ADVERTISEMENT

ಉಮೇಶ ಜಾಧವ ಕಾಂಗ್ರೆಸ್‌ ತೊರೆಯಲು ಕಾರಣವಾಗಿದ್ದ ರಸ್ತೆಗೆ ಈಗ ಭಾಗ್ಯ!

ರಾಜ್ಯ ಹೆದ್ದಾರಿ ಸುಧಾರಣೆಗೆ ₹15 ಕೋಟಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2019, 9:49 IST
Last Updated 22 ನವೆಂಬರ್ 2019, 9:49 IST
ಚಿಂಚೋಳಿ ತಾಲ್ಲೂಕು ಪಂಗರಗಾ– ಚೇಂಗಟಾ ಬಳಿ ರಾಜ್ಯ ಹೆದ್ದಾರಿ ಹದಗೆಟ್ಟಿದೆ
ಚಿಂಚೋಳಿ ತಾಲ್ಲೂಕು ಪಂಗರಗಾ– ಚೇಂಗಟಾ ಬಳಿ ರಾಜ್ಯ ಹೆದ್ದಾರಿ ಹದಗೆಟ್ಟಿದೆ   

ಚಿಂಚೋಳಿ: ಶಾಸಕರಾ ಗಿದ್ದ ಡಾ.ಉಮೇಶ ಜಾಧವ ಕಾಂಗ್ರೆಸ್‌ ಪಕ್ಷದ ಮೇಲೆ ಮುನಿಸಿಕೊಳ್ಳಲು ಕಾರಣವಾಗಿದ್ದ ರಾಜ್ಯ ಹೆದ್ದಾರಿ 125ರ ಸುಧಾರಣೆ ಕಾಮಗಾರಿಗೆ ಬಿಜೆಪಿ ಸರ್ಕಾರ ಅನುಮೋದನೆ ನೀಡಿದೆ.

ಕಮಲಾಪುರ– ಫಿರೋಜಾಬಾದ್ ರಾಜ್ಯ ಹೆದ್ದಾರಿ 125ಕ್ಕೆ ಸೇರಿದ ತಾಲ್ಲೂಕಿನ ಚಂದನಕೇರಾ– ಚೇಂಗಟಾ ಮಾರ್ಗದಲ್ಲಿ ಬರುವ ಸುಮಾರು 11 ಕಿ.ಮೀ ಉದ್ದ ಮತ್ತು 7 ಮೀಟರ್‌ ಅಗಲದ ರಸ್ತೆಯನ್ನು ನಿರ್ಮಿಸಲು ₹15 ಕೋಟಿ ವೆಚ್ಚದ ಕಾಮಗಾರಿಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ.

2017–18ರಲ್ಲಿ ಮಂಜೂರಾಗಿದ್ದ ರಸ್ತೆ ಕಾಮಗಾರಿಗೆ ಅದೇ ವರ್ಷಟೆಂಡರ್‌ ಕರೆಯಲಾಗಿತ್ತು. ನಂತರ ವಿಧಾನಸಭೆ ಚುನಾವಣೆ ಎದುರಾಗಿದ್ದರಿಂದ ಟೆಂಡರ್‌ ಅಂತಿಮಗೊಂಡಿರಲಿಲ್ಲ. ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್‌– ಜೆಡಿಎಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಹಲವು ಬಾರಿ ಸಂಬಂಧಿಸಿದ ಸಚಿವರು ಮತ್ತು ಅಧಿಕಾರಿಗಳ ಗಮನಕ್ಕೆ ತಂದರೂ ಕಾಮಗಾರಿಗೆ ಅನುಮೋದನೆ ನೀಡಿಲ್ಲ ಎಂದು ಉಮೇಶ ಜಾಧವ ಹಲವು ಬಾರಿ ಅಸಮಾಧಾನ ತೋಡಿಕೊಂಡಿದ್ದರು. ಇದು ರಾಜಕೀಯವಾಗಿ ಚರ್ಚೆಗೆ ಗ್ರಾಸವಾಗಿತ್ತು.

ADVERTISEMENT

ಇದೀಗ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪನವರ ಸರ್ಕಾರ ಯೋಜನೆಗೆ ಅನುಮೋದನೆ ನೀಡಿದೆ.15 ದಿನಗಳ ಹಿಂದೆ ಕಾಮಗಾರಿ ಆರಂಭಕ್ಕೆ ಒಪ್ಪಿಗೆ ಸಿಕ್ಕಿದೆ. ಗುತ್ತಿಗೆ ಸಂಸ್ಥೆಯ ಜತೆಗೆ ಒಪ್ಪಂದವೂ ಮಾಡಿಕೊಳ್ಳಲಾಗಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.