರ್ಯವೂ ಇಲ್ಲ. ಬಾಲ್ಯದಲ್ಲಿ ಓಟದ ಬಗ್ಗೆ ಮೂಡಿದ ಒಲವು ಇಲ್ಲಿಯ ತನಕ ಮುನ್ನಡೆಸಿದೆ. ಮೈಸೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕ್ರೀಡಾಪಟುಗಳನ್ನು ನೋಡಿದರೆ ಸಂತೋಷದ ಜೊತೆಗೆ ಅಸೂಯೆಯಾಗುತ್ತದೆ. ಯಾರಾದರೂ ನಮ್ಮನ್ನು ಗುರುತಿಸಿ, ಕನಿಷ್ಠ ಸೌಲಭ್ಯ ಕಲ್ಪಿಸಿದರೆ ಖಂಡಿತವಾಗಿಯೂ ಅವರ ನಿರೀಕ್ಷೆ ಮೀರಿ ಸಾಧಿಸಿ ತೋರಿಸುತ್ತೇವೆ’ ಎಂದು ವಿಶ್ವಾಸದಿಂದ ನುಡಿಯುತ್ತಾರೆ ತನುಜಾ ಹಾಗೂ ರಶ್ಮಿ.

‘ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಾಗಲೆ ಕ್ರೀಡಾ ಶುಲ್ಕವಾಗಿ ಇಂತಿಷ್ಟು ಹಣ ಪಡೆಯಲಾಗುತ್ತದೆ. ಇದು ಕ್ರೀಡಾ ನಿಧಿಗೆ ಸೇರುತ್ತದೆ. ಈ ಹಣದಲ್ಲಿ ಶೇ 35ರಷ್ಟನ್ನು ವಿದ್ಯಾರ್ಥಿಗಳ ಉಡುಪು, ಶೂ ಖರೀದಿಸಲು ಬಳಸಬೇಕು. ಉಳಿದ ಶೇ 65ರಷ್ಟು ಹಣವನ್ನು ಕ್ರೀಡಾ ಸಾಮಗ್ರಿ ಖರೀದಿಗೆ ಬಳಸಬೇಕು ಎಂದಿದೆ. ಆದರೆ, ಬಹುತೇಕ ಖಾಸಗಿ ಕಾಲೇಜುಗಳನ್ನು ಇದನ್ನು ಮಕ್ಕಳ ಹಿತಕ್ಕೆ ಬಳಸುವುದಿಲ್ಲ’ ಎನ್ನುತ್ತಾರೆ ಹಾವೇರಿ ಜಿಲ್ಲೆಯ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘದ ಅಧ್ಯಕ್ಷ ಸಿ.ಜಿ. ಚಕ್ರಸಾಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.