ಕಲಬುರಗಿ: ತಾಲ್ಲೂಕಿನ ಹೇರೂರ (ಬಿ) ಗ್ರಾಮದ ಬೈಲಪ್ಪ ಹುಲೆಪ್ಪ ಗೌಡಗೊಂಡ ಹಾಗೂ ಅವರ ಸಹೋದರರ ಹೊಲದ ಮಧ್ಯದ ಟಿ.ಸಿ.ಯಿಂದ ಬೆಂಕಿಯ ಜ್ವಾಲೆ ಸಿಡಿದು ಸುಮಾರು 12 ಎಕರೆಗೂ ಅಧಿಕ ಕಬ್ಬಿನ ಹೊಲ ಗುರುವಾರ ಸಂಜೆ ಬೆಂಕಿಗೆ ಆಹುತಿಯಾಗಿದೆ.
ಅಂದಾಜು ₹ 18 ಲಕ್ಷ ನಷ್ಟವಾಗಿದೆ ಎಂದು ರೈತರು ತಿಳಿಸಿದ್ದಾರೆ.
ಬೈಲಪ್ಪ ಹುಲೆಪ್ಪ ಗೌಡಗೊಂಡ ಅವರ 6 ಎಕರೆ 7 ಗುಂಟೆ, ನಾಗಪ್ಪ ನಿಂಗಪ್ಪ ಗೌಡಗೊಂಡ ಅವರ 2 ಎಕರೆ 1 ಗುಂಟೆ, ದ್ಯಾವಪ್ಪ ನಿಂಗಪ್ಪ ಗೌಡಗೊಂಡ ಅವರ 4 ಎಕರೆ 1 ಗುಂಟೆ ಜಮೀನಲ್ಲಿರುವ ಕಬ್ಬಿನ ಬೆಳೆ ಸಂಪೂರ್ಣ ಸುಟ್ಟು ಹೋಗಿದೆ. ಸರ್ವೆ ನಂ. 274ರಲ್ಲಿರುವ ಕಬ್ಬು ಒಂದೇ ಕುಟುಂಬದ ಮೂವರು ಸಹೋದರರಿಗೆ ಸೇರಿದೆ.
ಟಿ.ಸಿ.ಯ ಡಿವಾಲ್ ಹಾರಿದ ವೇಳೆ ಸಿಡಿದ ಕಿಡಿ ನೆಲಕ್ಕೆ ಬಿದ್ದು ಕಬ್ಬಿನ ರವದಿಯ ಮೂಲಕ ಇಡೀ ಕಬ್ಬಿಗೆ ಬೆಂಕಿ ವ್ಯಾಪ್ತಿಸಿದೆ ಎಂದು ಬೈಲಪ್ಪ ಗೌಡಗೊಂಡ ತಿಳಿಸಿದ್ದಾರೆ.
ಈ ಕುರಿತು ಫರಹತಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಂಕಿ ಕೆನ್ನಾಲಿಗೆ ಹರಡುತ್ತಿದ್ದಂತೆ ಕಲಬುರಗಿ ಅಗ್ನಿ ಶಾಮಕ ಠಾಣೆಗೆ ಫೋನ್ ಮಾಡಿದಾಗ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದರು. ಆದರೆ, ಅಷ್ಟರಲ್ಲಾಗಲೇ ಸಾಕಷ್ಟು ನಷ್ಟ ಉಂಟಾಗಿತ್ತು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.