ADVERTISEMENT

13 ಸ್ಲಂ ನಿವಾಸಿಗಳಿಗಿಲ್ಲ ಹಕ್ಕುಪತ್ರ ಭಾಗ್ಯ

1975ರಲ್ಲಿ ಘೋಷಿಸಲಾದ ಕೊಳೆಗೇರಿ ನಿವಾಸಿಗಳ ಕನಸಿಗೂ ಭೂಮಿಯ ಮಾಲೀಕತ್ವದ ಸ್ವರೂಪ ಅಡ್ಡಿ

ಭೀಮಣ್ಣ ಬಾಲಯ್ಯ
Published 5 ನವೆಂಬರ್ 2024, 6:37 IST
Last Updated 5 ನವೆಂಬರ್ 2024, 6:37 IST
ಕಲಬುರಗಿ ನಗರದ ಕೊಳೆಗೇರಿ ಪ್ರದೇಶವೊಂದರ ಚಿತ್ರಣ
ಕಲಬುರಗಿ ನಗರದ ಕೊಳೆಗೇರಿ ಪ್ರದೇಶವೊಂದರ ಚಿತ್ರಣ   

ಕಲಬುರಗಿ: ನಗರದ ಘೋಷಿತ ಕೊಳೆಗೇರಿಗಳಲ್ಲಿ ಕೆಲವು ಖಾಸಗಿ ವ್ಯಕ್ತಿಗಳಿಗೆ ಸೇರಿದ ಭೂಮಿಯಲ್ಲಿರುವ ಕಾರಣ ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ಭಾಗ್ಯ ಸಿಕ್ಕಿಲ್ಲ.

ಆದ್ದರಿಂದ ಈ ಕೊಳೆಗೇರಿ ನಿವಾಸಿಗಳಿಗೆ ತುಂಡು ಭೂಮಿಯ ಮಾಲೀಕತ್ವದ ಹಕ್ಕೂ ಇಲ್ಲ. ಇವರ ಸ್ವಂತ ಸೂರಿನ ಕನಸು ನನಸಾಗಿಲ್ಲ.

ನಗರದಲ್ಲಿ ಒಟ್ಟು 54 ಪ್ರದೇಶಗಳನ್ನು ಕೊಳೆಗೇರಿ ಎಂದು ಘೋಷಿಸಲಾಗಿದೆ. ಅವುಗಳಲ್ಲಿ 13 ಖಾಸಗಿ ಒಡೆತನದ ಭೂಮಿಯಲ್ಲಿ ಮೈಚಾಚಿಕೊಂಡಿವೆ. 17,065 ಜನರನ್ನು ಒಡಲಲ್ಲಿಟ್ಟುಕೊಂಡಿವೆ.

ADVERTISEMENT

ಖಾಸಗಿ ವ್ಯಕ್ತಿಗಳಿಗೆ ಸೇರಿದ ಜಾಗದಲ್ಲಿರುವ ತಾರಫೈಲ್ (ಪಶ್ಚಿಮ) ಮತ್ತು ಕುಂಚಿಕೊರವರ ಓಣಿ ಪ್ರದೇಶಗಳನ್ನು 1975ರಲ್ಲಿಯೇ ಕೊಳೆಗೇರಿಗಳು ಎಂದು ಘೋಷಿಸಲಾಗಿದೆ. ಕೆಲ ವರ್ಷಗಳ ಹಿಂದೆ ಘೋಷಿಸಲಾದ ಕೊಳೆಗೇರಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ಭಾಗ್ಯ ಸಿಕ್ಕಿದೆ. ಆದರೆ, ಇಲ್ಲಿನ ನಿವಾಸಿಗಳಿಗೆ ಸಿಕ್ಕಿಲ್ಲ.

ಈ ಪ್ರದೇಶಗಳಲ್ಲಿ ವಾಸಿಸುವವರಲ್ಲಿ ಬಹುತೇಕು ಕಾರ್ಮಿಕರು. ಜೀವನ ನಿರ್ವಹಣೆಗೆ ಕೆಲವರು ದಿನಗೂಲಿಗಳಾಗಿ ದುಡಿದರೆ, ಇನ್ನೂ ಕೆಲವರು ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಾರೆ.

ಹಕ್ಕುಪತ್ರಗಳಿಲ್ಲದ ಕಾರಣ ನಿವಾಸಿಗಳಿಗೆ ಸರ್ಕಾರದ ವಿವಿಧ ವಸತಿ ಯೋಜನೆಗಳಡಿ ಮನೆಗಳೂ ದಕ್ಕುತ್ತಿಲ್ಲ. ಈ ಪ್ರದೇಶಗಳು ಸಮಸ್ಯೆ ಹೊದ್ದು ಮಲಗಿವೆ.

ಗುಂಡಿ ಬಿದ್ದ ರಸ್ತೆಗಳು, ಪಥ ಬದಲಿಸಿದ ಚರಂಡಿ, ಇನ್ನೂ ಅಬಾಧಿತವಾಗಿರುವ ಬಯಲು ಬಹಿರ್ದೆಸೆ, ಎಲ್ಲೆಂದರಲ್ಲಿ ಕಾಣುವ ಕಸ ಈ ಪ್ರದೇಶಗಳನ್ನು ಸಣಕಲಾಗಿಸಿವೆ.

ಮಹಾನಗರ ಪಾಲಿಕೆ ಜಾಗದಲ್ಲಿರುವವರೆಗೂ ಸಮಸ್ಯೆ: ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿಯು ತನ್ನ ಜಾಗದಲ್ಲಿರುವ ಕೊಳೆಗೇರಿ ನಿವಾಸಿಗಳಿಗೆ ಮಾತ್ರ ಹಕ್ಕುಪತ್ರಗಳನ್ನು ನೀಡುತ್ತಿದೆ. ಮಹಾನಗರ ಪಾಲಿಕೆ ಜಾಗದಲ್ಲಿರುವ ಕೊಳೆಗೇರಿಗಳ ನಿವಾಸಿಗಳಿಗೂ ಹಕ್ಕುಪತ್ರ ನೀಡುತ್ತಿಲ್ಲ. ಇದರಿಂದ ಸೌಲಭ್ಯ ಪಡೆಯಲು ತೊಂದರೆಯಾಗುತ್ತಿದೆ ಎಂದು ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ.

‘ಖಾಸಗಿ ಭೂಮಿಯಲ್ಲಿರುವ ಕೊಳೆಗೇರಿ ಪ್ರದೇಶಗಳ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವಲ್ಲಿ ಎದುರಾದ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಬೇಕು. ಆ ಪ್ರದೇಶಗಳು ನಮಗೆ ಸೇರಿದ್ದು ಎಂದು ಯಾರೂ ಮುಂದೆ ಬರುತ್ತಿಲ್ಲ. ಆದರೂ ಖಾಸಗಿ ಭೂಮಿಯಲ್ಲಿವೆ ಎಂದು ಹಕ್ಕುಪತ್ರ ನಿರಾಕರಿಸಲಾಗುತ್ತಿದೆ. ಇದು ಸರಿಯಲ್ಲ. ಮಹಾನಗರ ಪಾಲಿಕೆಯ ಜಾಗದಲ್ಲಿರುವವರಿಗೆ ಹಕ್ಕುಪತ್ರ ನೀಡಬೇಕು’ ಎಂದು ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆಯ ಅಲ್ಲಮಪ್ರಭು ನಿಂಬರ್ಗಾ ಹೇಳುತ್ತಾರೆ.

ಖಾಸಗಿ ಜಾಗದಲ್ಲಿರುವ ಕೊಳೆಗೇರಿಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡಲು ಬರುವುದಿಲ್ಲ. ಉಳಿದ ಕೊಳೆಗೇರಿಗಳ ನಿವಾಸಿಗಳಿಗೆ ಹಕ್ಕುಪತ್ರ ನೀಡಲಾಗುತ್ತಿದೆ
ಶ್ರೀಧರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಲಬುರಗಿ
1975ರಿಂದ ವಾಸಿಸುತ್ತಿರುವ ನಿವಾಸಿಗಳಿಗೆ ತಾಂತ್ರಿಕ ಕಾರಣಕ್ಕೆ ಹಕ್ಕುಪತ್ರ ನಿರಾಕರಿಸುವುದು ಸರಿಯಲ್ಲ
ಅಲ್ಲಮಪ್ರಭು ನಿಂಬರ್ಗಾ ಸ್ಲಂ ಜನಾಂದೋಲನ ಕರ್ನಾಟಕ ಸಂಘಟನೆ

ಖಾಸಗಿ ಜಾಗದಲ್ಲಿರುವ ಸ್ಲಂ

ತಾರಫೈಲ್ (ಪಶ್ಚಿಮ) ಕುಂಚಿಕೊರವರ ಓಣಿ ಹನುಮಾನ ನಗರ ಭಾಗ–1 ಹನುಮಾನ ನಗರ ಭಾಗ–2 ಇಂದಿರಾನಗರ ಹರಳಯ್ಯ ಸಮಾಜ ಓಣಿ ಸಂತ್ರಾಸವಾಡಿ ಮರಿಗಮ್ಮನ ಗುಡಿ ಓಣಿ ತಾರಫೈಲ್ (ಪೂರ್ವ) ಕನಕನಗರ ನೆಹರೂ ನಗರ ಆಶ್ರಯ ಕಾಲೊನಿ ಸಿದ್ಧಾರ್ಥ ನಗರ ಮಹಾದೇವ ನಗರ ಭವಾನಿ ನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.