ADVERTISEMENT

ಹಳೆಯ ಪಾತ್ರೆಗಳಿಂದ ಅರಳುವ ದೇವರು!

ಕಂಚು, ತಾಮ್ರ, ಹಿತ್ತಾಳೆ, ಅಲ್ಯೂಮಿನಿಯಂನಿಂದ ವಿಗ್ರಹ ತಯಾರಿಕೆ

ಕೆ.ಎನ್.ನಾಗಸುಂದ್ರಪ್ಪ
Published 2 ಜುಲೈ 2018, 12:52 IST
Last Updated 2 ಜುಲೈ 2018, 12:52 IST

ಕಲಬುರ್ಗಿ: ಇಲ್ಲಿನ ರಸ್ತೆ ಬದಿಯಲ್ಲಿ ಹಳೆಯ ಪಾತ್ರೆ, ಮತ್ತಿತರ ಮನೆಬಳಕೆ ವಸ್ತುಗಳಿಂದಲೇ ವಿವಿಧ ದೇವರ ವಿಗ್ರಹಗಳು ಕೆಲವೇ ನಿಮಿಷಗಳಲ್ಲಿ ಅರಳುತ್ತವೆ. ದೇವರ ವಿಗ್ರಹ ರೂಪುಗೊಳ್ಳುವ ಬಗೆಯನ್ನು ನೋಡಲು ಮತ್ತು ವಿಗ್ರಹಗಳನ್ನು ಮಾಡಿಸಲು ಸುತ್ತಲೂ ಜನ ನೆರೆದಿರುತ್ತಾರೆ.

ತಾಮ್ರ, ಹಿತ್ತಾಳೆ, ಕಂಚು, ಅಲ್ಯೂಮಿನಿಯಂನ ಹಳೆ ಪಾತ್ರೆಗಳನ್ನು ಪಡೆದು ದೇವರ ವಿಗ್ರಹ ತಯಾರಿಸುವ ಕೆಲಸವನ್ನು ಇಸ್ಮಾಯಿಲ್‌ ಶೇಖ್‌ ಕುಟುಂಬ ನಿರ್ವಹಿಸುತ್ತಿದೆ. 15ರಿಂದ 20 ನಿಮಿಷದಲ್ಲಿ ನಿಮಗೆ ಇಷ್ಟವಾದ ದೇವರ ವಿಗ್ರಹವನ್ನು, ನಿಮಗೆ ಬೇಕಾದ ಅಳತೆಯಲ್ಲಿ ಇಸ್ಮಾಯಿಲ್‌ ತಯಾರಿಸಿಕೊಡುತ್ತಾರೆ.

ಲಕ್ಷ್ಮೀ, ಸರಸ್ವತಿ, ಗಣೇಶ, ಈಶ್ವರ, ಪಾರ್ವತಿ, ಕೃಷ್ಣ, ನಾರಾಯಣ, ತಿಮ್ಮಪ್ಪ, ಯಲ್ಲಮ್ಮ, ರೇವಣ ಸಿದ್ದೇಶ್ವರ, ಹನುಮಂತ, ಆನೆ ಮುಖ, ಸಾಯಿಬಾಬಾ, ಅಂಬಾಭವಾನಿ, ನವಿಲು ಸೇರಿದಂತೆ 30ಕ್ಕೂ ಹೆಚ್ಚು ಹಿಂದೂ ದೇವರ ವಿಗ್ರಹಗಳ ಅಚ್ಚುಗಳು ಅವರ ಬಳಿ ಇವೆ. ಈ ಅಚ್ಚುಗಳನ್ನು ಬಳಸಿ ವಿಗ್ರಹಗಳನ್ನು ಅವರು ಸಿದ್ಧಪಡಿಸುತ್ತಾರೆ.

ಹಳೆಯ ಪಾತ್ರೆ ಅಥವಾ ಉಪಯೋಗಿಸಲು ಬಾರದ ಹಳೆಯ ವಸ್ತುಗಳನ್ನು ನೀಡದರೆ ಅದನ್ನು ಕರಗಿಸಿ ಅಚ್ಚುಗಳಿಗೆ ನಮ್ಮ ಮುಂದೆಯೇ ಹಾಕಿ ವಿಗ್ರಹ ತಯಾರಿಸಿ ಕೊಡುತ್ತಾರೆ. ಒಂದು ವಿಗ್ರಹ ತಯಾರಿಸಲು ₹100ರಿಂದ ₹700ರವರೆಗೆ ತಯಾರಿಕಾ ವೆಚ್ಚ ನೀಡಬೇಕು. ಬೀದಿ ಬದಿಯಲ್ಲಿ ನಡೆಯುವ ವ್ಯವಹಾರವಾದ್ದರಿಂದ ಚೌಕಾಸಿ ಮಾಡಿ ಜನರು ಹಣ ಕೊಡುತ್ತಾರೆ.

ಹಳೆಯ ಪಾತ್ರೆಗಳನ್ನು ಇದ್ದಿಲಿನ ಬೆಂಕಿಗೆ ಹಾಕಿ ಕರಗಿಸುತ್ತಾರೆ. ಅವರ ಪತ್ನಿ ಈ ಕೆಲಸಕ್ಕೆ ಸಾಥ್‌ ನೀಡುತ್ತಾರೆ. ಆನಂತರ ದೇವರ ಸಿದ್ಧ ಅಚ್ಚುಗಳನ್ನು ಉಪಯೋಗಿಸಿ ಮಣ್ಣಿನ ಬಾಕ್ಸ್‌ನಲ್ಲಿ ವಿಗ್ರಹ ತಯಾರಿಕೆಗೆ ಸಿದ್ಧತೆ ನಡೆಸುತ್ತಾರೆ. ಕರಗಿದ ಪಾತ್ರೆಯ ಲೋಹ ಅಲ್ಲಿಗೆ ಹಾಕಿ, ಹೊರತೆಗೆದರೆ ವಿಗ್ರಹ ಸಿದ್ಧವಾಗಿರುತ್ತದೆ! ಅದನ್ನು ತೊಳೆದು ಜನರಿಗೆ ನೀಡಲಾಗುತ್ತದೆ. ನಿಂಬೆ ಹಣ್ಣಿನ ರಸದಿಂದ ತೀಡಿ ತೊಳೆದರೆ ಹೊಳೆಯುವಂತಾಗುತ್ತದೆ.

ಇಲ್ಲಿನ ಕೆಲವರು ಹಳೆಯ ಅಲ್ಯೂಮಿನಿಯಂ ಕುಕ್ಕರ್‌, ತೂತುಬಿದ್ದ ಪಾತ್ರೆಗಳನ್ನು ನೀಡಿ ವಿಗ್ರಹ ಮಾಡಿಸಿದರು. ಅಂಗಡಿಯಲ್ಲಿಯೇ ಕೊಳ್ಳಬಹುದಲ್ಲವೇ ಎಂದು ಕೇಳಿದರೆ, ಅಂಗಡಿಯಲ್ಲಿ ಸಿಗುವುದು ಇಷ್ಟು ಗಟ್ಟಿಮುಟ್ಟಾಗಿರುವುದಿಲ್ಲ. ಅಲ್ಲದೆ ಅಂಗಡಿಯಲ್ಲಿ ಶುದ್ಧ ಹಿತ್ತಾಳೆ ಅಥವಾ ತಾಮ್ರದ ವಿಗ್ರಹಗಳನ್ನು ಕೊಡುವುದಿಲ್ಲ. ಇಲ್ಲಿ ನಮ್ಮ ಎದುರಿಗೆ ತಯಾರು ಮಾಡುವುದರಿಂದ ಶುದ್ಧ ಲೋಹದ ವಿಗ್ರಹ ಸಿಗುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯಪಟ್ಟರು.

ಹುಮನಾಬಾದ್‌ ತಾಲ್ಲೂಕಿನ  ಕರಮಡಗಿಯ ಇಸ್ಮಾಯಿಲ್‌ ಕುಟುಂಬ ಈ ಕಾಯಕವನ್ನು ವಂಶ ಪಾರಂಪರ್ಯವಾಗಿ ಮುಂದುವರಿಸಿಕೊಂಡು ಬಂದಿದೆ. ‘ನನ್ನ ತಂದೆ, ತಾತ ಇದೇ ಕಸುಬು ಮಾಡುತ್ತಿದ್ದರು. ನಾನು ಚಿಕ್ಕವನಾಗಿದ್ದ ದಿನದಿಂದಲೂ ಇದೇ ಕೆಲಸ ಮಾಡುತ್ತಿದ್ದೇನೆ’ ಎಂದು ಅವರು ಹೇಳಿದರು.

ಇದರಿಂದ ಹೊಟ್ಟೆಬಟ್ಟೆಗೆ ಸಮಸ್ಯೆ ಇಲ್ಲ. ಪ್ರತಿನಿತ್ಯ ₹200ರಿಂದ ₹2 ಸಾವಿರದವರೆಗೂ ಸಂಪಾದನೆಯಾಗುತ್ತದೆ. ಅದರಲ್ಲಿಯೂ ಗಣೇಶನ ಹಬ್ಬದಿಂದ ದೀಪಾವಳಿವರೆಗೆ ಉತ್ತಮ ಸಂಪಾದನೆ ಇರುತ್ತದೆ. ಆನಂತರದಲ್ಲಿ ದಿನದ ಖರ್ಚಿಗೆ ಸಾಕಾಗುವಷ್ಟು ಸಂಪಾದನೆ ಆಗುತ್ತದೆ. ಒಂದು ಕೆ.ಜಿ. ಇದ್ದಿಲಿಗೆ ₹15ರಿಂದ ₹20 ಕೊಟ್ಟು ಖರೀದಿಸುತ್ತೇವೆ ಎಂದರು.

ಕಲಬುರ್ಗಿಗೆ ಬಂದು ಒಂದು ವಾರವಾಯ್ತು. ಒಂದು ತಿಂಗಳು ಇಲ್ಲಿಯೇ ಇರುತ್ತೇವೆ. ಆನಂತರ ಇತರ ಪಟ್ಟಣ ಮತ್ತು ಜಿಲ್ಲಾ ಕೇಂದ್ರಗಳಿಗೆ ಹೋಗುತ್ತೇವೆ. ಕೆಲಸ ಸಿಕ್ಕುವ ಕಡೆಗೆ ಹೋಗುವುದು ಮೊದಲಿನಿಂದಲೂ ಅಭ್ಯಾಸ. ಅಲ್ಲಿನ ರಸ್ತೆ ಬದಿಯಲ್ಲಿ ಟೆಂಟ್‌ ನಿರ್ಮಿಸಿ ಹೆಂಡತಿ, ಮಕ್ಕಳೊಂದಿಗೆ ವಾಸಿಸುವುದಾಗಿ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.