ADVERTISEMENT

ಸೇಡಂ | ವಕ್ಫ್‌ ವಿರುದ್ಧ 15 ಕಿ.ಮೀ ಪಾದಯಾತ್ರೆ

ಸೇಡಂ: ರೈತರ ಸಮಸ್ಯೆಗೆ ಧ್ವನಿಯಾದ ತ್ರಿಮೂರ್ತಿ ಶಿವಾಚಾರ್ಯರು, ಉಪವಾಸ ಸತ್ಯಾಗ್ರಹ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2024, 15:23 IST
Last Updated 6 ನವೆಂಬರ್ 2024, 15:23 IST
ಸೇಡಂ ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ತ್ರಿಮೂರ್ತಿ ಶಿವಾಚಾರ್ಯರು ವಕ್ಫ್‌ ಮಂಡಳಿ ವಿರುದ್ಧ ಬುಧವಾರ ಪಾದಯಾತ್ರೆ ನಡೆಸಿದರು
ಸೇಡಂ ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ತ್ರಿಮೂರ್ತಿ ಶಿವಾಚಾರ್ಯರು ವಕ್ಫ್‌ ಮಂಡಳಿ ವಿರುದ್ಧ ಬುಧವಾರ ಪಾದಯಾತ್ರೆ ನಡೆಸಿದರು   

ಸೇಡಂ: ವಿವಿಧ ಮಠ–ಮಂದಿರ ಹಾಗೂ ರೈತರ ಪಹಣಿಯಲ್ಲಿ ನಮೂದಾಗಿರುವ ವಕ್ಫ್‌ ಹಕ್ಕಿನ ಋಣವನ್ನು ತೆಗೆಯುವಂತೆ ತಾಲ್ಲೂಕಿನ ತೊಟ್ನಳ್ಳಿ ಗ್ರಾಮದ ಮಹಾಂತೇಶ್ವರ ಮಠದ ತ್ರಿಮೂರ್ತಿ ಶಿವಾಚಾರ್ಯರು ನಡೆಸಿರುವ ಪಾದಯಾತ್ರೆಗೆ ವಿವಿಧ ಗ್ರಾಮಗಳ ರೈತರು ಬೆಂಬಲ ವ್ಯಕ್ತಪಡಿಸಿ 15 ಕಿ.ಮೀ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ತಾಲ್ಲೂಕಿನ ತೊಟ್ನಳ್ಳಿ ಗ್ರಾಮದಿಂದ ಬೆಳಿಗ್ಗೆ 7 ಗಂಟೆಗೆ ಆರಂಭಗೊಂಡ ಪಾದಯಾತ್ರೆ ಮೀನಹಾಬಾಳ, ಬೀರನಳ್ಳಿ, ನೀಲಹಳ್ಳಿ ಮೂಲಕ ಸೇಡಂ ಪಟ್ಟಣದ ತಹಶೀಲ್ದಾರ್‌ ಕಚೇರಿಗೆ ಮಧ್ಯಾಹ್ನ 12.30ಕ್ಕೆ ತಲುಪಿತು. ಪ್ರತಿಭಟನೆಯುದ್ದಕ್ಕೂ ರೈತರು ಕೇಸರಿ ಶಾಲು ಧರಿಸಿ, ಓಂ ನಮಃ ಶಿವಾಯ ಮಂತ್ರ ಘೋಷ ಕೂಗಿದರು. ರೈತರು, ಮುಖಂಡರು, ವ್ಯಾಪಾರಿಗಳು, ಉದ್ಯಮಿಗಳು ಸಹ ಪ್ರತಭಟನೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಅಲ್ಲದೇ ವಿವಿಧ ಮಠ–ಮಂದಿರಗಳ ಸ್ವಾಮೀಜಿಗಳು ಸಹ ತ್ರಿಮೂರ್ತಿ ಶಿವಾಚಾರ್ಯರ ಜೊತೆ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.

ತ್ರಿಮೂರ್ತಿ ಶಿವಾಚಾರ್ಯರು ಮಾತನಾಡಿ, ‘ಮಠದ ಆಸ್ತಿಯಲ್ಲಿ ನಮೂದಾಗಿರುವ ವಕ್ಫ್‌ ಪದವನ್ನು ಸರ್ಕಾರ ರಾತ್ರೋರಾತ್ರಿ ತೆಗೆಯಲು ಸಾಧ್ಯವಾಗಿದೆ ಎಂದಾದರೆ, ಮನಸ್ಸು ಬಂದ ಹಾಗೆ ನಡೆಯುತ್ತದೆ ಎಂದರ್ಥವಾಗುತ್ತಿದೆ. ರೈತರ ಜಮೀನುಗಳಲ್ಲಿ ನಮೂದಾಗಿರುವುದನ್ನು ಸಹ ತೆಗೆದು ಹಾಕಬೇಕು. 1974–76ರಲ್ಲಿನ ಗೆಜೆಟ್ ನೋಟಿಫಿಕೇಷನ್‌ ರದ್ದುಗೊಳಿಸಬೇಕು. ಅಲ್ಲದೆ ಈ ಹಿಂದೆ ಪಹಣಿಯಲ್ಲಿ ವಕ್ಫ್‌ ಪದ ಸೇರಿಸಲು ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಪಟ್ಟುಹಿಡಿದು ಪ್ರತಿಭಟನೆಯಲ್ಲಿ ಕುಳಿತರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಬಂದ ಉಪವಿಭಾಗಾಧಿಕಾರಿ ಪ್ರಭುರೆಡ್ಡಿ ಮತ್ತು ತಹಶೀಲ್ದಾರ್ ಶ್ರೀಯಾಂಕ ಧನಶ್ರೀ ಸ್ವಾಮೀಜಿಯವರಿಗೆ ಮನವೊಲಿಸಿ ಪ್ರತಿಭಟನೆ ಕೈಬಿಡಲು ಮನವಿ ಮಾಡಿದರು. ರೈತರು ಹಾಗೂ ಸ್ವಾಮೀಜಿಯವರು ಒಪ್ಪದೆ ಸಂಬಂಧಪಟ್ಟವರನ್ನು ಸ್ಥಳಕ್ಕೆ ಕರೆಸಬೇಕು ಎಂದು ಪಟ್ಟುಹಿಡಿದರು.

ಮಾಜಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ‘ಪಹಣಿಯಗಳಲ್ಲಿ ವಕ್ಫ್‌ ಪದ ಸೇರುತ್ತಿರುವುದರಿಂದ ರೈತರು ಆತಂಕಕ್ಕೆ ಒಳಗಾಗಿದ್ದಾರೆ. ನಿತ್ಯವೂ ತಹಶೀಲ್ದಾರ್‌ ಕಚೇರಿಗೆ ಬಂದು ಪರಿಶೀಲಿಸುವಂತಹ ಪರಿಸ್ಥಿತಿ ಬಂದಿದೆ. ಸರ್ಕಾರ 1974–76ರ ಗೆಜೆಟ್ ನೋಟಿಫಿಕೇಷ್‌ನ್‌ ರದ್ದುಪಡಿಸಬೇಕು’ ಎಂದು ಒತ್ತಾಯಿಸಿದರು.

ಮಾಜಿ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ ಮಾತನಾಡಿ, ‘ರೈತರ ಜಮೀನಿನಲ್ಲಿ ವಕ್ಫ್‌ ಪದ ಹಾಕುವಾಗ ನೋಟಿಸ್‌ ನೀಡಿಲ್ಲ. ಕಾನೂನು ಉಲ್ಲಂಘಿಸಿ ಅಧಿಕಾರಿಗಳು ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿರುವುದು ಸರಿಯಲ್ಲ. ಸಚಿವರು ತಿಂಗಳೊಳಗೆ ತೆಗೆಸುವುದಾಗಿ ಭರವಸೆ ನೀಡಿದ್ದು, ತಿಂಗಳತನಕ ಕಾಯೋಣ. ಸಮಸ್ಯೆ ಇತ್ಯರ್ಥವಾಗದಿದ್ದಲ್ಲಿ ಪುನಃ ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ನೀಲಂಗಿ ಮಾತನಾಡಿ, ‘2017–18ರಲ್ಲಿ ಪಹಣಿಯಲ್ಲಿ ವಕ್ಫ್‌ ಸೇರ್ಪಡೆಯಾಗಲು ಕಾರಣರಾದ ಗ್ರಾಮ ಆಡಳಿತಾಧಿಕಾರಿ, ಕಂದಾಯ ನಿರೀಕ್ಷಕ ಮತ್ತು ತಹಶೀಲ್ದಾರ್ ವಿರುದ್ಧ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಕೊತ್ತಲ ಬಸವೇಶ್ವರ ದೇವಾಲಯದ ಸದಾಶಿವ ಸ್ವಾಮೀಜಿ, ಹಾಲಪ್ಪಯ್ಯ ವಿರಕ್ತ ಮಠದ ಪಂಚಾಕ್ಷರಿ ಸ್ವಾಮೀಜಿ, ಮಂಗಲಗಿ ಶಾಂತಸೋಮನಾಥ ಶಿವಾಚಾರ್ಯರು, ಮಳಖೇಡನ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ಮಾತನಾಡಿದರು.

ಸೇಡಂನ ಶಿವಶಂಕರೇಶ್ವರ ಮಠದ ಶಿವಶಂಕರ ಶಿವಾಚಾರ್ಯರು, ಶಿವಯ್ಯಸ್ವಾಮಿ ಬಿಬ್ಬಳ್ಳಿ, ಶಿವಕುಮಾರ ಪಾಟೀಲ, ಶಿವಕುಮಾರ ಬೋಳಶೆಟ್ಟಿ, ಶಿವಕುಮಾರ ಹಿರೇಮಠ, ಶಿವಾನಂದ ಸ್ವಾಮೀಜಿ, ವಿಜಯಕುಮಾರ ಆಡಕಿ, ಸಿದ್ದಣ್ಣ ಶೆಟ್ಟಿ, ಸಂತೋಷಿರಾಣಿ ಪಾಟೀಲ, ಶಿಲ್ಪಾ ಪಾಟೀಲ, ಬಸ್ಸಮ್ಮ ಪಾಟೀಲ, ಈರಮ್ಮ ಯಡ್ಡಳ್ಳಿ, ಸುಲೋಚನಾ ಮಠಪತಿ, ಚಂದ್ರಕಾಂತ ತೊಟ್ನಳ್ಳಿ, ಶಾಕಂಬರಿ ಬೊಮ್ನಳ್ಳಿ, ಸೂಗಪ್ಪ ರಂಜೋಳ, ನಾಗರಾಜ ಪಾಟೀಲ ತೊಟ್ನಳ್ಳಿ, ವೀರಭದ್ರಯ್ಯಸ್ವಾಮಿ ಮೀನಹಾಬಾಳ, ಗುರು ತಳಕಿನ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಎಎಸ್ಪಿ ಶ್ರೀನಿಧಿ, ಡಿವೈಎಸ್ಪಿ ಸಂಗಮನಾಥ ಹಿರೇಮಠ, ಶಂಕರಗೌಡ ಪಾಟೀಲ, ಸಿಪಿಐ ಮಹಾದೇವ ದಿಡ್ಡಿಮನಿ, ದೌಲತ್, ಪಿಎಸ್ಐ ಮಂಜುನಾಥರೆಡ್ಡಿ, ಸಂಗಮೇಶ ಅಂಗಡಿ ನೇತೃತ್ವದಲ್ಲಿ ಬಂದೋಬಸ್ತ್‌ ಮಾಡಲಾಗಿತ್ತು.

ತಪ್ಪಾಗಿ ನಮೂದು

ಕಂದಾಯ ದಾಖಲಾತಿಗಳ ಪರಿಶೀಲನೆ ವೇಳೆ ತೋರನಳ್ಳಿ ಗ್ರಾಮದ ಸರ್ವೆ ನಂ.4ರ ಬದಲಾಗಿ ತೋಟನಳ್ಳಿ ಗ್ರಾಮದ ಸರ್ವೆ ನಂಬರ್ 4ರ ಪಹಣಿ ಪತ್ರಿಕೆಯ ಕಾಲಂ 11ರಲ್ಲಿ ವಕ್ಫ್ ಆಸ್ತಿ ಎಂದು ತಪ್ಪಾಗಿ ನಮೂದು ಮಾಡಿರುವುದು ಕಂಡುಬಂದಿದೆ. ಹೀಗಾಗಿ ಸರ್ವೆ ನಂಬರ್ 4ರ ಪಹಣಿಯಲ್ಲಿ ನಮೂದು ಆಗಿದ್ದ ವಕ್ಫ್ ಆಸ್ತಿ ಹೆಸರನ್ನು ಯಾವುದೇ ಅಭ್ಯಂತರ ಇಲ್ಲದೆ ತೆಗೆದು ಹಾಕಲಾಗಿದೆ ಎಂದು ಜಿಲ್ಲಾ ವಕ್ಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ತಿಂಗಳೊಳಗೆ ವಕ್ಫ್‌ ನಮೂದು ರದ್ದತಿ’

‘ಸೇಡಂ ತಾಲ್ಲೂಕಿನಲ್ಲಿ ಜಮೀನು–ರೈತರ ಪಹಣಿಯಲ್ಲಿ ನಮೂದಾಗಿರುವ ವಕ್ಫ್‌ ಹೆಸರು ನಮೂದನ್ನು ಒಂದು ತಿಂಗಳೊಳಗೆ ರದ್ದುಪಡಿಸಲು ಪ್ರಯತ್ನ ಮಾಡಲಾಗುತ್ತದೆ. ತಹಶೀಲ್ದಾರ್ ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಅದಾಲತ್ ನಡೆಸಿ ರೈತರನ್ನು ಹಾಗೂ ಜಮೀನಿಗೆ ಸಂಬಂಧಪಟ್ಟವರ ಜೊತೆಗೆ ಮಾತನಾಡಿ ವಕ್ಫ್‌ ಪದ ತೆಗೆದುಹಾಕುವ ಕೆಲಸ ಖಂಡಿತ ಮಾಡಲಾಗುತ್ತದೆ. ರೈತರು ಆತಂಕಪಡುವ ಅವಶ್ಯಕತೆ ಇಲ್ಲ’ ಎಂದು ಸಚಿವ ಡಾ.ಶರಣಪ್ರಕಾಶ ಪಾಟೀಲ ಭರವಸೆ ನೀಡಿದರು. ‘ಸರ್ಕಾರ ರೈತರ ಪರವಾಗಿ ಬದ್ಧವಾಗಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಕ್ಫ್‌ ಕುರಿತು ಈಗಾಗಲೇ ಸಚಿವರ ಜೊತೆಗೆ ಮಾತನಾಡಿದ್ದಾರೆ. ಅನೇಕ ಸಚಿವರು ಇದರ ಕುರಿತು ವಿರೋಧವನ್ನು ವ್ಯಕ್ತಪಡಿಸಿದ್ದಾರೆ. 1974–76ರಲ್ಲಿ ಗೆಜೆಟ್ ನೋಟಿಫಿಕೇಷನ್ ಮಾಡಲಾಗಿದ್ದು ಇದನ್ನು ರುದ್ದುಗೊಳಿಸುವಂತೆ ಒತ್ತಡವಿದೆ. ಸೇಡಂ ಜನರ ಪರವಾಗಿ ಮುಖ್ಯಮಂತ್ರಿಗೆ ಮನವಿ ಮಾಡಿ ಚರ್ಚಿಸುತ್ತೇನೆ. ತಾಲ್ಲೂಕಿನ ರೈತರು ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ ತಮ್ಮ ಸಮಸ್ಯೆಗಳನ್ನು ಗಮನಕ್ಕೆ ತರಬೇಕು. ಜೊತೆಗೆ ತಾಲ್ಲೂಕು ಆಡಳಿತ ರೈತರಿಗೆ ಸಹಕರಿಸಲಿದೆ’ ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.